ಸಿದ್ಧಾಪುರ: ವ್ಯಕ್ತಿತ್ವ ವಿಕಸನ ಮತ್ತು ಜೀವನ ಮೌಲ್ಯ ಶಿಬಿರ

ಸಿದ್ಧಾಪುರ, ನ.15: ಪರೀಕ್ಷೆಗಷ್ಟೇ ಓದುವುದಲ್ಲ. ದಿನನಿತ್ಯ ಯಾವುದಾದರೂ ಪುಸ್ತಕ ಅಥವಾ ಪತ್ರಿಕೆ ಓದುವ ಹವ್ಯಾಸ ವಿದ್ಯಾರ್ಥಿ ದಿಸೆಯಿಂದಲೇ ಬೆಳೆದಾಗ ಟಿವಿ, ಮೊಬೈಲ್ ಅತಿ ಬಳಕೆಯ ದುರಂತ ತಪ್ಪಿಸಲು ಸಾಧ್ಯ ಎಂದು ಸಿದ್ಧಾಪುರ ಗ್ರಾಪಂನ ಅಧ್ಯಕ್ಷ ಶೇಖರ್ ಕುಲಾಲ್ ಅಭಿಪ್ರಾಯ ಪಟ್ಟಿದ್ದಾರೆ.
ಇತ್ತೀಚೆಗೆ ಹಂಗಾರಕಟ್ಟೆಯ ಬಾಳ್ಕುದ್ರು ಅಭಿವೃದ್ಧಿ ಸಂಸ್ಥೆ, ಸಿದ್ಧಾಪುರ ಗ್ರಾಮ ಪಂಚಾಯತ್, ಮಾನಂಜೆ ವ್ಯವಸಾಯ ಸೇವಾ ಸಹಕಾರಿ ಸಂಘ ಮಾನಂಜೆ ಹಾಗೂ ಸರಕಾರಿ ಪ್ರೌಢಶಾಲೆ ಸಿದ್ಧಾಪುರ ಇದರ ರಾಷ್ಟ್ರೀಯ ಸೇವಾ ಯೋಜನೆ ಯ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡ ವ್ಯಕ್ತಿತ್ವ ವಿಕಸನ ಮತ್ತು ಜೀವನ ಮೌಲ್ಯಗಳ ಕುರಿತ ಶಿಬಿರವನ್ನು ಉದ್ಘಾಟಿಸಿ ಮಾತಾಡುತಿದ್ದರು.
ಮುಖ್ಯ ಅತಿಥಿಯಾಗಿ ಮಾನಂಜೆ ವ್ಯವಸಾಯ ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷ ರಘುರಾಮ್ ಶೆಟ್ಟಿ ಹಾಗೂ ಸಂಘದ ಕಾರ್ಯ ನಿರ್ವಹಣಾಧಿಕಾರಿ ಮಂಜುನಾಥ ನಾಯ್ಕ್ ಭಾಗವಹಿಸಿ ಮಾತನಾಡಿದರು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಅಬ್ದುಲ್ ರವೂಫ್ ಮಾತಾಡಿ, ವ್ಯಕ್ತಿತ್ವ ಎಂಬುದು ನಮ್ಮ ನಡೆ-ನುಡಿ ಆಚಾರ-ವಿಚಾರ, ಪ್ರೀತಿ, ಸಹನೆ, ತಾಳ್ಮೆಗಳನ್ನು ಅವಲಂಬಿಸಿದೆ. ಅಲ್ಲದೇ ಹಣವಂತರ ಪ್ರಪಂಚದಲ್ಲಿ ಗುಣವಂತಿಕೆ ತುಂಬಾ ಅನಿವಾರ್ಯವಾಗಿದೆ. ಸ್ವಾರ್ಥ ತುಂಬಿದ ಈ ಸಮಾಜದಲ್ಲಿ ವಿದ್ಯಾರ್ಥಿ ದಿಸೆಯಿಂದಲೇ ಮಾನವೀಯ ಮೌಲ್ಯಗಳನ್ನು ಬೆಳೆಸಬೇಕಾಗುತ್ತದೆ ಎಂದರು.
ಸಿದ್ಧಾಪುರ ಸರಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಚಂದ್ರ ಕುಲಾಲ್ ಸಭಾಧ್ಯಕ್ಷತೆ ವಹಿಸಿದ್ದರು. ಅವರು ಮಾತನಾಡಿ ಮಕ್ಕಳಲ್ಲಿ ವಿದ್ಯಾರ್ಥಿ ಜೀವನ ದಲ್ಲೇ ಉತ್ತಮ ಹವ್ಯಾಸವನ್ನು ಬೆಳೆಸಿ ಅನುಕರಿಸುವಂತೆ ಪ್ರೇರಣೆ ನೀಡಿದರು.
ಸಭೆಯಲ್ಲಿ ಲೇಖಕ ಮುಸ್ತಾಕ್ ಹೆನ್ನಾಬೈಲ್, ಸಂಘದ ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹೇಶ್ ರಾವ್, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಗಣೇಶ್ ಅಡಿಗ ಉಪಸ್ಥಿತರಿದ್ದರು.
ಶಾಲೆಯ ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ರಮಾನಂದ ನಾಯಕ್ ಸ್ವಾಗತಿಸಿದರೆ ರಮೇಶ್ ವಕ್ವಾಡಿ ಪ್ರಾಸ್ತಾವಿಕ ಮಾತನಾಡಿ ಕೊನೆಯಲ್ಲಿ ವಂದಿಸಿದರು. ಸುಧಾ ಭಟ್ ಬ್ರಹ್ಮಾವರ ಕಾರ್ಯಕ್ರಮ ನಿರೂಪಿಸಿದರು.







