ಭಾರತ ರತ್ನ ಅಬುಲ್ ಕಲಾಂ ಆಝಾದ್‌ರ ದೂರದೃಷ್ಟಿಯ ಯೋಜನೆಗಳು ಉನ್ನತ ಶಿಕ್ಷಣಕ್ಕೆ ಅಡಿಪಾಯವಾಗಿದೆ: ಡಾ. ಬೀರಾನ್ ಮೊಯ್ದಿನ್

ಬಂಟ್ವಾಳ : ಭಾರತದ ಮೊದಲ ಶಿಕ್ಷಣ ಸಚಿವರೂ, ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರರೂ ಆದ ಭಾರತ ರತ್ನ ಮೌಲಾನ ಅಬುಲ್ ಕಲಾಂ ಆಝಾದ್ ಅವರು ದೂರದೃಷ್ಟಿಯಿಂದ ಅಂದು ಅನುಷ್ಠಾನ ಮಾಡಿದ ಶೈಕ್ಷಣಿಕ ಯೋಜನೆಗಳು ಮತ್ತು ಸಂಸ್ಥೆಗಳು ಇಂದಿನ ಉನ್ನತ ಶಿಕ್ಷಣದ ಬೆಳವಣಿಗೆಗೆ ಅಡಿಪಾಯವಾಗಿದೆ ಎಂದು ಬೆಂಗಳೂರಿನ ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದ ಕುಲಸಚಿವ ಡಾ. ಬೀರಾನ್ ಮೊಯ್ದಿನ್ ಬಿ.ಎಂ ಹೇಳಿದರು.
ಸಮನ್ವಯ ಶಿಕ್ಷಕರ ಸಂಘ ದಕ್ಷಿಣ ಕನ್ನಡ ಇದರ ವತಿಯಿಂದ ರವಿವಾರ ಮೆಲ್ಕಾರ್ ಮಹಿಳಾ ಕಾಲೇಜಿನಲ್ಲಿ ನಡೆದ ರಾಷ್ಟ್ರೀಯ ಶಿಕ್ಷಣ ದಿನಾಚರಣೆಯಲ್ಲಿ ಮೌಲಾನ ಅಬುಲ್ ಕಲಾಂ ಆಝಾದ್ ಬದುಕು, ಶಿಕ್ಷಣ ಮತ್ತು ಸಾಧನೆ ಎಂಬ ಪುಸ್ತಕವನ್ನು ಬಿಡುಗಡೆ ಮಾಡಿ ಮಾತನಾಡುತ್ತಿದ್ದರು.
ಆಝಾದ್ ಅವರು ಅಂದು ಈ ದೇಶದ ಉನ್ನತ ಶಿಕ್ಷಣದ ಕನಸನ್ನು ಕಂಡಿದ್ದರು ಮತ್ತು ಅದಕ್ಕಾಗಿ ಹಲವು ಪ್ರತಿಷ್ಠಿತ ಸರಕಾರಿ ಸಂಸ್ಥೆಗಳನ್ನು ಹುಟ್ಟು ಹಾಕಿದ್ದರು. ತಾಂತ್ರಿಕ ಶಿಕ್ಷಣ ಸಂಸ್ಥೆಗಳು, ವಿಶ್ವವಿದ್ಯಾಲಯ ಧನಸಹಾಯ ಆಯೋಗ ಇವು ಅವರ ದೂರದೃಷ್ಟಿಯ ಕೊಡುಗೆಗಳಾಗಿವೆ ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಅಳೇಕಲ ಮದನಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಟಿ. ಇಸ್ಮಾಯಿಲ್ ಅವರು, ಪಾಠ ಪ್ರವಚನದ ಜೊತೆಯಲ್ಲಿ ವಿದ್ಯಾರ್ಥಿಗಳ ನೋವು ನಲಿವುಗಳಿಗೆ ಸ್ಪಂದಿಸುವ ಶಿಕ್ಷಕರು ಸದಾ ಕಾಲ ನೆನಪಿನಲ್ಲಿರುತ್ತಾರೆ ಎಂದು ಹೇಳಿದರು.
ಸಮನ್ವಯ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಅಬ್ದುಲ್ ರಝಾಕ್ ಅನಂತಾಡಿ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು.
ವೇದಿಕೆಯಲ್ಲಿ ಮೆಲ್ಕಾರ್ ಮಹಿಳಾ ಕಾಲೇಜಿನ ಪ್ರಾಂಶುಪಾಲ ಅಬ್ದುಲ್ ಲತೀಫ್ ಬಿ.ಕೆ, ದ.ಕ. ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘದ ಕಾರ್ಯದರ್ಶಿ ಯೂಸುಫ್ ವಿಟ್ಲ, ಸಂಘದ ಜಿಲ್ಲಾ ಕಾರ್ಯದರ್ಶಿ ಮೊಹಮ್ಮದ್ ಮನಾಝಿರ್ ಉಪಸ್ಥಿತರಿದ್ದರು.
ರಾಷ್ಟ್ರೀಯ ಶಿಕ್ಷಣ ದಿನಾಚರಣೆಯ ಅಂಗವಾಗಿ ಆಹ್ವಾನಿತ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದ ರಸಪ್ರಶ್ನೆಯನ್ನು ಮತ್ತು ಶಿಕ್ಷಕರಿಗೆ ಆಶು ಅಭಿನಯ ಸ್ಪರ್ಧೆಯನ್ನು ಏರ್ಪಡಿಸಲಾಯಿತು.
ಸೇವಾ ನಿವೃತ್ತರಾದ ದೈಹಿಕ ಶಿಕ್ಷಣ ಶಿಕ್ಷಕ ಹೈದರ್ ಪಡಂಗಡಿ, ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಅಬ್ದುಲ್ ಮಜೀದ್ ಪಾವೂರು, ತಾಲೂಕು ಮಟ್ಟದ ವಿಶೇಷ ಸೇವಾ ಪ್ರಶಸ್ತಿ ಪುರಸ್ಕೃತ ಅಬ್ದುಲ್ ಖಾದರ್ ಮಾಸ್ಟರ್ ಇವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ಸಮನ್ವಯ ಶಿಕ್ಷಕರ ಸಂಘದ ದಶಮಾನೋತ್ಸವದ ಅಂಗವಾಗಿ ಸಂಘದ ಪೂರ್ವಾಧ್ಯಕ್ಷರಾದ ಕೆ.ಎಂ.ಕೆ. ಮಂಜನಾಡಿ , ಬಿ.ಎಂ. ತುಂಬೆ, ಸಮೀಯುಲ್ಲಾ, ಯೂಸುಫ್ ವಿಟ್ಲ ಇವರನ್ನು ಗೌರವಿಸಲಾಯಿತು. ಕಾರ್ಯಕಾರಿ ಸಮಿತಿಯ ಎಲ್ಲಾ ಸದಸ್ಯರನ್ನು ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು.
ಹಿರಿಯ ಶಿಕ್ಷಕ ಮೊಹಮ್ಮದ್ ತುಂಬೆ ಪ್ರಸ್ತಾವನೆಗೈದರು. ಸಂಘದ ಬಂಟ್ವಾಳ ಘಟಕಾಧ್ಯಕ್ಷ ಅಬ್ದುಲ್ ಮಜೀದ್ ಎಸ್, ಸದಸ್ಯೆ ಸುರಯ್ಯ, ಅಕ್ಬರ್ ಅಲಿ, ಶರೀಫ್ ಕರಾಯ, ಅಸ್ಮ, ಮೊಹಮ್ಮದ್ ಮುಸ್ತಫಾ, ಕೋಶಾಧಿಕಾರಿ ಶಾಹಿದ್ ವಳವೂರು ಅವರು ವಿವಿಧ ಕಾರ್ಯಕ್ರಮಗಳನ್ನು ನಿರ್ವಹಿಸಿದರು. ಶಿಕ್ಷಕ ಮನಾಝಿರ್ ಸ್ವಾಗತಿಸಿದರು. ಸಮೀಯುಲ್ಲಾ ವಗ್ಗ ವಂದಿಸಿದರು.
ಬಹುಮಾನ ವಿಜೇತರ ವಿವರ
ರಸಪ್ರಶ್ನೆ: ಪ್ರಥಮ - ತೌಹೀದ್ ಆಂಗ್ಲ ಮಾಧ್ಯಮ ಶಾಲೆ, ಬಂಟ್ವಾಳ, ದ್ವಿತೀಯ - ಆಯಿಷ ಬಾಲಕಿಯರ ಪ್ರೌಢ ಶಾಲೆ, ಆತೂರು, ತೃತೀಯ - ಹೊರೈಝನ್ ಪಬ್ಲಿಕ್ ಸ್ಕೂಲ್, ವಿಟ್ಲ.
ಆಶು ಅಭಿನಯ : ಶಿಕ್ಷಕರ ವಿಭಾಗ
ಪ್ರಥಮ : ಮಹಮ್ಮದ್ ಕಲ್ಲರಕೋಡಿ, ದ್ವಿತೀಯ : ಹಮೀದ್ ಕೆ ಮಾಣಿ, ತೃತೀಯ: ಮುಹಮ್ಮದ್ ಮುಸ್ತಫಾ.
ಆಶು ಅಭಿನಯ: ಶಿಕ್ಷಕಿಯರ ವಿಭಾಗ
ಪ್ರಥಮ: ಮೈನಾಝ್, ಯನೆಪೊಯ ಸ್ಕೂಲ್, ದ್ವಿತೀಯ : ಆಯಿಷ, ಎಮಿನೆಂಟ್ ಮೆಲ್ಕಾರ್ , ತೃತೀಯ : ನಾಝಿಯ, ಜೆಮ್ ಸ್ಕೂಲ್.
ಪ್ರಬಂಧ ಸ್ಪರ್ಧೆ
ಪ್ರಥಮ : ಎ ಎಚ್ ನಾಸಿರ್, ಬಾಮಿ ಸ್ಕೂಲ್, ದ್ವಿತೀಯ : ಹಾರಿಸ್ ಬಾಂಬಿಲ, ಅಲ್ ಖಾದಿಸಾ ಸ್ಕೂಲ್.







