ಅಖಿಲ ಭಾರತ ಸಹಕಾರಿ ಸಪ್ತಾಹ ಉದ್ಘಾಟನೆ

ಮಂಗಳೂರು: ಅಖಿಲ ಭಾರತ 69ನೇ ಸಹಕಾರಿ ಸಪ್ತಾಹವನ್ನು ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಆವರಣದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಹಾಗೂ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು ಹಾಲು ಮತ್ತು ಹಾಲಿನ ಉತ್ಪನ್ನಗಳಿಗೆ ಹೆಚ್ಚಿನ ಬೇಡಿಕೆ ಇದೆ.ಹೈನುಗಾರಿಕೆಯ ಬೆಳವಣಿಗೆಯಲ್ಲಿ ಸ್ತ್ರೀ ಶಕ್ತಿಯ ಪಾತ್ರವೂ ಪ್ರಮುಖವಾದುದು. ರೈತರಿಗೆ ಸ್ವಾವಲಂಬಿಯಾಗಿ ಬದುಕಲು ಅವಕಾಶ ಕಲ್ಪಿಸಿದ ಸಂಸ್ಥೆ ಕೆಎಂಎಫ್ ಆಗಿದೆ. ಮುಂದಿನ ದಿನಗಳಲ್ಲಿ ಸಹಕಾರಿ ಕ್ಷೇತ್ರಕ್ಕೆ ಇನ್ನಷ್ಟು ಹೆಚ್ಚಿನ ಮಂದಿ ಬರುವ ಅವಶ್ಯಕತೆಯಿದೆ. ದ.ಕ. ಹಾಲು ಒಕ್ಕೂಟವು ಸಹಕಾರಿ ಕ್ಷೇತ್ರದಲ್ಲಿ ಗಣನೀಯವಾದ ಸಾಧನೆಗೈದಿದೆ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ದ.ಕ ಜಿಲ್ಲಾ ಸಹಕಾರ ಯೂನಿಯನ್‌ನ ಅಧ್ಯಕ್ಷ ಬೆಳ್ಳಿಪ್ಪಾಡಿ ಪ್ರಸಾದ್ ಕೌಶಲ್ ಶೆಟ್ಟಿ ಮಹಿಳೆಯರು ಸಹಕಾರಿ ಕ್ಷೇತ್ರದ ಶಕ್ತಿಯಾಗಿದ್ದಾರೆ. ಗ್ರಾಮೀಣಾಭಿವೃದ್ದಿಯ ಬೆಳವಣಿಗೆಯಲ್ಲಿ ಹೈನುಗಾರಿಕೆಯ ಪಾತ್ರ ಪ್ರಮುಖವಾದುದು. ಜಿಲ್ಲಾ ಸಹಕಾರ ಯೂನಿಯನ್ ವತಿಯಿಂದ 6 ತರಬೇತಿ ಕಾರ್ಯಕ್ರಮಗಳನ್ನು ನೀಡಲಾಗಿದೆ. ಈ ಮೂಲಕ ಯುವ ಜನತೆಗೆ ಸಹಕಾರಿ ಕ್ಷೇತ್ರದ ಬಗ್ಗೆ ಅರಿವು ಮೂಡಿಸಲಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ದಕ್ಷಿಣ ಕನ್ನಡ ಸಹಕಾರಿ ಹಾಲು ಒಕ್ಕೂಟದ ಅಧ್ಯಕ್ಷ ಕೆ.ಪಿ ಸುಚರಿತ ಶೆಟ್ಟಿ ಒಕ್ಕೂಟವು ರೈತರಿಂದ ಉತ್ತಮ ಗುಣಮಟ್ಟದ ಹಾಲನ್ನು ಸಂಗ್ರಹಿಸಿ, ಸಂಸ್ಕರಿಸಿ ಗ್ರಾಹಕರಿಗೆ ಉತ್ತಮ ಉತ್ಪನ್ನಗಳನ್ನು ನೀಡುತ್ತಿದೆ. ಹೈನುಗಾರರ ಸರ್ವತೋಮುಖ ಅಭಿವೃದ್ದಿಗಾಗಿ ಒಕ್ಕೂಟವು ಹಲವು ಹೊಸ ಯೊಜನೆಗಳನ್ನು ಮುಂದಿನ ದಿನಗಳಲ್ಲಿ ಹಮ್ಮಿಕೊಳ್ಳಲಿದೆ ಎಂದರು.
ಪ್ರಾಧ್ಯಾಪಕ ಸಂತೋಷ್ ಕುಮಾರ್ ಶೆಟ್ಟಿ ಸಪ್ತಾಹದ ಕುರಿತು ದಿಕ್ಸೂಚಿ ಭಾಷಣ ಮಾಡಿದರು.
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಲದ ಅಧ್ಯಕ್ಷರಾಗಿ ಆಯ್ಕೆಯಾದ ಡಾ.ಎಂ.ಎನ್ ರಾಜೇಂದ್ರ ಕುಮಾರ್, ಮಹಾಮಂಡಲದ ನಿರ್ದೇಶಕರಾಗಿ ಆಯ್ಕೆಯಾದ ಡಾ.ಬೆಳಪು ದೇವಿಪ್ರಸಾದ್ ಶೆಟ್ಟಿ, ದ.ಕ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಪ್ರಸಾದ್ ಕೌಶಲ್ ಶೆಟ್ಟಿ ಅವರನ್ನು ಒಕ್ಕೂಟದ ವತಿಯಿಂದ ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಒಕ್ಕೂಟದ ನಿರ್ದೇಶಕರಾದ ರವಿರಾಜ್ ಹೆಗ್ಡೆ, ನಿರಂಜನ್ ಬಿ, ನಾರಾಯಣ ಪ್ರಕಾಶ್, ಸುಧಾಕರ್ ಶೆಟ್ಟಿ ಮುಡಾರು, ನರಸಿಂಹ ಕಾಮತ್, ಕಮಲಾಕ್ಷ ಹೆಬ್ಬಾರ್, ಸಾವಿತ್ರಿ ರೈ, ಸವಿತಾ ಎನ್.ಶೆಟ್ಟಿ, ಸ್ಮಿತಾ ಆರ್. ಶೆಟ್ಟಿ, ಸುಭದ್ರಾ ರಾವ್ ಉಪಸ್ಥಿತರಿದ್ದರು.
ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಡಿ.ಅಶೋಕ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಉಪಾಧ್ಯಕ್ಷ ಎಸ್.ಬಿ. ಜಯರಾಮ ರೈ ಬಳಜ್ಜ ಸ್ವಾಗತಿಸಿದರು. ಸಿಬ್ಬಂದಿ ನಿತೇಶ್ ರೈ ಪ್ರಾರ್ಥಿಸಿದರು. ಜಾನೆಟ್ ರೋಸಾರಿಯೋ ಕಾರ್ಯಕ್ರಮ ನಿರೂಪಿಸಿದರು. ಕರ್ನಾಟಕ ರಾಜ್ಯ ಹಾಲು ಮಹಾಮಂಡಲದ ನಿರ್ದೇಶಕ ಕಾಪು ದಿವಾಕರ ಶೆಟ್ಟಿ ವಂದಿಸಿದರು.