ಯಕ್ಷಗಾನ ಕಲಾವಿದ ಕೊಳ್ಯೂರು ರಾಮಚಂದ್ರ ರಾವ್‌ಗೆ ಶೇಣಿ ಪ್ರಶಸ್ತಿ ಪ್ರದಾನ

ಮಂಗಳೂರು: ಶೇಣಿ ಗೋಪಾಲಕೃಷ್ಣ ಭಟ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನೀಡಲಾಗುವ ‘ಶೇಣಿ ಪ್ರಶಸ್ತಿ’ ಯನ್ನು ಹಿರಿಯ ಯಕ್ಷಗಾನ ಕಲಾವಿದ ಕೊಳ್ಯೂರು ರಾಮಚಂದ್ರ ರಾವ್‌ಗೆ ನಗರದ ಕೆನರಾ ಹೈಸ್ಕೂಲ್ ಸಭಾಂಗಣದಲ್ಲಿ ರವಿವಾರ ನಡೆದ ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಯಿತು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಕೊಳ್ಯೂರು ರಾಮಚಂದ್ರ ರಾವ್ ‘ಯಕ್ಷಗಾನ ಪಾತ್ರಧಾರಿಗಳಿಗೆ ಪುರಾಣದ ಅನುಭವ, ಪಾತ್ರದ ಗೌರವ ಹಾಗೂ ಪ್ರೇಕ್ಷಕರ ಪ್ರತಿಕ್ರಿಯೆಯ ಬಗ್ಗೆ ವಿಶೇಷ ಪ್ರಜ್ಞೆ ಇರಬೇಕು. ಹಿರಿಯರು, ವಿದ್ವಾಂಸರು, ಶ್ರೇಷ್ಠರ ಜತೆಗೆ ಯಕ್ಷಗಾನ ಸೇವೆ ಸಲ್ಲಿಸುವ ಭಾಗ್ಯ ದೊರೆತಿರುವುದೇ ನನ್ನ ಪಾಲಿಗೆ ಸೌಭಾಗ್ಯ ವಾಗಿದೆ. ಅದರಲ್ಲೂ ಶೇಣಿ ಪ್ರಶಸ್ತಿಯು ನನ್ನ ಪಾಲಿನ ಅವಿಸ್ಮರಣೀಯ ಕ್ಷಣ ಎಂದರು.
ಹಿರಿಯ ವಿದ್ವಾಂಸ ಡಾ.ಎಂ.ಪ್ರಭಾಕರ ಜೋಷಿ ಅಭಿನಂದನಾ ಭಾಷಣ ಮಾಡಿದರು. ಶೇಣಿ ಗೋಪಾಲಕೃಷ್ಣ ಭಟ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಎಂ.ಆರ್. ವಾಸುದೇವ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಸ್. ಯಡಪಡಿತ್ತಾಯ ಅತಿಥಿಯಾಗಿ ಭಾಗವಹಿಸಿದ್ದರು.
ವೇದಿಕೆಯಲ್ಲಿ ಶೇಣಿ ಗೋಪಾಲಕೃಷ್ಣ ಭಟ್ ಚಾರಿಟೇಬಲ್ ಟ್ರಸ್ಟ್‌ನ ಗೌರವಾಧ್ಯಕ್ಷ ಹರಿಕೃಷ್ಣ ಪುನರೂರು, ಕೆನರಾ ಕಾಲೇಜಿನ ಸಂಚಾಲಕ ಎಂ.ಜಗನ್ನಾಥ ಕಾಮತ್, ಬೋಳ ವಂಜಾರಕಟ್ಟೆ ಆಂಗ್ಲಮಾಧ್ಯಮ ಶಾಲೆಯ ಸಂಚಾಲಕ ಅಕ್ಷಯ್ ಅಡ್ಯಂತಾಯ, ಎಸ್‌ಬಿಐ ಆರ್‌ಬಿಒ ಪ್ರಾದೇಶಿಕ ವ್ಯವಸ್ಥಾಪಕ ಉದಯ್ ಕುಮಾರ್ ಬಿ.ವಿ. ಉಪಸ್ಥಿತರಿದ್ದರು.
ಟ್ರಸ್ಟ್‌ನ ಉಪಾಧ್ಯಕ್ಷ ಕೂಡ್ಲು ಮಹಾಬಲ ಶೆಟ್ಟಿ ಸ್ವಾಗತಿಸಿದರು. ಕೋಶಾಧಿಕಾರಿ ಜಿ.ಕೆ.ಸೇರಾಜೆ ಕಾರ್ಯಕ್ರಮ ನಿರೂಪಿಸಿದರು. ವಾಣಿ ಸನ್ಮಾನ ಪತ್ರ ವಾಚಿಸಿದರು.