ಯಕ್ಷಗಾನ ತಾಳಮದ್ದಳೆ ಸಪ್ತಾಹದ ಆಮಂತ್ರಣ ಬಿಡುಗಡೆ

ಮಂಗಳೂರು : ‘ಹತ್ತು ವರ್ಷಗಳಿಂದ ನಗರದಲ್ಲಿ ತಾಳಮದ್ದಳೆ ಸಪ್ತಾಹವನ್ನು ನಡೆಸಿ ಯಕ್ಷಗಾನದ ವಾಚಿಕ ವಿಭಾಗಕ್ಕೆ ವಿಸ್ತಾರವಾದ ಹರಹು ನೀಡಿದ ಯಕ್ಷಾಂಗಣದಿಂದ ಕಲೆ ಮತ್ತು ಕಲಾವಿದರಿಗೆ ಸೂಕ್ತ ಗೌರವ ಲಭಿಸಿದೆ. ರಾಜ್ಯೋತ್ಸವ ಕಲಾ ಸಂಭ್ರಮ ಪರಿಕಲ್ಪನೆಯಲ್ಲಿ ನಡೆಯುವ ಸರಣಿ ತಾಳಮದ್ದಳೆ ಕಾರ್ಯಕ್ರಮ ದಶಮಾನ ಪೂರೈಸಿ ಮುನ್ನಡೆಯಲಿ’ ಎಂದು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಯಕ್ಷಗಾನ ಅರ್ಥಧಾರಿ, ವಿದ್ವಾಂಸ ಡಾ.ಎಂ.ಪ್ರಭಾಕರ ಜೋಶಿ ಹಾರೈಸಿದ್ದಾರೆ.
ಯಕ್ಷಾಂಗಣ ಮಂಗಳೂರು-ಯಕ್ಷಗಾನ ಚಿಂತನ ಮಂಥನ ಮತ್ತು ಪ್ರದರ್ಶನ ವೇದಿಕೆಯು ತನ್ನ ದಶಮಾ ನೋತ್ಸವ ಸಲುವಾಗಿ ನ. 21ರಿಂದ 27ರವರೆಗೆ ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವನ ದಲ್ಲಿ ಏರ್ಪಡಿಸಿರುವ ’ಯಕ್ಷಗಾನ ತಾಳಮದ್ದಳೆ ಸಪ್ತಾಹ -2022’ ಹತ್ತನೇ ವರ್ಷದ ನುಡಿ ಹಬ್ಬದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
’ಯಕ್ಷಾಂಗಣವು ಪ್ರತಿ ವರ್ಷ ತಾಳಮದ್ದಳೆಯೊಂದಿಗೆ ಕಲಾವಿದರ ಸನ್ಮಾನ, ಪ್ರಶಸ್ತಿ ಪ್ರದಾನ ಮತ್ತು ಗತಿಸಿದ ಮಹನೀಯರ ಸಂಸ್ಮರಣೆ ಮಾಡುತ್ತಿರುವುದು ಉತ್ತಮ ಕಾರ್ಯ’ ಎಂದು ಡಾ.ಎಂ.ಪ್ರಭಾಕರ ಜೋಶಿ ನುಡಿದರು.
ಉದ್ಯಮಿ ಎ.ಕೆ.ಜಯರಾಮ ಶೇಖ, ಕರ್ನಾಟಕ ಯಕ್ಷಗಾನ ಅಕಾಡಮಿಯ ಮಾಜಿ ಅಧ್ಯಕ್ಷ ಪ್ರೊ.ಎಂ.ಎಲ್. ಸಾಮಗ, ನಿಕಟಪೂರ್ವ ಸದಸ್ಯ ಕದ್ರಿ ನವನೀತ ಶೆಟ್ಟಿ, ಹಿರಿಯ ಯಕ್ಷಗಾನ ಕಲಾವಿದ ಕೆ.ಎಚ್.ದಾಸಪ್ಪರೈ, ಕಣಿಪುರ ಯಕ್ಷಗಾನ ಮಾಸ ಪತ್ರಿಕೆ ಸಂಪಾದಕ ಎಂ.ನಾ. ಚಂಬಲ್ತಿಮಾರ್ ಉಪಸ್ಥಿತರಿದ್ದರು.
ಯಕ್ಷಾಂಗಣದ ಕಾರ್ಯಾಧ್ಯಕ್ಷ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಕಾರ್ಯಕ್ರಮದ ರೂಪ ರೇಷೆಯನ್ನು ವಿವರಿಸಿದರು. ಪ್ರಧಾನ ಕಾರ್ಯದರ್ಶಿ ತೋನ್ಸೆ ಪುಷ್ಕಳ ಕುಮಾರ್ ಸ್ವಾಗತಿಸಿದರು. ಸಮಿತಿಯ ನಿರ್ದೇಶಕ ಕೆ.ರವಿಂದ್ರ ರೈ ಕಲ್ಲಿಮಾರು ವಂದಿಸಿದರು.







