ಉಡುಪಿ ಮಿಷನ್ ಆಸ್ಪತ್ರೆಗೆ ಎನ್‌ಎಬಿಎಚ್ ಮಾನ್ಯತೆ

ಉಡುಪಿ, ನ.16: ಉಡುಪಿಯ ಸಿಎಸ್‌ಐ ಲೊಂಬಾರ್ಡ್ ಸ್ಮಾರಕ(ಮಿಷನ್) ಆಸ್ಪತ್ರೆಗೆ ನವದೆಹಲಿಯ ರಾಷ್ಟ್ರೀಯ ಆಸ್ಪತ್ರೆಗಳು ಮತ್ತು ಆರೋಗ್ಯ ಸೇವೆ ಪೂರೈಕೆದಾರರ ಮಾನ್ಯತಾ ಮಂಡಳಿಯಿಂದ ಪ್ರತಿಷ್ಠಿತ ಎನ್‌ಎಬಿಎಚ್ ಪ್ರಮಾಣಿಕರಣ ಪಡೆದಿದ್ದು, ಎನ್‌ಎಬಿಎಚ್ ಸಂಸ್ಥೆಯಿಂದ ಕಟ್ಟುನಿಟ್ಟಾದ ಗುಣ ಮಟ್ಟದ ಮೌಲ್ಯಮಾಪನ ನಡೆಸಿದ ನಂತರ ಈ ಪ್ರತಿಷ್ಠಿತ ಪ್ರಮಾಣೀಕರಣ ಮಾನ್ಯತೆ ನೀಡಲಾಗಿದೆ.
ಎನ್‌ಎಬಿಎಚ್ ಪ್ರಮಾಣಿಕರಣ ಎರಡು ವರ್ಷಗಳಿಗೊಮ್ಮೆ ನವೀಕರಿಸ ಬೇಕಾಗಿದೆ ಮತ್ತು ಉತ್ತಮ ಗುಣಮಟ್ಟವನ್ನು ಕಾಪಾಡಿಕೊಳ್ಳಲು ಸಂಸ್ಥೆಯು ಸೂಚಿಸುವ ಕಠಿಣ ಮಾರ್ಗಸೂಚಿಗಳನ್ನು ಅನುಸರಿಸಲು ಆಸ್ಪತ್ರೆಯು ಬದ್ಧವಾಗಿದೆ. ಮಿಷನ್ ಆಸ್ಪತ್ರೆಯು ನ.16ರಂದು ಈ ಪ್ರಮಾಣಪತ್ರವನ್ನು ಸ್ವೀಕರಿಸಿದೆ ಎಂದು ಆಸ್ಪತ್ರೆಯ ನಿರ್ದೇಶಕ ಡಾ.ಸುಶೀಲ್ ಜತನ್ನಾ ತಿಳಿಸಿದ್ದಾರೆ.
ಎನ್‌ಎಬಿಎಚ್ ಪ್ರಮಾಣಿಕರಣ ಸಿಎಸ್‌ಐ ಲೊಂಬಾರ್ಡ್ ಸ್ಮಾರಕ ಆಸ್ಪತ್ರೆಯ ಕಿರೀಟಕ್ಕೊಂದು ಹೊಸ ಗರಿಯಾಗಿದೆ. ಮಿಷನ್ ಆಸ್ಪತ್ರೆಯು ಪ್ರಸ್ತುತ ತನ್ನ ಶತಮಾನೋತ್ಸವ ವರ್ಷವನ್ನು ಆಚರಿಸುತ್ತಿದೆ. ಇದು ಕರಾವಳಿ ಕರ್ನಾಟಕದ ಅತ್ಯಂತ ಹಳೆಯ ಆಸ್ಪತ್ರೆಗಳಲ್ಲಿ ಒಂದಾಗಿದೆ, ಇದನ್ನು ಯುವ ಸ್ವಿಸ್ ಮಿಷನರಿ ವೈದ್ಯೆ ಡಾ.ಇವಾ ಲೊಂಬಾರ್ಡ್ 1923ರಲ್ಲಿ ಸ್ಥಾಪಿಸಿದ್ದರು. ಕೇವಲ ಆರು ಹಾಸಿಗೆಗಳಿಂದ ಆರಂಭಗೊಂಡಿರುವ ಆಸ್ಪತ್ರೆಯು ಪ್ರಸ್ತುತ 120 ಹಾಸಿಗೆಗಳ ಸಾಮರ್ಥ್ಯವನ್ನು ಹೊಂದಿದೆ.
ಅಪಘಾತ, ತೀವ್ರ ನಿಗಾ ಘಟಕ, ಆಪರೇಷನ್ ಥಿಯೇಟರ್, ಲೇಬರ್ ಥಿಯೇಟರ್, ಡಯಾಲಿಸಿಸ್ ಘಟಕ, ಜನರಲ್ ಮೆಡಿಸಿನ್, ಜನರಲ್ ಸರ್ಜರಿ, ಪೀಡಿಯಾಟ್ರಿಕ್ಸ್, ಪ್ರಸೂತಿ ಮತ್ತು ಸ್ತ್ರೀರೋಗ ಮುಂತಾದ ಎಲ್ಲಾ ಪ್ರಮುಖ ವಿಶೇಷತೆಗಳು ಮತ್ತು ಸೌಲಭ್ಯಗಳನ್ನು ಹೊಂದಿದೆ.
ಅರಿವಳಿಕೆ, ನೆಫ್ರಾಲಜಿ, ಹೃದ್ರೋಗ, ಇಎನ್‌ಟಿ, ದಂತ, ಮೂಳೆಚಿಕಿತ್ಸೆ, ಆಯುರ್ವೇದ ಮತ್ತು ಚರ್ಮಶಾಸ್ತ್ರ ವಿಭಾಗಳನ್ನು ಹೊಂದಿದೆ. ಸುಮಾರು ಒಂದು ಲಕ್ಷ ಚದರ ಅಡಿಗಳಷ್ಟು ವಿಸ್ತೀರ್ಣವಿರುವ ಈ ಆಸ್ಪತ್ರೆಯಲ್ಲಿ ಅತ್ಯುತ್ತಮ ತರಬೇತಿ ಪಡೆದ ಅನುಭವಿ ವೈದ್ಯರು, ದಾದಿಯರು ಮತ್ತು ಅರೆ ವೈದ್ಯಕೀಯ ಸಿಬ್ಬಂದಿ ಸೇರಿದಂತೆ 170 ಸಿಬ್ಬಂದಿ ತಂಡ ಸೇವೆ ಸಲ್ಲಿಸುತ್ತಿದೆ.
ಎನ್‌ಎಬಿಎಚ್ ಭಾರತೀಯ ಗುಣಮಟ್ಟ ಮಂಡಳಿಯ ಅಡಿಯಲ್ಲಿ ಕಾರ್ಯ ನಿರ್ವಹಿಸುವ ಸ್ವಾಯತ್ತ ಸಂಸ್ಥೆಯಾಗಿದೆ. ಆರೋಗ್ಯ ರಕ್ಷಣೆ ಪ್ರೋಟೋಕಾಲ್‌ಗಳು ಮತ್ತು ಆರೈಕೆಯ ಗುಣಮಟ್ಟ, ಕ್ಲಿನಿಕಲ್ ಮತ್ತು ಕ್ಲಿನಿಕಲ್ ಅಲ್ಲದೆ ಮೂಲ ಸೌಕರ್ಯ, ತರಬೇತಿ ಮತ್ತು ಸಿಬ್ಬಂದಿ ಕಲ್ಯಾಣ, ಸಂಸ್ಥೆಯ ನಾಯಕತ್ವ, ರೋಗಿಗಳ ಸುರಕ್ಷತೆ ಮತ್ತು ರೋಗಿಗಳ ತೃಪ್ತಿ ಯಂತಹ ಎಲ್ಲಾ ನಿಯತಾಂಕ ಗಳನ್ನು ಒಳಗೊಂಡಿರುವ ಆಸ್ಪತ್ರೆಗಳಲ್ಲಿನ ಗುಣಮಟ್ಟದ ಪ್ರಕ್ರಿಯೆಗಳ ಮೌಲ್ಯ ಮಾಪನವನ್ನು ಒದಗಿಸಲು ಇದನ್ನು ಸ್ಥಾಪಿಸಲಾಗಿದೆ.
"ಆಸ್ಪತ್ರೆಯು ಎನ್‌ಎಬಿಎಚ್ ಪ್ರಮಾಣಿಕರಣವನ್ನು ಪಡೆದುಕೊಂಡಿರುವುದು ನನಗೆ ಸಂತೋಷವಾಗಿದೆ. ಇದು ನಮಗೆ ಒಂದು ದೊಡ್ಡ ಸಾಧನೆಯಾಗಿದೆ. ಅದರೊಂದಿಗೆ ರೋಗಿಗಳು ಅತ್ಯುತ್ತಮ ಗುಣಮಟ್ಟದ ಸೇವೆಯನ್ನು ಪಡೆಯುವ ಭರವಸೆ ಮೂಡಿಸುತ್ತದೆ. ಇದನ್ನು ಸಾಧಿಸಲು ಅವಿರತವಾಗಿ ಶ್ರಮಿಸಿದ ಎಲ್ಲಾ ಸಿಬ್ಬಂದಿ ವರ್ಗದವರಿಗೆ ನಾನು ಕೃತಜ್ಞನಾಗಿದ್ದೇನೆ. ನಾವು ಸುರಕ್ಷತಾ ಮಾನದಂಡಗಳನ್ನು ಮೇಲ್ವಿಚಾರಣೆ ಮಾಡುವುದನ್ನು ಮುಂದುವರಿಸುತ್ತೇವೆ ಮತ್ತು ಸೇವೆಯ ಉನ್ನತ ಗುಣಮಟ್ಟವನ್ನು ಕಾಯ್ದುಕೊಳ್ಳುತ್ತೇವೆ".

-ಡಾ.ಸುಶೀಲ್ ಜತನ್ನಾ, ನಿರ್ದೇಶಕರು, ಮಿಷನ್ ಆಸ್ಪತ್ರೆ ಉಡುಪಿ










