ರವಿ ಡಿ.ಚನ್ನಣ್ಣವರ್ ಸೇರಿ 11 ಮಂದಿ IPS ಅಧಿಕಾರಿಗಳ ವರ್ಗಾವಣೆ
ಬೆಂಗಳೂರು ನಗರಕ್ಕೆ ಮೊದಲ ಬಾರಿಗೆ ವಿಶೇಷ ಆಯುಕ್ತ ಹುದ್ದೆ ಸೃಷ್ಟಿ, ಡಾ.ಎಂ.ಅಬ್ದುಲ್ಲಾ ಸಲೀಮ್ ನೇಮಕ
ಬೆಂಗಳೂರು, ನ.14: ರಾಜ್ಯ ಸರಕಾರವು 11 ಮಂದಿ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಹಾಗೂ ಓರ್ವ ಐಎಎಸ್ ಅಧಿಕಾರಿಯನ್ನು ಸ್ಥಳ ನಿಯುಕ್ತಿಗೊಳಿಸಿ ಸೋಮವಾರ ಆದೇಶ ಹೊರಡಿಸಿದೆ.
ಪೊಲೀಸ್ ಇಲಾಖೆಯ ಆಡಳಿತ ವಿಭಾಗದ ಎಡಿಜಿಪಿಯಾಗಿದ್ದ ಡಾ.ಎಂ.ಅಬ್ದುಲ್ಲಾ ಸಲೀಮ್ ಅವರನ್ನು ಬೆಂಗಳೂರು ನಗರ ಜಿಲ್ಲೆಯ ಸಂಚಾರ ವಿಭಾಗದ ವಿಶೇಷ ಆಯುಕ್ತರ ಹುದ್ದೆಯನ್ನು ಉನ್ನತೀಕರಿಸಿ ವರ್ಗಾವಣೆ ಮಾಡಲಾಗಿದೆ.
ಸಿಐಡಿ ಆರ್ಥಿಕ ಅಪರಾಧಗಳ ವಿಭಾಗದ ಎಡಿಜಿಪಿಯಾಗಿದ್ದ ಉಮೇಶ್ ಕುಮಾರ್ ಅವರನ್ನು ಆಡಳಿತ ವಿಭಾಗದ ಎಡಿಜಿಪಿಯಾಗಿ, ಮಂಗಳೂರು ಪಶ್ಚಿಮ ವಲಯ ಐಜಿಪಿಯಾಗಿದ್ದ ದೇವಜ್ಯೋತಿ ರಾಯ್ ಅವರನ್ನು ಅಹವಾಲು ಹಾಗೂ ಮಾನವ ಹಕ್ಕುಗಳ ವಿಭಾಗದ ಐಜಿಪಿಯಾಗಿ ವರ್ಗಾವಣೆ ಮಾಡಲಾಗಿದೆ.
ಬೆಂಗಳೂರು ನಗರ ಜಿಲ್ಲೆಯ ಸಂಚಾರ ವಿಭಾಗದ ಜಂಟಿ ಆಯುಕ್ತರಾಗಿದ್ದ ಡಾ.ಬಿ.ಆರ್.ರವಿಕಾಂತೇಗೌಡ ಅವರನ್ನು ಸಿಐಡಿ ವಿಭಾಗದ ಡಿಐಜಿಪಿಯಾಗಿ, ಆಂತರಿಕ ಭದ್ರತಾ ವಿಭಾಗದ ಡಿಐಜಿಪಿಯಾಗಿದ್ದ ಬಿ.ಎಸ್.ಲೋಕೇಶ್ ಕುಮಾರ್ ಅವರನ್ನು ಬಳ್ಳಾರಿ ವಲಯದ ಡಿಐಜಿಪಿಯಾಗಿ ವರ್ಗಾವಣೆ ಮಾಡಲಾಗಿದೆ.
ಮೈಸೂರು ನಗರದ ಪೊಲೀಸ್ ಆಯುಕ್ತರಾಗಿದ್ದ ಡಾ.ಚಂದ್ರ ಗುಪ್ತ ಅವರನ್ನು ಮಂಗಳೂರು ವಲಯದ ಡಿಐಜಿಪಿಯಾಗಿ ವರ್ಗಾವಣೆ ಮಾಡಲಾಗಿದೆ.
ಬೆಂಗಳೂರು ನಗರದ ಅಪರಾಧ ವಿಭಾಗದ ಡಿಸಿಪಿಯಾಗಿದ್ದ ಡಾ.ಎಸ್.ಡಿ.ಶರಣಪ್ಪ ಅವರನ್ನು ಬೆಂಗಳೂರು ನಗರದ ಅಪರಾಧ ವಿಭಾಗದ ಜಂಟಿ ಆಯುಕ್ತರನ್ನಾಗಿ ವರ್ಗಾವಣೆ ಮಾಡಲಾಗಿದೆ.
ಸಂಚಾರದ ವಿಭಾಗದ ಜಂಟಿ ಪೊಲೀಸ್ ಆಯುಕ್ತರ ಹುದ್ದೆಗೆ ಸಿಐಡಿ ಪೊಲೀಸ್ ವರಿಷ್ಠಾಧಿಕಾರಿ ಯಾಗಿದ್ದ ಎಂ.ಎನ್.ಅನುಚೇತ್ ಅವರನ್ನು ವರ್ಗಾವಣೆ ಮಾಡಲಾಗಿದೆ.
ಸಿಐಡಿ ಪೊಲೀಸ್ ವರಿಷ್ಠಾಧಿಕಾರಿ ಯಾಗಿದ್ದ ರವಿ ಡಿ.ಚನ್ನಣ್ಣವರ್ ಅವರನ್ನು ಕಿಯೋನಿಕ್ಸ್ ವ್ಯವಸ್ಥಾಪಕ ನಿರ್ದೇಶಕರನ್ನಾಗಿ ಹಾಗೂ ಸಿಐಡಿ ಪೊಲೀಸ್ ವರಿಷ್ಠಾಧಿಕಾರಿ ಯಾಗಿದ್ದ ಬಿ.ರಮೇಶ್ ಅವರನ್ನು ಮೈಸೂರು ನಗರ ಪೊಲೀಸ್ ಆಯುಕ್ತರನ್ನಾಗಿ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.
ಬೆಂಗಳೂರು ನಗರ ವಿಶೇಷ ಆಯುಕ್ತರ ನೇಮಕ: ಎಂ ಎ ಸಲೀಂ ರನ್ನು ಸ್ಪೆಷಲ್ ಟ್ರಾಫಿಕ್ ಕಮಿಷನರ್ ಆಗಿ ನೇಮಕ ಮಾಡಲಾಗಿದ್ದು, ಇದೇ ಮೊದಲ ಬಾರಿಗೆ ಸರ್ಕಾರ ಟ್ರಾಫಿಕ್ ಕಮಿಷನರ್ ಹುದ್ದೆಗೆ ಎಡಿಜಿಪಿ ದರ್ಜೆ ಅಧಿಕಾರಿ ನೇಮಿಸಿದೆ.
ಐಎಎಸ್: ಸ್ಥಳ ನಿಯುಕ್ತಿಯ ನಿರೀಕ್ಷೆಯಲ್ಲಿದ್ದ ಐಎಎಸ್ ಅಧಿಕಾರಿ ಅನಿರುದ್ಧ ಶ್ರವಣ್ ಅವರನ್ನು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಕಾರ್ಯದರ್ಶಿ ಹಾಗೂ ಯೋಜನೆ, ಕಾರ್ಯಕ್ರಮ ನಿರ್ವಹಣೆ ಹಾಗೂ ಸಾಂಖ್ಯಿಕ ಇಲಾಖೆಯ ಜಂಟಿ ಕಾರ್ಯದರ್ಶಿಯನ್ನಾಗಿ ನಿಯೋಜಿಸಿ ಸರಕಾರ ಆದೇಶಿಸಿದೆ.