ಮಸೀದಿ ದರ್ಶನದ ಮೂಲಕ ಸತ್ಯದರ್ಶನವಾಗಲಿ: ಪರಮೇಶ್ವರ ದೇವಾಡಿಗ

ಭಟ್ಕಳ: ಸಮಾಜದಲ್ಲಿ ಗಲಭೆ-ಗೊಂದಲಗಳನ್ನು ಸೃಷ್ಟಿ ಮಾಡುವ ರಾಜಕೀಯ ಪ್ರೇರಿತ ಮನಸ್ಸುಗಳಿಗೆ ಮಸೀದಿ ದರ್ಶನದ ಮೂಲಕ ಸತ್ಯದರ್ಶನವಾಗಬೇಕು ಎಂಬ ಅಭಿಪ್ರಾಯವನ್ನು ಭಟ್ಕಳ ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ದೇವಾಡಿಗ ಸಮಾಜದ ಮುಖಂಡ ಪರಮೇಶ್ವರ ದೇವಾಡಿಗ ವ್ಯಕ್ತಪಡಿಸಿದರು.
ಅವರು ರವಿವಾರ ಇಲ್ಲಿನ ಖಲಿಫಾ ಮರ್ಕಝಿ ಜಮಾಅತುಲ್ ಮುಸ್ಲಿಮೀನ್ ವತಿಯಿಂದ ಖಲಿಫಾ ಜಾಮಿಯಾ ಮಸೀದಿಯಲ್ಲಿ ಆಯೋಜಿಸಿದ್ದ ಮಸೀದಿ ದರ್ಶನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿದರು.
ಚುನಾವಣಾ ಸಂದರ್ಭದಲ್ಲಿ ರಾಜಕಾರಣಿಗಳು ರಾಜಕೀಯ ಮಾಡುತ್ತಾರೆ ಬೇರೆ ಸಂದರ್ಭದಲ್ಲಿ ಎಲ್ಲರೂ ಒಟ್ಟಾಗಿ ಪಾರ್ಟಿಗಳನ್ನು ಮಾಡುತ್ತಾರೆ. ಕೆಳ ಮಟ್ಟದ ಕಾರ್ಯಕರ್ತರು ಅವರ ಮಾತುಗಳನ್ನು ಕೇಳಿಕೊಂಡು ಏನೆಲ್ಲ ಮಾಡುತ್ತಾರೆ ಎಂಬುದನ್ನು ಬಿಡಿಸಿ ಹೇಳಬೇಕಾಗಿಲ್ಲ. ಅಂತಹ ಸನ್ನಿವೇಶ ನಿರ್ಮಾಣವಾಗಬಾರದು ಎಂದಾದರೆ ಇಂತಹ ಸತ್ಯದರ್ಶನ ಮಾಡುವ ಕಾರ್ಯಕ್ರಮಗಳು ಆಗಾಗ ನಡೆಯುತ್ತಿರಬೇಕು ಎಂದರು.
ಸದ್ಭಾವನ ಮಂಚ್ ಅಧ್ಯಕ್ಷ ಸತೀಶ್ ಕುಮಾರ್ ಮಾತನಾಡಿದರು. ಈ ಸಂದರ್ಭದಲ್ಲಿ ಮೌಲಾನ ಉಬೈದುಲ್ಲಾ ನದ್ವಿ, ತಂಝೀಮ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಖೀಬ್ ಎಂ.ಜೆ, ನ್ಯಾಯವಾದಿ ನಾಗರಾಜ್ ಇ.ಎಚ್., ಮೊಗೇರ ಸಮಾಜ ಅಧ್ಯಕ್ಷ ಅಣ್ಣಪ್ಪ ಮೊಗೇರ್, ಕರಿಕಾಲ್ ಚರ್ಚ್ ನ ಫಾದರ್ ಲಾರೆನ್ಸ್, ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಎಂ.ಬಿ.ನಾಯ್ಕ, ಅಂಜುಮನ್ ಪಿಯು ಕಾಲೇಜಿನ ಉಪನ್ಯಾಸಕ ಗುರುರಾಜ್, ಕ.ಸಾ.ಪ. ಅಧ್ಯಕ್ಷ ಗಂಗಾಧರ್ ನಾಯ್ಕ, ನ್ಯೂ ಇಂಗ್ಲಿಷ್ ಪ್ರೌಢಶಾಲೆಯ ವಿಶ್ರಾಂತ ಮುಖ್ಯಾದ್ಯಾಪಕ ಎಂ.ಕೆ.ನಾಯ್ಕ ಪತ್ರಕರ್ತ ಎಂ.ಆರ್.ಮಾನ್ವಿ ಮತ್ತಿತರರು ಮಾತನಾಡಿದರು.
ಹಿರಿಯ ಸಾಹಿತಿ ಡಾ.ಸೈಯ್ಯದ್ ಝಮಿರುಲ್ಲಾ ಷರೀಫ್ ಪ್ರಸ್ತಾವಿಕವಾಗಿ ಮಾತನಾಡಿದರು. ಖಲಿಫಾ ಜಮಾಅತ್ ನ ಅಂಝುಮ್ ಗಂಗೋಳಿ ಕಾರ್ಯಕ್ರಮ ನಿರೂಪಿಸಿದರು. ತಲ್ಹಾ ಸಿದ್ದಿಬಾಪ ಧನ್ಯವಾದ ಅರ್ಪಿಸಿದರು.







