ನ.19ಕ್ಕೆ ಬೆಂಗಳೂರು ರಸ್ತೆಗುಂಡಿ ಮುಕ್ತ ನಗರ: BBMP ಮುಖ್ಯ ಆಯುಕ್ತ ತುಷಾರ್ ಗಿರಿನಾಥ್

ಬೆಂಗಳೂರು, ನ. 15: ಬಿಬಿಎಂಪಿ (BBMP) ವ್ಯಾಪ್ತಿಯಲ್ಲಿ ನ.19ರೊಳಗೆ ರಸ್ತೆಗುಂಡಿಗಳನ್ನು ಸಂಪೂರ್ಣವಾಗಿ ಮುಚ್ಚಲಾಗುತ್ತದೆ ಎಂದು ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ.
ಮಂಗಳವಾರ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರದಲ್ಲಿ ನಾಲೈದು ದಿನಗಳಿಂದ ಹವಮಾನ ವೈಪರೀತ್ಯ ಉಂಟಾಗಿದ್ದು, ರಸ್ತೆಗುಂಡಿಗಳನ್ನು ನಿರೀಕ್ಷಿಸಿತ ದಿನಾಂಕದೊಳಗೆ ಮುಚ್ಚಲಾಗಲಿಲ್ಲ. ಮೇ ತಿಂಗಳಿನಿಂದ ಇದುವರೆಗೂ ನಗರ ವ್ಯಾಪ್ತಿಯಲ್ಲಿ 33 ಸಾವಿರ ಗುಂಡಿಗಳನ್ನು ಗುರುತಿಸಲಾಗಿದೆ. ಅದರಲ್ಲಿ 32 ಸಾವಿರ ರಸ್ತೆ ಗುಂಡಿಗಳನ್ನು ಮುಚ್ಚಲಾಗಿದೆ. ಒಂದು ಸಾವಿರ ರಸ್ತೆಗುಂಡಿಗಳು ಬಾಕಿ ಇದ್ದು, ಎರಡು ದಿನಗಳಲ್ಲಿ ಮುಚ್ಚಲಾಗುತ್ತದೆ ಎಂದರು.
ರಾಜಾಜಿನಗರದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ವ್ಯಕ್ತಿ ಮೃತಪಟ್ಟಿದ್ದು, ರಸ್ತೆ ಗುಂಡಿ ಅಪಘಾತಕ್ಕೆ ಕಾರಣವಲ್ಲ ಎಂದು ದೃಷ್ಯಾವಳಿಗಳಲ್ಲಿ ಕಂಡು ಬಂದಿದೆ. ಈ ಕುರಿತು ಪೋಲಿಸ್ ತನಿಖೆ ಮಾಡುತ್ತಿದ್ದಾರೆ. ತನಿಖಾ ವರದಿ ಬಳಿಕ ಕ್ರಮ ವಹಿಸಲಾಗುವುದು ಎಂದು ಅವರು ಹೇಳಿದರು.
ನಗರದಲ್ಲಿ ಪ್ಲೆಕ್ಸ್, ಬ್ಯಾನರ್ ಅಳವಡಿಕೆ ಹೆಚ್ಚಾಗುತ್ತಿದ್ದು, ಕಾನೂನುಬಾಹಿರವಾಗಿ ಅಳವಡಿಸಿದ ಪ್ಲೆಕ್ಸ್, ಬ್ಯಾನರ್ ಕುರಿತು ಆಯಾ ವಲಯ ವ್ಯಾಪ್ತಿಯ ಅಧಿಕಾರಿಗಳೇ ಕ್ರಮ ವಹಿಸಬೇಕು ಎಂದು ತಿಳಿಸಿದರು.







