ರಾಜ್ಯದ 20 ಜಿಲ್ಲೆಗಳಲ್ಲಿ ನವೋದಯ ಸ್ವಸಹಾಯ ಸಂಘ ಆರಂಭ: ಡಾ.ರಾಜೇಂದ್ರ ಕುಮಾರ್
ಉಚ್ಚಿಲದಲ್ಲಿ 69ನೇ ಅಖಿಲ ಭಾರತ ಸಹಕಾರ ಸಪ್ತಾಹ ಉದ್ಘಾಟನೆ

ಕಾಪು, ನ.14: ನವೋದಯ ಸ್ವಸಹಾಯ ಸಂಘಗಳು ಆರಂಭವಾಗಿ ಇಂದಿಗೆ 23 ವರ್ಷಗಳಾಗಿವೆ. 1999ರಲ್ಲಿ ಆರಂಭಗೊಂಡ ಈ ಸಂಘ ಇದೀಗ ಅವಿಭಜಿತ ದ.ಕ. ಜಿಲ್ಲೆಗಳಿಗೆ ಮಾತ್ರವಲ್ಲದೆ ರಾಜ್ಯದ ಸುಮಾರು 20 ಜಿಲ್ಲೆಗಳಲ್ಲಿ ಆರಂಭಗೊಳ್ಳಲಿದೆ. ಬೇರೆ ಜಿಲ್ಲೆಗಳ ಮಹಿಳೆಯರು ತಮ್ಮಲ್ಲಿಯೂ ಸ್ವ ಸಹಾಯ ಸಂಘಗಳನ್ನು ಸ್ಥಾಪಿಸುವ ಬೇಡಿಕೆ ಇಟ್ಟಿದ್ದರೆ, ಅದರ ಕೀರ್ತಿ ನಮ್ಮ ಜಿಲ್ಲೆಯ ನವೋದಯ ಮಹಿಳೆಯರಿಗೆ ಸಲ್ಲಬೇಕಾಗಿದೆ ಎಂದು ಕರ್ನಾಟಕರ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಹಾಗೂ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಹೇಳಿದ್ದಾರೆ.
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಉಡುಪಿ ಜಿಲ್ಲಾ ಸಹಕಾರ ಯೂನಿಯನ್, ದ.ಕ. ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್, ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್, ದ.ಕ. ಹಾಗೂ ಉಡುಪಿ ಜಿಲ್ಲಾ ಮೀನು ಮಾರಾಟ ಫೆಡರೇಶನ್, ದ.ಕ. ಸಹಕಾರಿ ಹಾಲು ಒಕ್ಕೂಟ, ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕ್, ಉಡುಪಿ ಜಿಲ್ಲೆಯ ಅರ್ಬನ್ ಸಹಕಾರ ಬ್ಯಾಂಕ್ ಗಳು, ಸಹಕಾರ ಇಲಾಖೆ ಮತ್ತು ಜಿಲ್ಲೆಯ ಸಮಸ್ತ ಸಹಕಾರ ಸಂಘಗಳು/ಸೌಹಾರ್ದ ಸಹಕಾರಿಗಳ ನೇತೃತ್ವದಲ್ಲಿ ಸೋಮವಾರ ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನ ಸಭಾಂಗಣದಲ್ಲಿ ಆಯೋಜಿಸಲಾದ 69ನೇ ಅಖಿಲ ಭಾರತ ಸಹಕಾರ ಸಪ್ತಾಹ ಉದ್ಘಾಟನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡುತಿದ್ದರು.
ನಾರಿ ಶಕ್ತಿಯ ಮುಂದೆ ಯಾವ ಶಕ್ತಿ ಕೂಡ ಇಲ್ಲ. ಇಂದು ಎಲ್ಲ ಕಡೆಗಳಲ್ಲೂ ಶೇ.90 ಮಹಿಳೆಯರು ನವೋದಯ ಸ್ವಸಹಾಯ ಸಂಘದವರೇ ಆಗಿದ್ದಾರೆ. ನೂರಾರು ವರ್ಷಗಳ ಇತಿಹಾಸ ಹೊಂದಿರುವ ಸಹಕಾರ ಕ್ಷೇತ್ರವು ಬ್ರಿಟೀಷರ ಆಳ್ವಿಕೆಯಲ್ಲಿ ಆರಂಭವಾಯಿತು. ಕಟ್ಟಕಡೆಯ ರೈತ, ಕೂಲಿ ಕಾರ್ಮಿಕರನ್ನು ತಲುಪುವ ವ್ಯವಸ್ಥೆ ಸಹಕಾರಿ ಕ್ಷೇತ್ರ ಮಾತ್ರ ಎಂಬುದನ್ನು ಬ್ರಿಟೀಷರು ಮನ ಗಂಡಿದ್ದರು ಎಂದರು.
ಇದು ನಮ್ಮ ಶಕ್ತಿ ಪ್ರದರ್ಶನ ಅಲ್ಲ. ಸಹಕಾರಿ ಕ್ಷೇತ್ರಕ್ಕೆ ಇನ್ನಷ್ಟು ಶಕ್ತಿ ನೀಡಲು ನಾವು ಸೇರಿದ್ದೇವೆ. ಮುಂದೆ ಇನ್ನಷ್ಟು ಸಹಕಾರಿಗಳು ಪ್ರಯೋಜನ ಪಡೆಯುವ ನಿಟ್ಟಿನಲ್ಲಿ ಸಹಕಾರಿ ಸಪ್ತಾಹವನ್ನು ಉತ್ಸವ ರೀತಿಯಲ್ಲಿ ಆಚರಿಸಬೇಕಾಗಿದೆ. ಸಂಘದ ಮಹಿಳೆಯರಲ್ಲಿ ಜಾತಿ ಮತ ಬಡವ ಶ್ರೀಮಂತ ಎಂಬ ಬೇಧ ಮೂಡಬಾರದೆಂಬ ಉದ್ದೇಶದಿಂದ ಎಲ್ಲರಿಗೂ ಸಮವಸ್ತ್ರ ನೀಡಲಾಗಿದೆ ಎಂದು ಅವರು ತಿಳಿಸಿದರು.
ಸಹಕಾರ ಸಪ್ತಾಹವನ್ನು ಉದ್ಘಾಟಿಸಿದ ಪೇಜಾವರ ಮಠದ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿ, ಇಂದು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸಹಕಾರ ತತ್ವ ಬೆಳೆಯುತ್ತಿದೆ. ವಿವಿಧ ರಾಜ್ಯ, ಭಾಷೆ, ಮತ, ಪಂಗಡಗಳಿಂದ ನಮ್ಮ ದೇಶ ಹಂಚಿ ಹೋದರೂ ಒಗ್ಗಟ್ಟಿನ ಏಳಿಗೆ ಕಾಣಲು ಸಹಕಾರಿ ತತ್ವ ಮಾತ್ರ ಏಕೈಕ ಸೂತ್ರ ವಾಗಿದೆ. ಎಲ್ಲ ಕ್ಷೇತ್ರಗಳಲ್ಲಿ ಸಹಕಾರ ತತ್ವ ಅಳವಡಿಸಿ ಕೊಂಡರೆ ಮಾತ್ರ ಭಾರತ ಗುರುವಿನ ಸ್ಥಾನದಲ್ಲಿ ಮೆರೆಯಬಹುದು ಎಂದರು.
ಅಧ್ಯಕ್ಷತೆಯನ್ನು ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಬಿ.ಜಯ ಕರ ಶೆಟ್ಟಿ ಇಂದ್ರಾಳಿ ವಹಿಸಿದ್ದರು. ಇದೇ ಸಂದರ್ಭದಲ್ಲಿ ಸಹಕಾರ ರತ್ನ ಡಾ. ಎಂ.ಎನ್.ರಾಜೇಂದ್ರ ಕುಮಾರ್ ಹಾಗೂ ಅರುಣಾ ರಾಜೇಂದ್ರ ಕುಮಾರ್ ಅವರನ್ನು ಅಭಿನಂದಿಸಲಾಯಿತು.
ಮುಖ್ಯ ಅತಿಥಿಗಳಾಗಿ ಕಾಪು ಶಾಸಕ ಲಾಲಾಜಿ ಆರ್.ಮೆಂಡನ್, ಬೈಂದೂರು ಶಾಸಕ ಸುಕುಮಾರ್ ಶೆಟ್ಟಿ, ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ಯಶ್ಪಾಲ್ ಸುವರ್ಣ, ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನದ ಅಧ್ಯಕ್ಷ ಜಯ ಸಿ.ಕೋಟ್ಯಾನ್, ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಕೆ.ಪಿ.ಸುಚರಿತ ಶೆಟ್ಟಿ, ನಿರ್ದೇಶಕ ಕಾಪು ದಿವಾಕರ ಶೆಟ್ಟಿ, ಮೈಸೂರು ಸಹಕಾರ ಸಂಘಗಳ ಜಂಟಿ ನಿಬಂಧಕರಾದ ಡಾ.ಉಮೇಶ್ ಜಿ., ಪ್ರವೀಣ್ ನಾಯಕ್, ಉಡುಪಿ ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕ ಲಕ್ಷ್ಮೀ ನಾರಾಯಣ ಜಿ.ಎನ್., ಜಿಲ್ಲಾ ಸಹಕಾರಿ ಯೂನಿಯನ್ ಉಪಾಧ್ಯಕ್ಷ ಅಶೋಕ್ ಕುಮಾರ್ ಬಲ್ಲಾಳ್, ಎಸ್‌ಸಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ವಿನಯ ಕುಮಾರ್ ಸೂರಿಂಜೆ, ಎಸ್‌ಸಿಡಿಸಿಸಿ ಬ್ಯಾಂಕಿನ ನಿರ್ದೇಶಕರು ಹಾಗೂ ಜಿಲ್ಲಾ ಸಹಕಾರ ಯೂನಿಯನ್‌ನ ನಿರ್ದೇಶಕರು ಉಪಸ್ಥಿತರಿದ್ದರು.
ಜಾನಪದ ವಿದ್ವಾಂಸ ಡಾ.ಗಣನಾಥ ಎಕ್ಕಾರು ದಿಕ್ಸೂಚಿ ಭಾಷಣ ಮಾಡಿದರು. ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ನಿರ್ದೇಶಕ ಡಾ. ದೇವಿ ಪ್ರಸಾದ್ ಶೆಟ್ಟಿ ಸ್ವಾಗತಿಸಿದರು. ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕ ಶ್ರೀಧರ ಪಿ.ಎಸ್. ಪ್ರಾಸ್ತಾವಿಕವಾಗಿ ಮಾತನಾಡಿದರು. ಸತೀಶ್ ಶೆಟ್ಟಿ ಮತ್ತು ವಿಜೇತ ಕಾರ್ಯಕ್ರಮ ನಿರೂಪಿಸಿದರು.
ಇದಕ್ಕೂ ಮುನ್ನಾ ಉಚ್ಚಿಲ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಿಂದ ಭವ್ಯ ಮೆರವಣಿಗೆ ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನದವರೆಗೆ ನಡೆಯಿತು. ಸಹಕಾರಿಗಳಿಂದ ದ್ವಿಚಕ್ರ ವಾಹನ ಮತ್ತು ಇತರ ವಾಹನಗಳ ಜಾಥ, ವೈವಿಧ್ಯಮಯ ಸ್ತಬ್ಧಚಿತ್ರಗಳು, ವಿವಿಧ ತಂಡಗಳಿಂದ ವೇಷಭೂಷಣ ಕುಣಿತ, ಚೆಂಡೆ ವಾದ್ಯ, ನಾಸಿಕ್ ಬ್ಯಾಂಡ್, ಸ್ಯಾಕ್ಸೋಫೋನ್ ತಂಡಗಳು, ನವೋದಯ ಸ್ವಸಹಾಯ ಸಂಘಗಳ ಸದಸ್ಯರು ಮೆರವಣಿಗೆಯಲ್ಲಿ ಗಮನ ಸೆಳೆದರು.









