ಮಂಗಳೂರು: ಶೆಫರ್ಡ್ಸ್ ಇಂಟರ್‌ನ್ಯಾಶನಲ್ ಅಕಾಡಮಿಯ ವಾರ್ಷಿಕ ಕ್ರೀಡಾಕೂಟ

ಮಂಗಳೂರು, ನ.13: ನಗರದ ದಿ ಶೆಫರ್ಡ್ಸ್ ಇಂಟರ್‌ನ್ಯಾಶನಲ್ ಅಕಾಡಮಿಯ ವಾರ್ಷಿಕ ಕ್ರೀಡಾಕೂಟವು ನ.12ರಂದು ಮಂಗಳಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿತ್ತು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕರಾವಳಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಹಾಗೂ ದ.ಕ. ಜಿಲ್ಲಾ ಬ್ಯಾಡ್ಮಿಂಟನ್ ಅಸೋಸಿಯೇಶನ್ ನ ಖಜಾಂಚಿ ಎ.ಎಸ್.ವೆಂಕಟೇಶ್ ಬಲೂನ್ ಗಳನ್ನು ಹಾರಿ ಬಿಡುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.
ಶಾಲಾ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಶಾಲಾ ನಾಯಕ ಅಹ್ಸನ್ ಹಸನ್ ಮತ್ತು ನಾಯಕಿ ನೂಮಾ ಪ್ರತಿಜ್ಞಾ ವಿಧಿ ಬೋಧಿಸಿದರು. ಶಾಲಾ ಧ್ವಜಾರೋಹಣದ ಬಳಿಕ ಕ್ರೀಡಾ ಚಟುವಟಿಕೆಗಾಗಿ ವಿಂಗಡಿಸಲಾದ ವಿದ್ಯಾರ್ಥಿಗಳ ಎರಡು ತಂಡಗಳಾದ ಕ್ಯಾಪೆಲ್ಲಾ ಮತ್ತು ಸಿರಿಯಸ್ ಪಥ ಸಂಚಲನ ನಡೆಸಿದವು. ಪಥ ಸಂಚಲನದಲ್ಲಿ ಸಿರಿಯಸ್ ತಂಡವು ಪ್ರಥಮ ಸ್ಥಾನ ಗಳಿಸಿತು.
ಬಳಿಕ ನಡೆದ ವಿವಿಧ ಆಟೋಟ ಸ್ಪರ್ಧೆಗಳಲ್ಲಿ ಕ್ಯಾಪೆಲ್ಲಾ ತಂಡ ಸಮಗ್ರ ಚಾಂಪಿಯನ್ ಆಗಿ ಹೊರಹೊಮ್ಮಿತು.
ವಿಜೇತರಿಗೆ ಮುಖ್ಯ ಅತಿಥಿ ಎ.ಎಸ್.ವೆಂಕಟೇಶ್, ಟ್ರಸ್ಟಿಗಳಾದ ನೌಶಾದ್ ಎ.ಕೆ., ಮುಹಮ್ಮದ್ ರಿಝ್ವಾನ್, ಗೌರವ ಅತಿಥಿ ತಸ್ಲೀಮ್ ಮತ್ತು ಪ್ರಾಂಶುಪಾಲೆ ಲುಬ್ನಾ ಬಾನು ಬಹುಮಾನಗಳನ್ನು ವಿತರಿಸಿದರು.
ಇದೇವೇಳೆ ಇತ್ತೀಚೆಗೆ ಉಡುಪಿಯಲ್ಲಿ ನಡೆದ ರಾಷ್ಟ್ರ ಮಟ್ಟದ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಪ್ರಶಸ್ತಿ ಗಳಿಸಿ ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿರುವ 11 ವಿದ್ಯಾರ್ಥಿಗಳನ್ನು ಸನ್ಮಾನಿಸಿ, ಅವರಿಗೆ ಟ್ರೋಫಿ ಹಾಗೂ ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು.
ಶಾಹಿನಾಝ್ ಸ್ವಾಗತಿಸಿದರು.
ಕ್ರೀಡಾಕೂಟವನ್ನು ಸುಮಯ್ಯ ಶೇಖ್, ಸಬಾ ಸುಲ್ತಾನಾ ಮತ್ತು ಮಾಂಟೆಸ್ಸರಿ ಕೋ-ಆರ್ಡಿನೇಟರ್ ಸುಮಯ್ಯ ಫರ್ಹೀನ್ ನಿರ್ವಹಿಸಿದರು. ಶಾಲೆಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಸಹಕರಿಸಿದರು.