ಮಲ್ಪೆ ಬೀಚ್‌ನಲ್ಲಿ ಪ್ರವಾಸಿಗರ ಸುರಕ್ಷತೆಗೆ ಗರಿಷ್ಠ ಆದ್ಯತೆ ನೀಡಿ: ಜಿಲ್ಲಾಧಿಕಾರಿ ಕೂರ್ಮರಾವ್

ಉಡುಪಿ, ನ.16: ಮಲ್ಪೆ ಬೀಚ್ ಮತ್ತು ಸೈಂಟ್ ಮೇರಿಸ್ ದ್ವೀಪಕ್ಕೆ ಅಗಮಿಸುವ ಪ್ರವಾಸಿಗರ ಸುರಕ್ಷತೆಗೆ ಬೀಚ್ ನಿರ್ವಹಣೆಯನ್ನು ವಹಿಸಿ ಕೊಂಡಿರುವವರು ಗರಿಷ್ಠ ಆದ್ಯತೆ ನೀಡಬೇಕು. ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವ ಕುರಿತು, ಪ್ರತ್ಯೇಕ ಪ್ರಾಮಾಣೀಕೃತ ಕಾರ್ಯ ವಿಧಾನಗಳನ್ನು (ಎಸ್‌ಓಪಿ) ರಚಿಸಿ ಅದರಂತೆ ಕಾರ್ಯ ನಿರ್ವಹಿಸಬೇಕು ಎಂದು ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ಸೂಚನೆ ನೀಡಿದ್ದಾರೆ.
ಬುಧವಾರ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಮಲ್ಪೆ ಅಭಿವೃದ್ಧಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.
ಮಲ್ಪೆ ಬೀಚ್‌ಗೆ ದೇಶ-ವಿದೇಶಗಳವಿವಿಧ ಭಾಗಗಳಿಂದ ಪ್ರತಿದಿನ ಸಾವಿರಾರು ಪ್ರವಾಸಿಗರು ಆಗಮಿಸುತ್ತಿದ್ದು, ಅವರಿಗೆ ಬೀಚ್‌ನಲ್ಲಿ ಯಾವುದೇ ಅವಘಡಗಳು ಸಂಭವಿಸದಂತೆ ಪಾಲಿಸಬೇಕಾದ ಸುರಕ್ಷತಾ ಕ್ರಮಗಳ ಬಗ್ಗೆ ಈಗಾಗಲೇ ವಿವಿಧೆಡೆಗಳಲ್ಲಿ ಇರುವ ಅಂತಾರಾಷ್ಟ್ರೀಯ ಮಾನದಂಡಗಳನ್ನು ಅಧ್ಯಯನ ಮಾಡಿ, ಮಲ್ಪೆ ಬೀಚ್‌ನಲ್ಲಿ ಸುರಕ್ಷತೆಗೆ ಸಂಬಂಧಿಸಿದಂತೆ ಪ್ರತ್ಯೇಕ ಎಸ್‌ಓಪಿ ರಚಿಸಲಾಗಿದೆ. ಅದರಂತೆ ಬೀಚ್ ಉಸ್ತುವಾರಿ ವಹಿಸಿಕೊಂಡಿರುವವರು ಮತ್ತು ಜೀವ ರಕ್ಷಕರು ಕಾರ್ಯನಿರ್ವಹಿಸುವ ಮೂಲಕ ಪ್ರವಾಸಿಗರು ಅತ್ಯಂತ ಸುರಕ್ಷಿತ ವಾತಾವರಣದಲ್ಲಿ ತಮ್ಮ ಪ್ರವಾಸ ಕ್ಷಣಗಳನ್ನು ಆನಂದಿಸಲು ವ್ಯವಸ್ಥೆ ಮಾಡಬೇಕು ಎಂದರು.
ಬೀಚ್ ನಿರ್ವಹಣಾ ಸಂಸ್ಥೆಯ ಸಿಬ್ಬಂದಿಗಳಿಗೆ ಪ್ರವಾಸಿಗರ ಸ್ನೇಹಿಯಾಗಿ ವರ್ತಿಸುವ ಬಗ್ಗೆ ಮತ್ತು ಸುರಕ್ಷತಾ ಕ್ರಮಗಳನ್ನು ಸಮರ್ಪಕವಾಗಿ ಅನುಷ್ಠಾನ ಮತ್ತು ನಿರಂತರವಾಗಿ ಪಾಲನೆ ಮಾಡಲು ಆಗಾಗ್ಗೆ ತರಬೇತಿ ಕಾರ್ಯಾಗಾರಗಳನ್ನು ಆಯೋಜಿಸಬೇಕು. ಬೀಚ್‌ನಲ್ಲಿ ಪ್ರವಾಸಿಗರ ಸುರಕ್ಷತೆಗೆ ಅವಶ್ಯಕ ಇರುವ ಹೆಚ್ಚಿನ ಭದ್ರತಾ ಉಪಕರಣಗಳು, ವಾಹನಗಳು ಮತ್ತಿತರ ಸೌಲಭ್ಯಗಳ ಬಗ್ಗೆ ಸಮಿತಿಯ ಗಮನಕ್ಕೆ ತರುವಂತೆ ಸೂಚಿಸಿದರು.
ಮಲ್ಪೆ ಬೀಚ್‌ನಿಂದ ದ್ವೀಪಕ್ಕೆ ತೆರಳುವ ಬೋಟುಗಳಲ್ಲಿ ಎಲ್ಲಾ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು. ಎಲ್ಲಾ ಪ್ರಯಾಣಿಕರು ತಪ್ಪದೇ ಲೈಫ್ ಜಾಕೆಟ್ ಗಳನ್ನು ಹಾಕಿಕೊಳ್ಳುವಂತೆ ತಿಳಿಸಬೇಕು. ಲೈಫ್‌ಜಾಕೆಟ್ ಇಲ್ಲದೆ ಪ್ರಯಾಣಿಕರನ್ನು ಕರೆದು ಕೊಂಡು ಹೋದಲ್ಲಿ ಸಂಬಂಧಪಟ್ಟ ಬೋಟುಗಳಿಗೆ ದಂಡ ವಿಧಿಸಲಾ ಗುವುದು ಮತ್ತು ಲೈಸೆನ್ಸ್ ರದ್ದುಪಡಿಸಲಾಗುವುದು. ಈ ಬಗ್ಗೆ ಕರಾವಳಿ ಕಾವಲು ಪಡೆಯಿಂದ ಪರಿಶೀಲನೆ ನಡೆಸುವಂತೆ ಸೂಚನೆ ನೀಡಿದರು.
ಬೀಚ್‌ನಲ್ಲಿರುವ ಗೂಡಂಗಡಿಗಳಲ್ಲಿ ಪ್ರವಾಸಿಗರಿಗೆ ಶುದ್ಧ, ಕಲಬೆರಕೆ ಮತ್ತು ರಾಸಾಯನಿಕ ಬಳಕೆ ರಹಿತ ಆಹಾರ ಪದಾರ್ಥಗಳನ್ನು ಮಾರಾಟ ಮಾಡುತ್ತಿ ರುವ ಬಗ್ಗೆ ಹಾಗೂ ನಿಗದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಮತ್ತು ಅನುಮತಿ ಇಲ್ಲದೇ ಅನಧಿಕೃತವಾಗಿ ಕಾರ್ಯ ನಿರ್ವಹಿಸುತ್ತಿರುವ ಅಂಗಡಿಗಳ ಕುರಿತು, ಆಹಾರ ಸುರಕ್ಷತಾ ಅಧಿಕಾರಿಗಳು, ನಗರಸಭೆ ಮತ್ತು ಪೊಲೀಸ್ ಇಲಾಖೆ ವತಿಯಿಂದ ಜಂಟಿ ತಪಾಸಣೆ ನಡೆಸಿ ವರದಿ ನೀಡುವಂತೆ ತಿಳಿಸಿದರು.
ಜಿಲ್ಲಾ ರಜತ ಮಹೋತ್ಸವದ ಅಂಗವಾಗಿ 2023ರ ಜನವರಿ 21ರಿಂದ 23 ರವರೆಗೆ ಬೀಚ್ ಉತ್ಸವ ಆಯೋಜಿಸುವ ಕುರಿತಂತೆ ಹಾಗೂ ಮಲ್ಪೆ ಹಾಗೂ ಪಡುಕೆರೆಯಲ್ಲಿರುವ ಬಂದರು ಇಲಾಖೆಯ ಜಾಗವನ್ನು ಉಪಯೋಗಿಸಿಕೊಂಡು ಆ ಪ್ರದೇಶದಲ್ಲಿ ಹೆಚ್ಚಿನ ಪ್ರವಾಸೋದ್ಯಮ ಚಟುವಟಿಕೆಗಳನ್ನು ಕೈಗೊಳ್ಳುವ ಬಗ್ಗೆ ಚರ್ಚೆ ನಡೆಸಲಾಯಿತು.
ಮಲ್ಪೆ ಅಭಿವೃದ್ಧಿ ಸಮಿತಿ ಮಾದರಿಯಲ್ಲಿ ಪಡುಕೆರೆ ಬೀಚ್ ಅಭಿವೃದ್ಧಿಗೂ ಸಹ ಪ್ರತ್ಯೇಕ ಸಮಿತಿ ರಚಿಸಿ, ಪಡುಕೆರೆಯಲ್ಲಿ ಹೆಚ್ಚಿನ ಪ್ರವಾಸೋದ್ಯಮ ಚಟುವಟಿಕೆಗಳನ್ನು ಅಭಿವೃದ್ಧಿ ಪಡಿಸುವಂತೆ ಮತ್ತು ಮಲ್ಪೆ ಬೀಚ್‌ನ ಉತ್ತರ ಭಾಗದಲ್ಲಿ ಪ್ರವಾಸೋದ್ಯಮವನ್ನು ಅಭಿವೃದ್ಧಿ ಪಡಿಸಲು ಸಾಕಷ್ಟು ಅವಕಾಶಗಳಿದ್ದು, ಈ ಬಗ್ಗೆ ಮಾಸ್ಟರ್ ಪ್ಲಾನ್ ತಯಾರಿಸುವಂತೆ ಶಾಸಕ ರಘುಪತಿ ಭಟ್ ಸಲಹೆ ನೀಡಿದರು.
ಸಭೆಯಲ್ಲಿ ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಮೀನುಗಾರಿಕಾ ಫೆಡರೇಷನ್ ಅಧ್ಯಕ್ಷ ಯಶ್‌ಪಾಲ್ ಸುವರ್ಣ, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ, ಪೌರಾಯುಕ್ತ ಉದಯಕುಮಾರ್ ಶೆಟ್ಟಿ, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ (ಪ್ರಭಾರ) ಗುರುಪ್ರಸಾದ್, ವಿವಿಧ ಇಲಾಖೆಗಳ ಅಧಿಕಾರಿಗಳು, ಮಲ್ಪೆ ಭಾಗದ ನಗರಸಭಾ ಸದಸ್ಯರು, ಮಲ್ಪೆ ಬೀಚ್ ನಿರ್ವಹಣಾ ಟೆಂಡರ್‌ದಾರರು, ಭಜನಾ ಮಂಡಳಿಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.








