ಬಿಜೆಪಿ ಬಂಡವಾಳಶಾಹಿ, ಖಾಸಗಿಯವರ ಕೈಗೊಂಬೆ: ಡಾ.ಹೇಮಲತಾ ಆರೋಪ
ಕುಂದಾಪುರದಲ್ಲಿ ಸಿಐಟಿಯು 15ನೇ ರಾಜ್ಯ ಸಮ್ಮೇಳನ ಉದ್ಘಾಟನೆ

ಕುಂದಾಪುರ, ನ.15: ಜಾತಿ, ಧರ್ಮದ ಹೆಸರಿನಲ್ಲಿ ದಲಿತ ದಮನಿತರನ್ನು ತುಳಿಯಲಾಗುತ್ತಿದೆ. ಕರಾವಳಿ ಜಿಲ್ಲೆಗಳಲ್ಲಿ ಲವ್ ಜಿಹಾದ್, ಹಿಜಾಬ್, ಅಝಾನ್ ಮೊದಲಾದ ವಿಚಾರದಲ್ಲಿ ಜನರ ನಡುವೆ ಕಂದಕ ಉಂಟು ಮಾಡುವ ಹುನ್ನಾರ ನಡೆಸಲಾಗುತ್ತಿದೆ. ಬಿಜೆಪಿ ಪಕ್ಷ ಬಂಡವಾಳಶಾಹಿಗಳು ಹಾಗೂ ಖಾಸಗಿಯವರ ಕೈಗೊಂಬೆಯಾಗಿದ್ದು ಇದಕ್ಕಾಗಿ ದುಡಿಯುವ ವರ್ಗವನ್ನು ಅನೈಕ್ಯಗೊಳಿಸುತ್ತಿದೆ ಎಂದು ಸಿಐಟಿಯು ಅಖಿಲ ಭಾರತ ಅಧ್ಯಕ್ಷೆ ಡಾ.ಕೆ.ಹೇಮಲತಾ ಹೇಳಿದ್ದಾರೆ.
ಕಾರ್ಮಿಕರ ಐಕ್ಯತೆ -ಜನತೆಯ ಸೌಹಾರ್ದತೆಗಾಗಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು) ವತಿಯಿಂದ ಮೂರು ದಿನಗಳ ಕಾಲ ಹಮ್ಮಿಕೊಳ್ಳಲಾದ 15ನೇ ರಾಜ್ಯ ಸಮ್ಮೇಳನವನ್ನು ಕುಂದಾಪುರ ಆರ್.ಎನ್. ಶೆಟ್ಟಿ ಕಲ್ಯಾಣ ಮಂಟಪದಲ್ಲಿ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಸಿಐಟಿಯು ನೇತೃತ್ವದಲ್ಲಿ ತಳಮಟ್ಟದಿಂದ ಹಿಡಿದು ರಾಜ್ಯ, ದೇಶಾದ್ಯಂತ ಊಹೆಗೂ ನಿಲುಕದ ಹೋರಾಟಗಳು ನಡೆದಿವೆ. ಸರಕಾರದ ಕೆಲವು ಅವೈಜ್ಞಾನಿಕ ನೀತಿಗಳು ಹೋರಾಟದ ಮೂಲಕವಾಗಿ ಹಿನ್ನಡೆ ಕಂಡಿದೆ. ಮುಂದಿನ ದಿನದಲ್ಲೂ ಕೂಡ ರೈತರು ಹಾಗೂ ದುಡಿಯುವ ವರ್ಗದ ಸಲುವಾಗಿ ಹೋರಾಟದ ರೂಪುರೇಷೆ ಸಿದ್ಧಗೊಳಿಸಲಾಗುತ್ತಿದೆ. ಮುಂದಿನ ವರ್ಷದ ಜನವರಿ ತಿಂಗಳಿನಲ್ಲಿ ನಡೆಯುವ ಸಿಐಟಿಯು 16ನೇ ಅಖಿಲ ಭಾರತ ಸಮ್ಮೇಳನದಲ್ಲಿ ನಿರ್ಣಯಗಳ ಜಾರಿ ಬಗ್ಗೆ ಪ್ರಮುಖವಾದ ಚರ್ಚೆ ನಡೆಯಲಿದೆ ಎಂದರು.
ಬಹಳ ಹಿಂದಿನಿಂದಲೂ ಆರ್ಥಿಕ ಬಿಕ್ಕಟ್ಟು ದೇಶದ ನಾಗರಿಕರನ್ನು ತಲ್ಲಣ ಗೊಳಿಸಿತ್ತು. ಬಳಿಕ ಕೋವಿಡ್ ಸಮಯ ದಲ್ಲಿ ಸರಕಾರ ಪರಿಸ್ಥಿತಿ ದುರ್ಬಳಕೆ ಮಾಡಿಕೊಂಡು ಜನರ ಬದುಕು ಹಾಗೂ ಜೀವನದೊಂದಿಗೆ ಚೆಲ್ಲಾಟವಾಡಿತ್ತು. ಲಸಿಕೀಕರಣ, ಆಸ್ಪತ್ರೆ ಬೆಡ್ ವಿಚಾರದಲ್ಲಿ ಸರಕಾರ ನಡೆದುಕೊಂಡ ರೀತಿ ಅಮಾನವೀಯ ಎಂದು ಅವರು ಟೀಕಿಸಿದರು.
ಬಹುರಾಷ್ಟ್ರೀಯ ಕಂಪೆನಿಗಳ ಪರವಾಗಿ ನಿಂತ ಸರಕಾರದ ವಿರುದ್ಧ ಮಾತನಾಡಲು, ಹೋರಾಡಲು ಹೊರಟವರಿಗೆ ಕಾಯ್ದೆ ಕಾನೂನುಗಳ ಹೆಸರಿನಲ್ಲಿ ಬಾಯಿ ಮುಚ್ಚಿಸಿ ಪ್ರತಿಭಟನೆ ಹತ್ತಿಕ್ಕಿ ಕೆಲವು ರೈತ ಹಾಗೂ ಕಾರ್ಮಿಕ ವಿರೋಧಿ ನೀತಿ ತರಲಾಯಿತು ಎಂದು ಆರೋಪಿಸಿದ ಅವರು, ವರ್ಷಗಳ ಕಾಲ ನಡೆದ ರೈತರ ಹೋರಾಟದಿಂದ ರೈತ ವಿರೋಧಿ ಕಾಯ್ದೆಗಳನ್ನು ವಾಪಸ್ಸು ಪಡೆದರೂ ಕೂಡಾ ರೈತರು, ಕಾರ್ಮಿಕರ ಇನ್ನಷ್ಟು ಬೇಡಿಕೆಗಳನ್ನು ಸರಕಾರ ಇನ್ನೂ ಈಡೇರಿಸಿಲ್ಲ ಎಂದರು.
ಈ ಸಂದರ್ಭ 2023ನೆ ಅಖಿಲ ಭಾರತ ಸಮ್ಮೇಳನದ ಅಂಗವಾಗಿ ಆಯೋಜಿಸಿರುವ ಕಿರುಚಿತ್ರ ಸ್ಪರ್ಧೆಯ ಪೋಸ್ಟರ್ ಬಿಡುಗಡೆಗೊಳಿಸಲಾಯಿತು. ಅಧ್ಯಕ್ಷತೆಯನ್ನು ಸಿಐಟಿಯು ರಾಜ್ಯಾಧ್ಯಕ್ಷೆ ಎಸ್.ವರಲಕ್ಷ್ಮೀ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಮಾಜಿ ಸಂಸದರು, ಸಿಐಟಿಯು ರಾಷ್ಟ್ರೀಯ ಪ್ರಧಾನ ಕಾರ್ಯ ದರ್ಶಿ ತಪನ್ ಸೇನ್, ಸಿಐಟಿಯು ರಾಷ್ಟ್ರೀಯ ಉಪಾಧ್ಯಕ್ಷ ಎ.ಕೆ.ಪದ್ಮನಾಭನ್, ಮುಖಂಡರಾದ ಕೆ.ಎನ್.ಉಮೇಶ್, ವಿ.ಜೆ.ಕೆ.ನಾಯರ್, ರಾಜ್ಯ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ, ರೈತ ಸಂಘಟನೆಯ ಪ್ರಾಂತ ಉಪಾಧ್ಯಕ್ಷ ಯು.ಬಸವರಾಜ್, ಸಿಐಟಿಯು 15ನೇ ರಾಜ್ಯ ಸಮ್ಮೇಳನದ ಸ್ವಾಗತ ಸಮಿತಿಯ ಗೌರವಾಧ್ಯಕ್ಷ ಕೆ.ಶಂಕರ್, ಕೋಶಾಧಿಕಾರಿ ಎಚ್.ನರಸಿಂಹ ಮೊದಲಾದವರು ಉಪಸ್ಥಿತರಿದ್ದರು.
ಉದ್ಘಾಟನಾ ಭಾಷಣವನ್ನು ಸಿಐಟಿಯು ರಾಜ್ಯ ಕಾರ್ಯದರ್ಶಿ ಪ್ರತಾಪಸಿಂಹ ಕನ್ನಡಕ್ಕೆ ಅನುವಾದಿಸಿದರು. ಸ್ವಾಗತ ಸಮಿತಿಯ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಸುರೇಶ ಕಲ್ಲಾಗರ ಕಾರ್ಯಕ್ರಮ ನಿರೂಪಿಸಿದರು.
‘ಜನಜಾಗೃತಿಗಾಗಿ ಪಾರ್ಲಿಮೆಂಟ್ ಚಲೋ’
ಆರೆಸೆಸ್ಸ್ ಪ್ರಾಯೋಜಕತ್ವದಲ್ಲಿ ಧರ್ಮ, ಜಾತಿ ಹೆಸರಿನಲ್ಲಿ ಜನರನ್ನು ವಿಭಜಿಸುವ ಹಾಗೂ ದೇಶದ ಏಕತೆಯನ್ನು ಒಡೆಯುತ್ತಿರುವ, ಅಭಿವೃದ್ಧಿ ಶೂನ್ಯ ವ್ಯವಸ್ಥೆ ವಿರುದ್ಧ ಜನಜಾಗೃತಿಗಾಗಿ ಮುಂದಿನ ದಿನಗಳಲ್ಲಿ ಲಕ್ಷಾಂತರ ಮಂದಿ ಜೊತೆಗೆ ಪಾರ್ಲಿಮೆಂಟ್ ಚಲೋ ಹಮ್ಮಿಕೊಳ್ಳಲಾಗುವುದು ಎಂದು ಡಾ.ಕೆ. ಹೇಮಲತಾ ತಿಳಿಸಿದರು.
ಡಬಲ್ ಇಂಜಿನ್ ಎಂದು ಕರೆಸಿಕೊಳ್ಳುವ ಸರಕಾರವು ತನ್ನ ಬಂಡವಾಳಶಾಹಿ ಹಾಗೂ ಜನವಿರೋಧಿ ನೀತಿಯಿಂದ ಬಡವರು, ಕಾರ್ಮಿಕರಿಗೆ ಸಮಸ್ಯೆ ತಂದೊಡ್ಡುತ್ತಿದೆ. ಬೆಲೆಏರಿಕೆ, ನಿರುದ್ಯೋಗ ಸಮಸ್ಯೆಯಿಂದ ಜನರು ಕಂಗಾಲಾಗಿದ್ದಾರೆ. ಸಾಫ್ಟ್‌ವೇರ್ ಉದ್ಯಮ ವಲಯದಲ್ಲಿ ಗಣನೀಯ ಪ್ರಮಾಣದಲ್ಲಿ ಉದ್ಯೋಗ ಕಡಿತ, ಆರ್ಥಿಕ ಸಂಕಷ್ಟದಿಂದ ಲಕ್ಷಾಂತರ ಸಣ್ಣ ಕೈಗಾರಿಕೆಗಳು ಮುಚ್ಚಿತ್ತಿವೆ. ಕೋಟ್ಯಾಂತರ ಮಂದಿ ಕಾರ್ಮಿಕರು ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆ. ಈ ಬಗ್ಗೆ ಜನಸಾಮಾನ್ಯರು ಎಚ್ಚೆತ್ತುಕೊಳ್ಳಬೇಕಾಗಿದೆ ಎಂದರು.








