ಹರೇಕಳ: ಪಂಚಾಯತ್ ಕಟ್ಟಡದಲ್ಲಿ ಅರಳಿದ ಹಾಜಬ್ಬರ ಚಿತ್ತಾರ
ಕೊಣಾಜೆ: ಹರೇಕಳ ಎಂಬ ಗ್ರಾಮದ ಹೆಸರನ್ನು ಜಗತ್ತಿನೆಲ್ಲೆಡೆ ಪಸರಿಸಿದ ಕೀರ್ತಿ ಹರೇಕಳ ಹಾಜಬ್ಬ ರಿಗೆ ಸಲ್ಲುತ್ತದೆ. ಇದೀಗ ಅದೇ ಹರೇಕಳ ಹಾಜಬ್ಬರ ಭಾವಚಿತ್ರವು ಗ್ರಾಮದ ಮುಖ್ಯ ಕೇಂದ್ರವಾಗಿರುವ ನೂತನ ಗ್ರಾಮ ಪಂಚಾಯಿತಿ ಕಟ್ಟಡದ ಹೊರ ಭಾಗದಲ್ಲಿ ಗೋಡೆಯಲ್ಲಿ ಆಕರ್ಷಣೀಯವಾಗಿ ಮೂಡಿ ಬಂದಿದ್ದು, ಈ ಮೂಲಕ ಹಾಜಬ್ಬರ ಕೊಡುಗೆಯನ್ನು ಸ್ಮರಿಸಿ ಗೌರವಿಸುವ ಕಾರ್ಯಕ್ಕೆ ಮುಂದಾಗಿದೆ.
ಕಿತ್ತಲೆ ವ್ಯಾಪಾರ ಮಾಡಿ ಜೀವನ ಸಾಗಿಸುತ್ತಿದ್ದ ಹರೇಕಳ ಹಾಜಬ್ಬ ಅವರಲ್ಲಿ ಮೂಡಿದ ಅಕ್ಷರ ಕ್ರಾಂತಿಯು ಅವರ ಕೀರ್ತಿಯನ್ನು ಈ ಎತ್ತರಕ್ಕೆ ನಿಲ್ಲಿಸಿದೆ. ಗ್ರಾಮದಲ್ಲಿ ಶಾಲೆ ಆರಂಭಿಸಬೇಕೆಂಬ ಅವರ ಕನಸಿಗೆ ಅವಿರತ ಹೋರಾಟ, ಪರಿಶ್ರ, ಇಲಾಖೆ, ಜನಪ್ರತಿನಿಧಿಗಳಲ್ಲಿಗೆ ಅಲೆದಾಟ ಪರಿಣಾಮ ಇಂದು ಶಾಲೆ ಹಂತ ಹಂತವಾಗಿ ಹೈಸ್ಕೂಲ್ ವರೆಗೂ ಬೆಳೆದಿದೆ. ಅವರ ಕನಸಿನ ಪಿಯು ಕಾಲೇಜು ಕೂಡಾ ನಿರ್ಮಾಣಗೊಳ್ಳುವ ಯೋಜನೆಯೂ ಸಾಕರಗೊಳ್ಳುವ ಹಂತಕ್ಕೆ ಬಂದಿದೆ. ಅಕ್ಷರ ಸಂತ ಹಾಜಬ್ಬರಿಗೆ ಅನೇಕ ಪ್ರತಿಷ್ಠಿತ ಪ್ರಶಸ್ತಿಗಳು ಸಂದಿವೆ. ಜೊತೆಗೆ ಅಕ್ಷರ ಸಂತನಿಗೆ ಒಲಿದ ಪದ್ಮಶ್ರೀ ಇಡೀ ಜಗತ್ತಿಗೇ ಅವರನ್ನು ಪರಿಚಯಿಸುವಂತೆ ಮಾಡಿದೆ.
ಇಂತಹ ಅಕ್ಷರ ಸಂತ ಹಾಜಬ್ಬರೊಂದಿಗೆ ಹರೇಕಳದ ಹೆಸರೂ ಪ್ರಸಿದ್ಧವಾಗಿದೆ. ಹಾಜಬ್ಹರ ಪ್ರಸಿದ್ದಿಯೊಂದಿಗೆ ಹಾಜಬ್ಬರ ಹೆಸರು ಕೂಡಾ ಇಂದು ಪ್ರಸಿದ್ಧಿಯನ್ನು ಪಡೆದಿದೆ. ಇದೀಗ ಹರೇಕಳ ಬಾವಲಿಗುರಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ನೂತನ ಗ್ರಾಮಪಂಚಾಯಿತಿಯ ಕೆಲಸ ಕಾರ್ಯ ಮುಗಿಯುತ್ತಾ ಬಂದಿದೆ. ಇದೀಗ ಕಟ್ಟಡದ ಒಂದು ಭಾಗದ ಡಿಜಿಟಲ್ ಗ್ರಂಥಾಲಯದ ಗೋಡೆಯಲ್ಲಿ ಹರೇಕಳ ಹಾಜಬ್ಬರ ಚಿತ್ರವನ್ನು ಬಿಡಿಸುವ ಮೂಲಕ ಹರೇಕಳ ಗ್ರಾಮಸ್ಥರು ಕೂಡಾ ಹಾಜಬ್ಬರಿಗೆ ಆ ಮೂಲಕ ಗೌರವ ಸಲ್ಲಿಸಲು ಮುಂದಾಗಿದೆ ಶ್ಲಾಘನೀಯವಾಗಿದೆ.
ನನ್ನ ಭಾವಚಿತ್ರವನ್ನು ಪಂಚಾಯತಿ ಕಟ್ಟಡದ ಗೋಡೆಯಲ್ಲಿ ಬಿಡಿಸಿ ನನ್ನ ಮೇಲೆ ಅಭಿಮಾನ ತೋರಿದ ಗ್ರಾಮಸ್ಥರು, ಜನಪ್ರತಿನಿಧಿಗಳಿಗೆ ಚಿರ ಋಣಿಯಾಗಿದ್ದೇನೆ.
ಹರೇಕಳ ಹಾಜಬ್ಬ