ತಮಿಳುನಾಡಿನಲ್ಲಿ ಭಾರೀ ಮಳೆ: ಚೆನ್ನೈ,ಕಾವೇರಿ ನದಿ ಮುಖಜ ಪ್ರದೇಶ ಜಲಾವೃತ

ಚೆನ್ನೈ,ನ.13: ವಾರಾಂತ್ಯದಲ್ಲಿ ತಮಿಳುನಾಡಿನ ವಿವಿಧೆಡೆಗಳಲ್ಲಿಯ ಮಳೆಯ ಅಬ್ಬರ ಮುಂದುವರಿದಿದ್ದು,ರವಿವಾರ ಚೆನ್ನೈನ ಹಲವು ಭಾಗಗಳು ಜಲಾವೃತಗೊಂಡು ವಾಹನಗಳ ಸಂಚಾರಕ್ಕೆ ವ್ಯತ್ಯಯವುಂಟಾಗಿದೆ. ರವಿವಾರ ತಮಿಳುನಾಡು,ಪುದುಚೇರಿ,ಕಾರೈಕಲ್,ಕೇರಳ,ದಕ್ಷಿಣ ಕರಾವಳಿ ಆಂಧ್ರಪ್ರದೇಶ,ರಾಯಲಸೀಮಾ ಮತ್ತು ಲಕ್ಷದ್ವೀಪಗಳಲ್ಲಿ ಅಲ್ಲಲ್ಲಿ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹಮಾಮಾನ ಇಲಾಖೆಯು ಮುನ್ಸೂಚನೆಯನ್ನು ನೀಡಿತ್ತು.
ಸೋಮವಾರದಿಂದ ಮಳೆಯ ಪ್ರಮಾಣ ಗಣನೀಯವಾಗಿ ಇಳಿಯಲಿದೆ ಎಂದೂ ಅದು ತಿಳಿಸಿದೆ. ಕಾವೇರಿ ಮುಖಜಭೂಮಿ ಜಿಲ್ಲೆಯಾಗಿರುವ ಮೈಲಾದುತುರೈನ ಸಿರಕಳಿಯಲ್ಲಿ ಶನಿವಾರ ವ್ಯಾಪಕ ಮಳೆಯಾಗಿದ್ದು,ಕೃಷಿ ಬೆಳೆಗೆ ಅಪಾರ ಹಾನಿಯುಂಟಾಗಿದೆ. ಪ್ರದೇಶದಲ್ಲಿ ವಿದ್ಯುತ್ ಪೂರೈಕೆಗೂ ವ್ಯತ್ಯಯವುಂಟಾಗಿದೆ. ಮೈಲಾದುತುರೈ ಸೇರಿದಂತೆ 24 ಜಿಲ್ಲೆಗಳಲ್ಲಿಯ 45,800 ಹೆಕ್ಟೇರ್‌ಗೂ ಅಧಿಕ ಭೂಮಿಯಲ್ಲಿ ಬೆಳೆದಿದ್ದ ಭತ್ತದ ಪೈರು ನೀರಿನಲ್ಲಿ ಮುಳುಗಿದೆ. ರವಿವಾರದವರೆಗೆ ಏಳು ಜಿಲ್ಲೆಗಳ ಒಟ್ಟು 16,000ಕ್ಕೂ ಅಧಿಕ ಜನರನ್ನು 38 ಪರಿಹಾರ ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ.





