ಬಂದೂಕು ಸಂಸ್ಕೃತಿಗೆ ಪಂಜಾಬ್ ಸರಕಾರ ನಿಷೇಧ

ಚಂಡಿಗಢ, ನ. 13: ಪಂಜಾಬ್ ಸರಕಾರ ಶಸ್ತ್ರಾಸ್ತ್ರ ನಿಯಮವನ್ನು ಕಠಿಣಗೊಳಿಸುವ ಮೂಲಕ ರಾಜ್ಯದ ಕುಖ್ಯಾತ ಬಂದೂಕು ಸಂಸ್ಕೃತಿಗೆ ಅಂತ್ಯ ಹಾಡಿದೆ.
ಆನ್‌ಲೈನ್ ಹಾಗೂ ಆಫ್ ಲೈನ್‌ನಲ್ಲಿ ಶಸ್ತ್ರಾಸ್ತ್ರಗಳ ಸಾರ್ವಜನಿಕ ಪ್ರದರ್ಶನ ನಿಷೇಧ ಸೇರಿದಂತೆ ಬಂದೂಕಿನ ಮಾಲಕತ್ವ ಹಾಗೂ ಪ್ರದರ್ಶನಕ್ಕೆ ಸಂಬಂಧಿಸಿ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಕಟ್ಟು ನಿಟ್ಟಿನ ಸೂಚನೆ ನೀಡಿದ್ದಾರೆ. ಶಸ್ತ್ರಾಸ್ತ್ರಗಳು ಅಥವಾ ಹಿಂಸಾಚಾರವನ್ನು ವೈಭವೀಕರಿಸುವ ಹಾಡಿಗೆ ಕಡ್ಡಾಯ ನಿಷೇಧ ಹೇರಿದ್ದಾರೆ.
ರಾಜ್ಯ ಸರಕಾರ ನೀಡಿದ ಹೊಸ ಸೂಚನೆಗಳ ಪ್ರಕಾರ, ಇದುವರೆಗೆ ನೀಡಲಾದ ಶಸ್ತ್ರಾಸ್ತ್ರ ಪರವಾನಿಗೆಗಳನ್ನು ಮುಂದಿನ ಮೂರು ತಿಂಗಳೊಳಗೆ ಮರು ಆಮೂಲಾಗ್ರ ಪರಿಶೀಲನೆ ನಡೆಸಲಾಗುತ್ತದೆ. ಬಂದೂಕು ಇರಿಸಿಕೊಳ್ಳಲು ಬಲವಾದ ಕಾರಣ ಇದೆ ಎಂದು ಜಿಲ್ಲಾಧಿಕಾರಿ ವೈಯುಕ್ತಿಕವಾಗಿ ತೃಪ್ತರಾಗದ ಹೊರತು ಹೊಸ ಪರವಾನಿಗೆ ನೀಡಲಾಗುವುದಿಲ್ಲ.
ಮಾನವ ಜೀವಕ್ಕೆ ಅಥವಾ ಇತರರ ವೈಯುಕ್ತಿಕ ಸುರಕ್ಷೆಗೆ ಅಪಾಯ ಉಂಟು ಮಾಡುವ ಅಜಾಗರೂಕತೆಯ ಶಸ್ತ್ರಾಸ್ತ್ರಗಳ ಬಳಕೆ ಅಥವಾ ಸಂಭ್ರಮಕ್ಕಾಗಿ ಗುಂಡು ಹಾರಿಸುವುದು ಶಿಕ್ಷಾರ್ಹ ಅಪರಾಧವಾಗಿದೆ. ನಿಯಮ ಉಲ್ಲಂಘಿಸುವವರ ವಿರುದ್ಧ ಪ್ರಕರಣ ದಾಖಲಾಗಲಿದೆ.
ಶಸ್ತ್ರಾಸ್ತ್ರಗಳ ವೈಭವೀಕರಣ ಹಾಗೂ ಕಾನೂನು ಬಾಹಿರ ಸ್ವಾಧೀನ ತಡೆಯಲು ವಿವಿಧ ಪ್ರದೇಶಗಳಲ್ಲಿ ಯಾದೃಚ್ಛಿಕ ಪರಿಶೀಲನೆ ನಡೆಯಲಿದೆ.
ಯಾವುದೇ ಸಮುದಾಯ ವಿರುದ್ಧ ದ್ವೇಷ ಭಾಷಣ ಮಾಡುವವರ ವಿರುದ್ಧ ಪೊಲೀಸ್ ಪ್ರಕರಣ ದಾಖಲಿಸಲಾಗುವುದು ಹಾಗೂ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಸರಕಾರದ ಸೂಚನೆ ತಿಳಿಸಿದೆ.





