ಇದು ಯುದ್ಧದ ಯುಗ ಆಗಬಾರದು ಜಿ20 ಮುಖಂಡರ ಘೋಷಣೆ

ಜಕಾರ್ತ, ನ.16: ಉಕ್ರೇನ್ ಸಂಘರ್ಷಕ್ಕೆ ತಕ್ಷಣ ಅಂತ್ಯಹಾಡಬೇಕು ಎಂದು ಇಂಡೊನೇಶ್ಯಾದ ಬಾಲಿಯಲ್ಲಿ ನಡೆಯುತ್ತಿರುವ ಶೃಂಗಸಭೆಯ ಸಮಾರೋಪದಲ್ಲಿ ಜಿ20 ದೇಶಗಳ ಮುಖಂಡರು ಕರೆ ನೀಡಿದ್ದು, ಇಂದಿನ ಯುಗವು ಯುದ್ಧದಿಂದ ಕೂಡಿರಬಾರದು ಎಂದಿದ್ದಾರೆ.
ಶೃಂಗಸಭೆಯ ಆರಂಭದ ದಿನ ಪ್ರಧಾನಿ ನರೇಂದ್ರ ಮೋದಿ(Narendra Modi) `ಇದು ಯುದ್ಧದ ಯುಗವಲ್ಲ' (This is not an age of war)ಎಂದು ನೀಡಿದ್ದ ಹೇಳಿಕೆಯನ್ನು ಈ ಘೋಷಣೆ ಪ್ರತಿಧ್ವನಿಸಿದೆ.
ಪರಮಾಣು ಅಸ್ತ್ರಗಳ ಬಳಕೆ ಅಥವಾ ಬೆದರಿಕೆಯನ್ನು ಒಪ್ಪಲಾಗದು. ಸಂಘರ್ಷಗಳ ಶಾಂತಿಯುತ ಪರಿಹಾರ, ಬಿಕ್ಕಟ್ಟುಗಳನ್ನು ಪರಿಹರಿಸುವ ಪ್ರಯತ್ನಗಳು, ರಾಜತಾಂತ್ರಿಕತೆ ಮತ್ತು ಮಾತುಕತೆ ಪ್ರಮುಖವಾಗಿದೆ. ಇಂದಿನ ಯುಗವು ಯುದ್ಧದ ಯುಗ ಆಗಿರಬಾರದು ಎಂದು ವಿಶ್ವದ ಪ್ರಮುಖ ಮುಖಂಡರು ಭಾಗವಹಿಸಿದ್ದ ಶೃಂಗಸಭೆಯ ಘೋಷಣೆಯಲ್ಲಿ ಉಲ್ಲೇಖಿಸಲಾಗಿದೆ.
ಈ ಶೃಂಗಸಭೆ ಸಾಟಿಯಿಲ್ಲದ ಬಹು ಆಯಾಮದ ಬಿಕ್ಕಟ್ಟಿನ ಸಂದರ್ಭದಲ್ಲಿ ನಡೆಯುತ್ತಿದೆ. ಆರ್ಥಿಕ ಕುಸಿತಕ್ಕೆ ಕಾರಣವಾದ ಕೋವಿಡ್ ಸಾಂಕ್ರಾಮಿಕ, ಉಕ್ರೇನ್ ಯುದ್ಧ, ಹವಾಮಾನ ಬದಲಾವಣೆ ಸಮಸ್ಯೆಯ ಬಗ್ಗೆ ಶೃಂಗಸಭೆಯಲ್ಲಿ ಗಮನ ಹರಿಸಲಾಗಿದೆ. ಈ ನಿರ್ಣಾಯಕ ಕ್ಷಣದಲ್ಲಿ ಸಾಮಾನ್ಯ ಸವಾಲುಗಳನ್ನು ಎದುರಿಸಲು ಲಭ್ಯವಿರುವ ಎಲ್ಲಾ ನೀತಿ ಪರಿಕರಗಳನ್ನು ಬಳಸಿಕೊಂಡು ಜಿ20 ಸ್ಪಷ್ಟ, ನಿಖರ, ತ್ವರಿತ ಮತ್ತು ಅಗತ್ಯ ಕ್ರಮಗಳನ್ನು ಕೈಗೊಳ್ಳುವುದು ಅತ್ಯಗತ್ಯವಾಗಿದೆ ಎಂದು ಮುಖಂಡರು ಹೇಳಿದ್ದಾರೆ.
ಈ ಸವಾಲುಗಳನ್ನು ಎದುರಿಸಲು ಹಾಗೂ ಸುಸ್ಥಿರ ಅಭಿವೃದ್ಧಿಯ ಗುರಿ ಸಾಧನೆಗೆ ಅಭಿವೃದ್ಧಿಶೀಲ ದೇಶಗಳು, ವಿಶೇಷವಾಗಿ ಕನಿಷ್ಟ ಅಭಿವೃದ್ಧಿಹೊಂದಿದ ಹಾಗೂ ಸಣ್ಣ ದ್ವೀಪರಾಷ್ಟ್ರಗಳಿಗೆ ನೆರವು ನೀಡುವುದಕ್ಕೆ ಜಿ20 ಬದ್ಧವಾಗಿದೆ. ಸ್ಥೂಲ ಆರ್ಥಿಕ ನೀತಿಯ ಉಪಕ್ರಮ ಹಾಗೂ ಪ್ರಬಲ ಸಹಕಾರದ ವಾಗ್ದಾನಕ್ಕೆ ಒತ್ತು ನೀಡಲಾಗುವುದು ಮತ್ತು ಬಹುಪಕ್ಷೀಯ ವ್ಯಾಪಾರ, ಜಾಗತಿಕ ಪೂರೈಕೆ ಸರಪಳಿಯ ಸ್ಥಿತಿಸ್ಥಾಪಕ ಲಕ್ಷಣವನ್ನು ಬಲಗೊಳಿಸಲಾಗುವುದು, ದೀರ್ಘಾವಧಿಯ ಅಭಿವೃದ್ಧಿ, ಸುಸ್ಥಿರ ಮತ್ತು ಅಂತರ್ಗತ, ಹಸಿರು ಪರಿವರ್ತನೆಗಳನ್ನು ಬೆಂಬಲಿಸಲಾಗುವುದು. ಆಹಾರ ಮತ್ತು ಇಂಧನ ಭದ್ರತೆಯನ್ನು ಉತ್ತೇಜಿಸಲು, ಮಾರುಕಟ್ಟೆಯ ಸ್ಥಿರತೆಯನ್ನು ಬೆಂಬಲಿಸಲು ಕ್ರಮ ಕೈಗೊಳ್ಳಲಾಗುವುದು. ಬೆಲೆ ಏರಿಕೆಯ ಪರಿಣಾಮವನ್ನು ತಗ್ಗಿಸಲು ತಾತ್ಕಾಲಿಕ ಮತ್ತು ಉದ್ದೇಶಿತ ಬೆಂಬಲವನ್ನು ಒದಗಿಸಲಾಗುವುದು ಎಂದು ಜಿ20 ಮುಖಂಡರು ಹೇಳಿದ್ದಾರೆ.
ಸುಸ್ಥಿರ ಆಹಾರ, ರಸಗೊಬ್ಬರ ಮತ್ತು ಇಂಧನ ವ್ಯವಸ್ಥೆಗೆ ಉತ್ತೇಜನ ನೀಡಲು ತಕ್ಷಣ ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ ಎಂದು ಜಿ20 ಮುಖಂಡರ ಘೋಷಣೆಯಲ್ಲಿ ಪ್ರತಿಪಾದಿಸಲಾಗಿದೆ.
ಜಿ20 ಅಧ್ಯಕ್ಷ ಸ್ಥಾನ ಭಾರತಕ್ಕೆ ಹಸ್ತಾಂತರ
ಇಂಡೊನೇಶ್ಯಾದ ಬಾಲಿಯಲ್ಲಿ ನಡೆಯುತ್ತಿರುವ ಜಿ20 ಶೃಂಗಸಭೆಯ ಸಮಾರೋಪ ದಿನವಾದ ಬುಧವಾರ ಜಿ20 ಸಂಘಟನೆಯ ಅಧ್ಯಕ್ಷ ಸ್ಥಾನವನ್ನು ಇಂಡೊನೇಶ್ಯಾದ ಅಧ್ಯಕ್ಷ ಜೋಕೊ ವಿಡೊಡೊ (Joko Widodo)ಅಧಿಕೃತವಾಗಿ ಭಾರತಕ್ಕೆ ಹಸ್ತಾಂತರಿಸಿದರು.
ಶೃಂಗಸಭೆಯ ಸಮಾರೋಪಕ್ಕೂ ಮುನ್ನ ನಡೆದ ಸಂಕ್ಷಿಪ್ತ ಕಾರ್ಯಕ್ರಮದಲ್ಲಿ ಇಂಡೊನೇಶ್ಯಾ ಅಧ್ಯಕ್ಷರು ಭಾರತದ ಪ್ರಧಾನಿ ನರೇಂದ್ರ ಮೋದಿಗೆ ಅಧ್ಯಕ್ಷ ಸ್ಥಾನವನ್ನು ಹಸ್ತಾಂತರಿಸಿದರು. ಇದು ಎಲ್ಲಾ ಭಾರತೀಯರಿಗೂ ಹೆಮ್ಮೆಯ ವಿಷಯವಾಗಿದೆ. ಎಲ್ಲಾ ದೇಶಗಳ ಪ್ರಯತ್ನದೊಂದಿಗೆ ಜಿ20 ಶೃಂಗಸಭೆಯನ್ನು ಜಾಗತಿಕ ನೆಮ್ಮದಿಗೆ ವೇಗವರ್ಧಕವಾಗಿ ಬಳಸಬಹುದು ಎಂದು ಮೋದಿ ಈ ಸಂದರ್ಭ ಹೇಳಿದರು.
ಇದಕ್ಕೂ ಮುನ್ನ ಮಾತನಾಡಿದ ವಿದೇಶಾಂಗ ಕಾರ್ಯದರ್ಶಿ ವಿನಯ್ ಕ್ವಾತ್ರ, ಜಿ20 ಶೃಂಸಭೆಯ ಘೋಷಣೆಯ ಕರಡು ರಚನೆಗೆ ಭಾರತ ರಚನಾತ್ಮಕ ಕೊಡುಗೆ ನೀಡಿದೆ ಎಂದರು.