ಭಾರತೀಯ ಮಜ್ದೂರ್ ಸಂಘದಿಂದ ‘ಕುಟುಂಬ ಮಿಲನ’ ಕಾರ್ಯಕ್ರಮ

ಮಂಗಳೂರು: ಕೆಂಪು ಪತಾಕೆ ಹಿಡಿದುಕೊಂಡ ಕಾರ್ಮಿಕ ಸಂಘಟನೆಯವರು ಸಂಘರ್ಷಗಳನ್ನು ಮಾಡಿದರೇ ವಿನಃ ಕಾರ್ಮಿಕರ ಹಿತ ಕಾಪಾಡಲಿಲ್ಲ ಎಂದು ಭಾರತೀಯ ಮಜ್ದೂರ್ ಸಂಘದ (ಬಿಎಂಎಸ್) ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ಬಿ. ಸುರೇಂದ್ರನ್ ಆರೋಪಿಸಿದರು.
ನಗರದ ಸಂಘನಿಕೇತನದಲ್ಲಿ ಬಿಎಂಎಸ್ ರವಿವಾರ ಆಯೋಜಿಸಿದ್ದ ದ.ಕ.ಮತ್ತು ಉಡುಪಿ ಜಿಲ್ಲೆಗಳ ಕಾರ್ಯಕರ್ತರ ಕುಟುಂಬ ಮಿಲನ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಬಿಎಂಎಸ್ ಹೊಸ ದೃಷ್ಟಿಕೋನದೊಂದಿಗೆ ಕಾರ್ಯನಿರ್ವಹಿಸುತ್ತಿದೆ. ಕೋವಿಡ್ ಬಳಿಕ ಸಮಾಜದಲ್ಲಿ ಉಂಟಾಗಿ ರುವ ಬದಲಾವಣೆಗೆ ತಕ್ಕಂತೆ ಕಾರ್ಯಶೈಲಿಯನ್ನು ಬದಲಿಸಿಕೊಳ್ಳಬೇಕಾದ ಅಗತ್ಯವಿದೆ ಎಂದು ಬಿ. ಸುರೇಂದ್ರನ್ ಹೇಳಿದರು.
ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಬಿಎಂಎಸ್ ದಕ್ಷಿಣ ಕೇಂದ್ರ ಸಂಘಟನಾ ಕಾರ್ಯದರ್ಶಿ ದುರೈರಾಜ್, ಕರ್ನಾಟಕ ಘಟಕದ ಪ್ರಧಾನ ಕಾರ್ಯದರ್ಶಿ ಎಚ್.ಎಲ್. ವಿಶ್ವನಾಥ್, ಕುಟುಂಬ ಮಿಲನದ ಸ್ವಾಗತ ಸಮಿತಿಯ ಅಧ್ಯಕ್ಷ ಸತೀಶ್ ಶೆಟ್ಟಿ, ಕಾರ್ಯದರ್ಶಿ ಭಗವಾನ್ ದಾಸ್ ಬಿ.ಎನ್, ಮುಖಂಡ ರಾಜೀವನ್ ಉಪಸ್ಥಿತರಿದ್ದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕುಟುಂಬ ಮಿಲನ ಕಾರ್ಯಕ್ರಮದ ಸಂಚಾಲಕ ವಿಶ್ವನಾಥ ಶೆಟ್ಟಿ ಕಾರ್ಮಿಕರಿಗೆ ಮತ್ತು ಕಾರ್ಮಿಕ ಸಂಘಟನೆಗಳಲ್ಲಿ ದುಡಿದವರಿಗೆ ರಾಜಕಾರಣಿಗಳು ಮನ್ನಣೆ ನೀಡಿಲ್ಲ, ಈಗ ನೀಡುವುದೂ ಇಲ್ಲ ಎಂದು ಆರೋಪಿಸಿದರು.
ಆಮಂತ್ರಣ ಪತ್ರಿಕೆಯಲ್ಲಿ ಆಡಳಿತ ಪಕ್ಷದ ಸಂಸದರು, ಸಚಿವರು, ಶಾಸಕರ ಹೆಸರು ಮುದ್ರಿಸಲಾಗಿತ್ತು. ಆ ಪೈಕಿ ಬಂದಿದ್ದು ಒಬ್ಬರು ಮಾತ್ರ. ಇಂತಹ ಕಾರ್ಯಕ್ರಮಗಳಿಗೆ ಯಾರೂ ಬರುವುದಿಲ್ಲ. ನಾವು ಓಟು ತರುವವರಲ್ಲ. ಆದ್ದರಿಂದ ಅವರಿಗೂ ನಮ್ಮ ಅಗತ್ಯವಿಲ್ಲ ಅಸಮಾಧಾನ ವ್ಯಕ್ತಪಡಿಸಿದರು.
ಬಿಎಂಎಸ್ ಯಾವುದೇ ಪಕ್ಷದ ಪರವಾಗಿಲ್ಲ. ನಮ್ಮ ಸಭೆಗಳಲ್ಲಿ ನಿರ್ದಿಷ್ಟ ಪಕ್ಷಕ್ಕೆ ಮತ ಹಾಕಿ ಎಂದು ಹೇಳಿದ ಚರಿತ್ರೆಯೇ ಇಲ್ಲ ಎಂದು ವಿಶ್ವನಾಥ ಶೆಟ್ಟಿ ಸ್ಪಷ್ಟಪಡಿಸಿದರು.