ಮೂಡುಬಿದಿರೆ: ರೈತರಿಗೆ ತಪ್ಪು ಮಾಹಿತಿ ನೀಡಿ ಸರ್ವೇಗೆ ಯತ್ನ ಆರೋಪ; ಸ್ಥಳೀಯರ ಆಕ್ಷೇಪ

ಮೂಡುಬಿದಿರೆ, ನ. 16: ಪಡುಬಿದ್ರಿ ಯುಪಿಸಿಎಲ್ ನಿಂದ ಕೇರಳಕ್ಕೆ ವಿದ್ಯುತ್ ಸರಬರಾಜಿಗಾಗಿ ಸ್ಥಳೀಯ ರೈತರಿಗೆ ತಪ್ಪು ಮಾಹಿತಿ ನೀಡಿ ಸರ್ವೇ ನಡೆಸಲು ಯತ್ನಿಸಿದ್ದಾರೆ ಎನ್ನಲಾದ ಘಟನೆ ಮಂಗಳವಾರ ನಿಡ್ಡೋಡಿ ಕೊಲತ್ತಾರು ಪದವು ಬಳಿ ನಡೆದಿದ್ದು, ಮಾತೃಭೂಮಿ ಸಂರಕ್ಷಣಾ ಸಮಿತಿಯವರು ಹಾಗೂ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದರು.
ತೆಂಕಮಿಜಾರು ಗ್ರಾಮ ವ್ಯಾಪ್ತಿಯಲ್ಲಿ ರೈತರಿಂದ ಬಲಾತ್ಕಾರವಾಗಿ ಸಹಿ ಪಡೆದು ಸರ್ವೇ ನಡೆಸಲು ತಂಡ ಆಗಮಿಸಿತ್ತು ಎಂದು ದೂರಲಾಗಿದೆ.
ವಿಷಯ ತಿಳಿದ ಸ್ಥಳೀಯರು ಹಾಗೂ ಮಾತೃಭೂಮಿ ಸಂರಕ್ಷಣಾ ಸಮಿತಿ ಅಧ್ಯಕ್ಷ ಅಲ್ಫೋನ್ಸ್ ಡಿ'ಸೋಜಾ ಮೊದಲಾದವರು ಸ್ಥಳಕ್ಕಾಗಮಿಸಿ ಸರ್ವೇ ಕಾರ್ಯ ನಡೆಸದಿರುವಂತೆ ಆಗ್ರಹಿಸಿದರು. ಈ ವೇಳೆ ಪ್ರತಿಭಟನಾಕಾರರು ಮತ್ತು ಸರ್ವೇಗಾಗಿ ಬಂದವರ ನಡುವೆ ಮಾತಿನ ಚಕಮಕಿ ನಡೆಯಿತು ಎಂದು ತಿಳಿದುಬಂದಿದೆ.
ತೆಂಕಮಿಜಾರು ಗ್ರಾಮಕರಣಿಕರ ನೆರವು ಪಡೆದು ಸ್ಥಳೀಯ ರೈತರಿಗೆ ತಪ್ಪು ಮಾಹಿತಿ ನೀಡಲಾಗಿದೆ ಎನ್ನಲಾಗುತ್ತಿದ್ದು, ವಾಸ್ತವ ಅರಿತ ಸ್ಥಳೀಯರು ನ್ಯಾಯಾಲಯದಲ್ಲಿ ದಾವೆ ಹೂಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಕಲ್ಲಮುಂಡ್ಕೂರು ಗ್ರಾಮ ಪಂಚಾಯತ್ ಅಧ್ಯಕ್ಷ ಕೇಶವ, ರಾಮ ಗೌಡ, ಜನಾರ್ದನ ಗೌಡ, ಮಾಧವ ಗೌಡ ಮೊದಲಾದವರು ಸೇರಿದಂತೆ ನೂರಾರು ಮಂದಿ ಸ್ಥಳೀಯರು ಜಮಾಯಿಸಿದ್ದರು.