ಕೋವಿಡ್ ಬಳಿಕ ಕರ್ನಾಟಕದಲ್ಲಿ ಮಕ್ಕಳ ಮರಣ ದರ ಹೆಚ್ಚಳ ಸಾಧ್ಯತೆ: ಅಂಕಿ ಅಂಶ
ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಸಾಂಕ್ರಾಮಿಕ ಬಾಧಿಸಿದ್ದ ಎರಡು ವರ್ಷಗಳಲ್ಲಿ ಇಳಿಕೆ ದಾಖಲಿಸಿದ್ದ ಮಕ್ಕಳ ಮರಣ ಪ್ರಮಾಣ ಇದೀಗ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು timesofindia.com ವರದಿ ಮಾಡಿದೆ.
ಈ ಹಣಕಾಸು ವರ್ಷದ ಮೊದಲ ಆರು ತಿಂಗಳಲ್ಲಿ ನವಜಾತ ಶಿಶುಗಳ ಪ್ರಮಾಣ ಈಗಾಗಲೇ 5 ಸಾವಿರವನ್ನು ದಾಟಿದೆ. ಇಡೀ ವರ್ಷದಲ್ಲಿ ಇದು 10 ಸಾವಿರವನ್ನು ದಾಟುವ ನಿರೀಕ್ಷೆ ಇದೆ.
ಆರೋಗ್ಯ ನಿರ್ವಹಣೆ ಮಾಹಿತಿ ವ್ಯವಸ್ಥೆಯ ಅಂಕಿ ಅಂಶಗಳ (health management information system of the health department) ಪ್ರಕಾರ, ರಾಜ್ಯದಲ್ಲಿ ಸೆಪ್ಟೆಂಬರ್ 30ರವರೆಗೆ ಐದು ವರ್ಷಕ್ಕಿಂತ ಕೆಳಗಿನ ವಯಸ್ಸಿನ 5167 ಮಕ್ಕಳು ಮೃತಪಟ್ಟಿದ್ದಾರೆ. ಈ ಪೈಕಿ 3648 ನವಜಾತ ಶಿಶುಗಳು ಅಂದರೆ ಒಂದು ತಿಂಗಳಿಗಿಂತ ಕಡಿಮೆ ಅವಧಿಯ ಶಿಶುಗಳು ಸೇರಿವೆ.
2020-21ರಲ್ಲಿ ಐದು ವರ್ಷಕ್ಕಿಂತ ಕೆಳಗಿನ ಮಕ್ಕಳ ಸಾವಿನ ಸಂಖ್ಯೆ 9050 ಆಗಿತ್ತು. ಸಾಂಕ್ರಾಮಿಕಕ್ಕಿಂತ ಹಿಂದಿನ ಎರಡು ವರ್ಷಗಳಲ್ಲಿ ರಾಜ್ಯದಲ್ಲಿ ಕ್ರಮವಾಗಿ 11 ಸಾವಿರ ಹಾಗೂ 13 ಸಾವಿರ ಮಕ್ಕಳು ಮೃತಪಟ್ಟಿದ್ದರು.
ಕೋವಿಡ್ ಅವಧಿಯಲ್ಲಿ ಮಕ್ಕಳ ಸಾವಿನ ಸಂಖ್ಯೆ ಕಡಿಮೆಯಾಗಿದೆ ಎಂಬ ಅಂಕಿ ಅಂಶವನ್ನು ಆರೋಗ್ಯ ಕಾರ್ಯಕರ್ತೆ ಅಖಿಲಾ ವಾಸನ್ ಪ್ರಶ್ನಿಸಿದ್ದಾರೆ. ಮಕ್ಕಳ ಲಸಿಕೆ ಕಾರ್ಯಕ್ರಮವೂ ಕುಂಠಿತವಾಗಿದ್ದು, ಅಪೌಷ್ಟಿಕ ಮಕ್ಕಳ ಸಂಖ್ಯೆ ಹೆಚ್ಚಿರುವಾಗ ಸಾವಿನ ಸಂಖ್ಯೆ ಕಡಿಮೆಯಾಗಿರುವುದು ಹೇಗೆ ಎನ್ನುವುದು ಅವರ ಪ್ರಶ್ನೆ. ಈ ಬಗ್ಗೆ timesofindia.com ವರದಿ ಮಾಡಿದೆ.