'ಕಲ್ಯಾಣ ಕರ್ನಾಟಕ' ಭಾಗದಲ್ಲಿ 2 ಸಾವಿರ ಶಾಲಾ ಕೊಠಡಿಗಳ ನಿರ್ಮಾಣ, ಶಿಕ್ಷಣದಲ್ಲಿ ಕೇಸರೀಕರಣ ಇಲ್ಲ: ಸಿಎಂ ಬೊಮ್ಮಾಯಿ
ಕಲಬುರಗಿ, ನ. 14: ಒಟ್ಟು ಎರಡು ಸಾವಿರ ಶಾಲಾ ಕೊಠಡಿಗಳನ್ನು ಕಲ್ಯಾಣ ಕರ್ನಾಟಕ ಭಾಗದಲ್ಲಿ ನಿರ್ಮಾಣ ವಾಗಲಿದ್ದು, ಸುಮಾರು ಆರು ಸಾವಿರ ಕೊಠಡಿಗಳ ನ್ನು ಕರ್ನಾಟಕದಲ್ಲಿ ನಿರ್ಮಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ಕಲಬುರಗಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.
ರಾಜ್ಯದಲ್ಲಿ ಇದೆ ವರ್ಷ 8 ಸಾವಿರ ಶಾಲಾ ಕೊಠಡಿಗಳನ್ನು ನಿರ್ಮಿಸಲಾಗುತ್ತಿದೆ. ಹೆಚ್ಚುವರಿ ಶಾಲಾ ಕೊಠಡಿಗಳನ್ನು ಕಲ್ಯಾಣ ಕರ್ನಾಟಕ ಭಾಗದಲ್ಲಿ ನೀಡಲು ನಿರ್ಧರಿಸಲಾಗಿದೆ. ಇದೊಂದು ದೊಡ್ಡ ಕ್ರಾಂತಿಯಾಗಲಿದ್ದು ಇದನ್ನು ಮೂರು ವರ್ಷ ನಿರಂತರವಾಗಿ ಮಾಡಿದರೆ, ಕರ್ನಾಟಕದಲ್ಲಿ ಪ್ರಾಥಮಿಕ, ಮಾಧ್ಯಮಿಕ ಶಾಲಾ ಕೊಠಡಿಗಳ ಮೂಲಸೌಕರ್ಯದ ಕೊರತೆ ನೀಗಲಿದೆ. ಅದರ ಜೊತೆಗೆ ಮುಂದಿನ ಆಗಸ್ಟ್ 15 ರೊಳಗೆ ಎಲ್ಲಾ ಸರ್ಕಾರಿ ಶಾಲೆಗಳ ಶೌಚಾಲಯ ಗಳ ನಿರ್ಮಾಣ ಮತ್ತು ದುರಸ್ತಿ ಕಾರ್ಯಕ್ಕಾಗಿ 250 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ. 15 ಸಾವಿರ ಶಿಕ್ಷಕರ ನೇಮಕಾತಿಗೆ ಅನುಮತಿ ನೀಡಲಾಗಿದೆ. ಎರಡನೇ ಹಂತದ ನೇಮಕಾತಿಗೆ ಮುಂದಿನ ವಾರದಲ್ಲಿ ಅನುಮತಿ ನೀಡಲಿದ್ದೇವೆ. ಎಂದರು.
''ಶಿಕ್ಷಣ ಕ್ಷೇತ್ರದಲ್ಲಿದ್ದ ಕೊರತೆಯನ್ನು ಯಾವುದೇ ಸರ್ಕಾರ ಮುಟ್ಟಲೂ ಹೋಗಿರಲಿಲ್ಲ. ಆಮೂಲಾಗ್ರ ಬದಲಾವಣೆಗಳನ್ನು ಶಿಕ್ಷಣ ಕ್ಷೇತ್ರದಲ್ಲಿ ತಂದು ಅಗತ್ಯವಿರುವ ಮೂಲಸೌಕರ್ಯ ಒದಗಿಸುವುದು ಸೇರಿದಂತೆ ಗುಣಮಟ್ಟದ ಶಿಕ್ಷಣ ಕ್ಕಾಗಿ ಶಿಕ್ಷಕರ ತರಬೇತಿ ಹಾಗೂ ಪಠ್ಯ ಕ್ರಮದ ಬಗ್ಗೆ ಗಮನ ನೀಡಲಾಗಿದೆ. ಮುಂದಿನ ವರ್ಷ ನೂತನ ಶಿಕ್ಷಣ ನೀತಿಯನ್ನು ಪ್ರಾಥಮಿಕ ಶಿಕ್ಷಣ ದಲ್ಲಿಯೂ ಅನುಷ್ಠಾನಕ್ಕೆ ತರಲಾಗುವುದು'' ಎಂದರು.
ಶಾಲಾ ಕೊಠಡಿಗಳಿಗೆ ಕೇಸರಿ ಬಣ್ಣ ಬಳಿಯುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, '' ಇತ್ತೀಚಿನ ದಿನಗಳಲ್ಲಿ ಏನೇ ಪ್ರಗತಿ ಮಾಡಿದರೂ ವಿವಾದ ಸೃಷ್ಟಿ ಮಾಡುವ ಚಟವಿದೆ. ಪ್ರಗತಿಯ ಬಗ್ಗೆ ಆಸಕ್ತಿ ಇಲ್ಲ. ಶಿಕ್ಷಣ ಕ್ಷೇತ್ರದಲ್ಲಿ ಆಮೂಲಾಗ್ರ ಬದಲಾವಣೆ ಬಗ್ಗೆ ಸಂತೋಷವಿಲ್ಲ. ಇಲ್ಲಿಯೂ ರಾಜಕಾರಣ ಮಾಡುತ್ತಾರೆ. ಇದನ್ನು ಮಾಡಿದರೆ ಸರ್ಕಾರಕ್ಕೆ ಅದರ ಶ್ರೇಯಸ್ಸು ಹೋಗುತ್ತದೆ ಎಂದು ಸಣ್ಣ ಪುಟ್ಟ ವಿಚಾರಗಳಿಗೆ ತಗಾದೆ ತೆಗೆದರೆ ಅಡಕ್ಕೆ ನಾವು ಲಕ್ಷ್ಯ ಕೊಡುವುದಿಲ್ಲ ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆ ತರುತ್ತಿದ್ದೇವೆ'' ಎಂದರು.
''ಕೇಸರೀಕರಣ ಆಗುತ್ತಿಲ್ಲ''
'ಖಂಡಿತ ಕೇಸರೀಕರಣ ಆಗುತ್ತಿಲ್ಲ. ಕೇಸರಿ ಎಂದರೆ ಕಣ್ಣು ಕೆಂಪೇಕಾಗುತ್ತದೆ. ಸ್ವಾಮಿ ವಿವೇಕಾನಂದರು ಸನ್ಯಾಸಿ. ಜಗತ್ತಿಗೆ ವಿವೇಕ ನೀಡಿದವರು. ಅವರ ಹೆಸರಿನಲ್ಲಿ ಮಕ್ಕಳಿಗೆ ಪ್ರೇರಣೆ ಸಿಗಲಿ ಎಂದು ಯೋಜನೆ ರೂಪಿಸಿದೆ. ಒಳ್ಳೆ ವಾತಾವರಣ ನಿರ್ಮಾಣವಾಗಲಿದೆ' ಎಂದರು.