ಮ್ಯಾಂಚೆಸ್ಟರ್ ಯುನೈಟೆಡ್ ನನ್ನನ್ನು ಬಲವಂತವಾಗಿ ಹೊರಹಾಕಲು ಪ್ರಯತ್ನಿಸಿದೆ: ರೊನಾಲ್ಡೊ ವಾಗ್ದಾಳಿ

ಲಂಡನ್: ಟಿವಿ ಚಾನೆಲ್‌ವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಫುಟ್ಬಾಲ್ ಸ್ಟಾರ್ ಕ್ರಿಸ್ಟಿಯಾನೊ ರೊನಾಲ್ಡೊ ಅವರು ಮ್ಯಾಂಚೆಸ್ಟರ್ ಯುನೈಟೆಡ್ ಹಾಗೂ ಅದರ ಹಾಲಿ ಕೋಚ್ ಎರಿಕ್ ಟೆನ್ ಹ್ಯಾಗ್ ವಿರುದ್ಧ ವಾಗ್ದಾಳಿ ನಡೆಸಿದರು. ನನಗೆ ಕ್ಲಬ್‌ನಿಂದ ದ್ರೋಹ ಆಗುತ್ತಿದೆ. ಕ್ಲಬ್‌ನ ಕೆಲವು ಹಿರಿಯ ಆಟಗಾರರು ಓಲ್ಡ್ ಟ್ರಾಫೋರ್ಡ್‌ನಿಂದ ನನ್ನನ್ನು ಬಲವಂತವಾಗಿ ಹೊರಹಾಕಲು ಪ್ರಯತ್ನಿಸಿದರು ಎಂದು ಆರೋಪಿಸಿದ್ದಾರೆ.
ರೊನಾಲ್ಡೊ ಸಂದರ್ಶನವು ಈ ವಾರ ಬ್ರಿಟನ್‌ನ ಟಾಕ್ ಟಿವಿಯಲ್ಲಿ ಪ್ರಸಾರವಾಗಲಿದೆ. ರವಿವಾರ ನಡೆದ ಪಂದ್ಯದಲ್ಲಿ ಯುನೈಟೆಡ್ ತಂಡ ಫಲ್ಹಾಮ್ ವಿರುದ್ಧ 2-1ರಿಂದ ಜಯ ಸಾಧಿಸಿತ್ತು. ರೊನಾಲ್ಡೊ ಸತತ ಎರಡನೇ ಬಾರಿ ತಂಡದ ಭಾಗವಾಗಿರಲಿಲ್ಲ. ಫಾರ್ವರ್ಡ್ ಆಟಗಾರ ಅನಾರೋಗ್ಯಕ್ಕೆ ಒಳಗಾಗಿದ್ದಾರೆ ಎಂದು ಕ್ಲಬ್ ಹೇಳಿತ್ತು. ಆದಾಗ್ಯೂ ಸಂದರ್ಶನದಲ್ಲಿ ರೊನಾಲ್ಡೊ ಅವರ ಹೇಳಿಕೆಯು ಖಂಡಿತವಾಗಿಯೂ ಮ್ಯಾಂಚೆಸ್ಟರ್‌ನಲ್ಲಿ ಅವರ ಭವಿಷ್ಯದ ಬಗ್ಗೆ ಅಭಿಮಾನಿಗಳಿಗೆ ಆತಂಕ ತಂದಿದೆ.
ಟೊಟೆನ್ ಹ್ಯಾಮ್ ಹಾಟ್ಸ್‌ಪರ್ ವಿರುದ್ಧ 2-0 ಗೆಲುವಿನಲ್ಲಿ ಬದಲಿ ಅಟಗಾರನಾಗಿ ಬರಲು ನಿರಾಕರಿಸಿದ ನಂತರ ರೊನಾಲ್ಡೊ ಅವರನ್ನು ಮ್ಯಾನೇಜರ್ ಅಮಾನತುಗೊಳಿಸಿದ್ದರು.
‘‘ನನಗೆ ಅವರ (ಟೆನ್ ಹ್ಯಾಗ್) ಮೇಲೆ ಗೌರವವಿಲ್ಲ. ಏಕೆಂದರೆ ಅವರು ನನ್ನ ಮೇಲೆ ಗೌರವ ತೋರಿಸುವುದಿಲ್ಲ. ನಿಮಗೆ ನನ್ನ ಬಗ್ಗೆ ಗೌರವವಿಲ್ಲದಿದ್ದರೆ ನಾನು ಎಂದಿಗೂ ನಿಮ್ಮ ಬಗ್ಗೆ ಗೌರವವನ್ನು ಹೊಂದಿರುವುದಿಲ್ಲ’’ ಎಂದು ಪೋರ್ಚುಗೀಸ್ ಆಟಗಾರ ಹೇಳಿದ್ದಾರೆ.