ಪಂಚಮಸಾಲಿ ಸಮಾಜದ ಋಣ ನಿಮ್ಮ ಮೇಲಿದ್ದರೆ 2ಎ ಮೀಸಲಾತಿ ಘೋಷಿಸಿ: ಸಿಎಂಗೆ ಬಸವ ಜಯಮೃತ್ಯುಂಜಯ ಸ್ವಾಮೀಜಿ ಆಗ್ರಹ

ಬೆಂಗಳೂರು, ನ.13: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮೇಲೆ ಇನ್ನೂ ನಂಬಿಕೆಯನ್ನಿಟ್ಟಿದ್ದು, ಪಂಚಮಸಾಲಿ ಸಮಾಜದ ಋಣ ನಿಮ್ಮ ಮೇಲೆ ಇರುವುದೇ ಸತ್ಯವಾದರೇ ನಮಗೆ 2ಎ ಮೀಸಲಾತಿ ಘೋಷಣೆ ಮಾಡಬೇಕೆಂದು ಕೂಡಲಸಂಗಮ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಆಗ್ರಹಿಸಿದ್ದಾರೆ.
ರವಿವಾರ ಬೆಳಗಾವಿ ಜಿಲ್ಲೆಯ ಗೋಕಾಕ್ ನಗರದ ನ್ಯೂ ಇಂಗ್ಲಿಷ್ ಶಾಲಾ ಆವರಣದಲ್ಲಿ ಅಖಿಲ ಭಾರತ ಪಂಚಮಸಾಲಿ ಮಹಾಸಭಾದ ಆಶ್ರಯದಲ್ಲಿ ಮತ್ತು ಕೂಡಲಸಂಗಮ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ನಡೆದ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನನಾಡಿದರು.
ಪಂಚಮಸಾಲಿ ಸಮಾಜದ ಮೀಸಲಾತಿಗೆ ಸಂಬಂಧಿಸಿದಂತೆ ಡಿ.12ರಂದು ಬೆಂಗಳೂರಿನಲ್ಲಿ 25 ಲಕ್ಷ ಜನರನ್ನು ಸೇರಿಸಿ ವಿರಾಟ ಶಕ್ತಿ ಪ್ರದರ್ಶನ ಮಾಡುತ್ತೇವೆ. ಈ ಸಂದರ್ಭದಲ್ಲಿ ಮೀಸಲಾತಿ ಕೊಟ್ಟರೆ ಸನ್ಮಾನಿಸುತ್ತೇವೆ. ಕರದಂಟು ತಿನ್ನಿಸಿ, ಶಾಲು ಹೊದಿಸಿ ನಿಮಗೆ ಕಲ್ಲು ಸಕ್ಕರೆಯಿಂದ ತುಲಾಭಾರ ಮಾಡುತ್ತೇವೆ ಎಂದು ತಿಳಿಸಿದರು.
ಪಂಚಮಸಾಲಿ ಸಮುದಾಯದ ಮೀಸಲಾತಿಗೆ ಸಂಬಂಧಿಸಿದಂತೆ ಈಗಾಗಲೇ ಸಾವಿರಾರು ಕಿಮೀ ಪಾದಯಾತ್ರೆ ಮಾಡಿ ಹಕ್ಕೊತ್ತಾಯ ಮಾಡಿದರೂ ಸರಕಾರ ಸ್ಪಂದಿಸಲಿಲ್ಲ. ಅಲ್ಲದೆ, ಹತ್ತು ಲಕ್ಷ ಜನ ಸೇರಿಸಿ ಬೆಂಗಳೂರಲ್ಲಿ ಸಮಾವೇಶ ಮಾಡಿದರೂ ಸರಕಾರಕ್ಕೆ ನಮ್ಮ ಕೂಗು ಕೇಳಲಿಲ್ಲ. ಅಲ್ಲದೆ, ಅಂದಿನ ಸಿಎಂ ಬಿಎಸ್‍ವೈ ಅವರು ಆರು ತಿಂಗಳಲ್ಲಿ ಮೀಸಲಾತಿ ಕೋಡುವುದಾಗಿ ಹೇಳಿದ್ದರು. ಬಳಿಕ ಅವರೇ ಸಿಎಂ ಸ್ಥಾನದಿಂದ ಹೊರಟು ಹೋದರು ಎಂದರು.
ಬಳಿಕ ಬಂದ ಸಿಎಂ ಬಸವರಾಜ ಬೊಮ್ಮಾಯಿ ಅವರು 3 ತಿಂಗಳ ಕಾಲಾವಕಾಶ ಕೇಳಿ ಮಾತು ತಪ್ಪಿದರು. ಇದಾದ ಬಳಿಕ ಬೊಮ್ಮಾಯಿ ನಿವಾಸದ ಎದುರು ಹೋರಾಟ ಮಾಡಿದ್ದೇವೆ. ಸರಕಾರದ ವಿಳಂಬ ನೀತಿಯಿಂದ ನಮಗೆಲ್ಲ ನೋವಾಗಿದೆ ಎಂದು ಹೇಳಿದರು.
► ಈರಣ್ಣ ಕಡಾಡಿ ಕಾರಿನ ಮೇಲಿನ ದಾಳಿಗೆ ಖಂಡನೆ
ಪಂಚಮಸಾಲಿ ಸಮಾಜದ ಗಣ್ಯ ನಾಯಕ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರ ಕಾರಿನ ಮೇಲೆ ದಾಳಿ ಮಾಡಿ ಹಲ್ಲೆಗೆ ಪ್ರಯತ್ನ ಮಾಡಿದ್ದಾರೆ. ತಮ್ಮ ರಾಜಕೀಯಕ್ಕೆ ಮುಗ್ಧ ಜನರನ್ನು ಬಳಸಿಕೊಂಡಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ವಿರುದ್ಧ ಕೂಡಲಸಂಗಮ ಬಸವ ಜಯಮೃತ್ಯುಂಜ ಸ್ವಾಮೀಜಿ ಪರೋಕ್ಷವಾಗಿ ಕಿಡಿಕಾರಿದ್ದಾರೆ.







