ಉಡುಪಿ: ಮೂಳೆ ಸಾಂದ್ರತೆ, ಆರೋಗ್ಯ ತಪಾಸಣೆ ಶಿಬಿರ

ಉಡುಪಿ: ನವ್ಯಚೇತನ ಶಿಕ್ಷಣ ಸಂಶೋಧನೆ ಮತ್ತು ಕಲ್ಯಾಣ ಟ್ರಸ್ಟ್, ಶಿವಾನಿ ಡಯಗ್ನೋಸ್ಟಿಕ್ ಆ್ಯಂಡ್ ರೀಸರ್ಚ್ ಸೆಂಟರ್ ಇವರ ಜಂಟಿ ಆಶ್ರಯದಲ್ಲಿ ಮೂಳೆ ಸಾಂದ್ರತೆ ಮತ್ತು ವೈದ್ಯಕೀಯ ತಪಾಸಣೆಯ ಉಚಿತ ಶಿಬಿರ ವೊಂದು ನಗರದ ಗೋವಿಂದ ಕಲ್ಯಾಣ ಮಂಟಪದಲ್ಲಿ ನಡೆಯಿತು.
ಕಟಪಾಡಿ ಸರಸ್ವತಿ ಕ್ಲಿನಿಕ್‌ನ ಡಾ.ರವೀಂದ್ರನಾಥ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವೈದ್ಯ ವೃತ್ತಿ ಪವಿತ್ರವಾದದು. ಸಮಾಜದಲ್ಲಿರುವ ಜನರಿಗೆ ವೈದ್ಯರು ಸೇವೆ ನೀಡಿದಾಗ ವೈದ್ಯರಿಗೂ ಒಂದು ಸಂತೃಪ್ತ ಭಾವನೆ ಮೂಡುವುದು ಎಂದರು.
ಸೋದೆ ವಾದಿರಾಜ ಮಠ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ರತ್ನಕುಮಾರ್ ಮಾತನಾಡಿ, ಇಂದು ವೈದ್ಯಕೀಯ ಶಿಕ್ಷಣ ದುಬಾರಿಯಾಗಿದ್ದು ಸಂಪೂರ್ಣ ವ್ಯಾವಹಾರಿಕವಾಗಿದೆ. ಆದ್ದರಿಂದ ದುಬಾರಿ ಭೋದನಾ ಶುಲ್ಕ ನೀಡಿ ಶಿಕ್ಷಣ ಪಡೆದ ವಿದ್ಯಾರ್ಥಿ ಪವಿತ್ರವಾದ ವೈದ್ಯ ವೃತ್ತಿಯನ್ನು ಸೇವಾ ಮನೋಭಾವದಲ್ಲಿ ಹೇಗೆ ಕೆಲಸ ಮಾಡಲು ಸಾಧ್ಯ ಎಂದು ಖೇಧ ವ್ಯಕ್ತಪಡಿಸಿದರು.
ಟ್ರಸ್ಟ್‌ನ ಅಧ್ಯಕ್ಷ ಡಾ. ಶಿವಾನಂದ ನಾಯಕ್ ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ ಈಗಾಗಲೇ ಸುಮಾರು ೧೫ಕ್ಕೂ ಹೆಚ್ಚು ಉಚಿತ ವೈದ್ಯಕೀಯ ಶಿಬಿರಗಳನ್ನು ಮಾಡಿದೆ. ಮುಂದಿನ ದಿನಗಳಲ್ಲಿ ಟ್ರಸ್ಟ್ ಇನ್ನೂ ಹೆಚ್ಚು ಸಮಾಜಮುಖಿ ಕಾರ್ಯ ಮಾಡಲಿದೆ ಎಂದರು.
ಕೆಎಂಸಿ ಮಣಿಪಾಲದ ಮೂಳೆ ತಜ್ಞ ಡಾ. ಶಕ್ತಿ ಷಣ್ಮುಗನ್, ಹಿತಾಯು ಆಯುರ್ವೇದ ಕ್ಲಿನಿಕ್‌ನ ವೈದ್ಯ ಡಾ.ಅಜಿತ್ ಕೆ. ಎಸ್., ಕಡಿಯಾಳಿ ಆರ್ಯುವೀದಂ ಕ್ಲಿನಿಕ್‌ನ ವೈದೈ ಡಾ.ಅಂಬಿಕಾ ಶಿಬಿರದಲ್ಲಿ ಆರೋಗ್ಯ ತಪಾಸಣೆ ಮಾಡಿದರು. ನೂರಕ್ಕೂ ಹೆಚ್ಚು ಜನರು ಆರೋಗ್ಯ ತಪಾಸಣೆ ಮಾಡಿಸಿ ಶಿಬಿರದ ಪ್ರಯೋಜನವನ್ನು ಪಡೆದರು.
ನವ್ಯಚೇತನ ಟ್ರಸ್ಟ್‌ನ ಕಾರ್ಯದರ್ಶಿ ರಾಜಶಂಕರ ಸ್ವಾಗತಿಸಿ ಪರಿಚಯಿಸಿದರು. ಐಶ್ವರ್ಯ ಕಾರ್ಯಕ್ರಮ ನಿರೂಪಿಸಿದರು.







