ಉಡುಪಿ: ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಉದ್ಘಾಟನೆ

ಉಡುಪಿ: ಸಾರ್ವಜನಿಕ ಗ್ರಂಥಾಲಯ ಇಲಾಖೆ, ಜಿಲ್ಲಾ ಕೇಂದ್ರ ಗ್ರಂಥಾಲಯ ಉಡುಪಿ ಮತ್ತು ರಾಜಾರಾಮ್ ಮೋಹನ್ ರಾಯ್ ಗ್ರಂಥಾಲಯ ಪ್ರತಿಷ್ಠಾನ ಕೋಲ್ಕತ್ತಾ ಇವರ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಇಂದು ಅಜ್ಜರಕಾಡಿನಲ್ಲಿರುವ ವಿದ್ಯಾವಾಚಸ್ಪತಿ ಡಾ. ಬನ್ನಂಜೆ ಗೋವಿಂದಾಚಾರ್ಯ ಸ್ಮಾರಕ ಜಿಲ್ಲಾ ಕೇಂದ್ರ ಗ್ರಂಥಾಲಯದಲ್ಲಿ ಉದ್ಘಾಟನೆಗೊಂಡಿತು.
ಇದೇ ಸಂದರ್ಭದಲ್ಲಿ ಆಧುನಿಕ ಭಾರತದ ಪಿತಾಮಹ ರಾಜಾರಾಮ್ ಮೋಹನ್‌ರಾಯ್ ಜನ್ಮದಿನೋತ್ಸವದ ಪ್ರಯುಕ್ತ ಮಹಿಳಾ ಸಬಲೀಕರಣದ ಕುರಿತು ವಿದ್ಯಾರ್ಥಿಗಳಿಂದ ಜಾಥಾ, ರಾ.ಗ್ರಂಥಾಲಯ ಸಪ್ತಾಹ ಮತ್ತು ಡಿಜಿಟಲ್ ಸದಸ್ಯತ್ವ ಅಭಿಯಾನ, ಉತ್ತಮ ಸಿಬ್ಬಂದಿ/ ಉತ್ತಮ ಓದುಗ ಸೇವಾ ಪುರಸ್ಕಾರ ಮತ್ತು ಬಹುಮಾನ ವಿತರಣಾ ಕಾರ್ಯಕ್ರಮವೂ ನಡೆದವು.
ಬೋರ್ಡ್ ಹೈಸ್ಕೂಲ್‌ನಿಂದ ಅಜ್ಜರಕಾಡುವರೆಗೆ ನಡೆದ ಜಾಥಾಕ್ಕೆ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ಚಾಲನೆ ನೀಡಿದರು. ಜಿಲ್ಲಾ ಕೇಂದ್ರ ಗ್ರಂಥಾಲಯದಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ನಗರಸಭಾ ಸದಸ್ಯೆ ರಶ್ಮಿ ಚಿತ್ತರಂಜನ್ ಭಟ್ ಉದ್ಘಾಟಿಸಿದರು.
ಸಾಹಿತಿ ಹಾಗೂ ಜಿಲ್ಲಾ ಗ್ರಂಥಾಲಯ ಪ್ರಾಧಿಕಾರದ ಉಪಾಧ್ಯಕ್ಷೆ ವಸಂತಿ ಶೆಟ್ಟಿ ಬ್ರಹ್ಮಾವರ ಮಹಿಳಾ ಸಬಲೀಕರಣ ಕುರಿತು ಮತ್ತು ಸಾಹಿತಿ ಹಾಗೂ ಕಂಬದಕೋಣೆಯ ಸಂವೇದನಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಸುಬ್ರಹ್ಮಣ್ಯ ಭಟ್ ಆಧುನಿಕ ಭಾರತದ ಪಿತಾಮಹ ರಾಜಾರಾಮ್ ಮೋಹನ್‌ರಾಯ್ ಜೀವನ ಚರಿತ್ರೆ ಕುರಿತು ಉಪನ್ಯಾಸ ನೀಡಿದರು.
ನಗರ ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಾಲಯಾಧಿಕಾರಿ ನಳಿನಿ ಜಿ.ಐ ಉಪಸ್ಥಿತರಿದ್ದರು. ಇದೇ ಸಂದರ್ಭ ದಲ್ಲಿ ಉತ್ತಮ ಸೇವಾ ಮತ್ತು ಉತ್ತಮ ಓದುಗ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು.
ಜಿಲ್ಲಾ ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಾಲಯಾಧಿಕಾರಿ ಜಯಶ್ರೀ ಸ್ವಾಗತಿಸಿ, ವಿನುತಾ ಬಿ ನಿರೂಪಿಸಿದರು. ಶಂಕುತಲಾ ಕುಂದರ್ ವಂದಿಸಿದರು.

