ನಳಿನ್ ಕುಮಾರ್ ಟ್ವೀಟ್ ಮಾಡಿ 48 ಗಂಟೆಗಳು ಕಳೆದಿದರೂ ಸುಂಕ ವಸೂಲಿ ಮುಂದುವರಿದಿದೆ: ಮುನೀರ್ ಕಾಟಿಪಳ್ಳ

ಸುರತ್ಕಲ್, ನ.16: ಸುರತ್ಕಲ್ ಟೋಲ್‌ಗೇಟ್ ತೆರವಿಗೆ ಒತ್ತಾಯಿಸಿ ಸುರತ್ಕಲ್ ಟೋಲ್‌ಗೇಟ್ ಹೋರಾಟ ಸಮಿತಿ ಮತ್ತು ಸಮಾನ ಮನಸ್ಕ ಸಂಘಟನೆಗಳು ನಡೆಸುತ್ತಿರುವ ಆಹೋರಾತ್ರಿ ಹೋರಾಟ 20ದಿನಗಳನ್ನು ಪೂರೈಸಿತು.
ಬುಧವಾರವೂ ಹೋರಾಟದ ಮಂಟಪದಲ್ಲಿ 300ಕ್ಕೂ ಮಿಕ್ಕಿ ಹೋರಾಟಗಾರರು ಭಾಗವಹಿಸಿದ್ದು, ಸುರತ್ಕಲ್ ಟೋಲ್ ಗೇಟನ್ನು ಹೆಜಮಾಡಿ ಟೋಲ್‌ಗೇಟ್ ಜೊತೆ ವಿಲೀನ ಮಾಡಿ ಹೆಚ್ಚುವರಿ ಹಣ ವಸೂಲಿ ಮಾಡಬಾರದೆಂದು ಧರಣಿ ನಿರತರು ಆಗ್ರಹಿಸಿದರು.
ಹೋರಾಟದ ವೇಳೆ ಮಾತನಾಡಿದ ಮುನೀರ್ ಕಾಟಿಪಳ್ಳ, ಸಂಸದ ನಳಿನ್ ಕುಮಾರ್ ಅವರು ಟ್ವೀಟ್ ಮಾಡಿ 48ಗಂಟೆಗಳು ಕಳೆದಿದೆ. ಆದರೂ ಟೋಲ್‌ಗೇಟ್‌ಗಳಲ್ಲಿ ಸುಂಕ ವಸೂಲಿ ಮುಂದುವರಿದಿದೆ. ಇದರಿಂದ ಜನರು ಸಿಟ್ಟಿಗೆದ್ದಿದ್ದಾರೆ. ನಮ್ಮ ಕಣ್ಣಮುಂದೆಯೇ ವಾಹನ ಸವಾರರು ಗುತ್ತಿಗೆ ಆಧಾರದ ಕಾರ್ಮಿಕರ ಜೊತೆ ಜಳವಾಡುತ್ತಿದ್ದಾರೆ. ಇದು ಸರಿಯಲ್ಲ. ನೋಟಿಫಿಕೇಶನ್ ಆಗಿರುವುದೇ ಆಗಿದ್ದಲ್ಲಿ ಮೊದಲು ಟೋಲ್ ಸಂಗ್ರಹ ನಿಲ್ಲಿಸಲಿ. ಇದು ಹೀಗೇ ಮುಂದುವರಿದರೆ ಸಾರ್ವಜನಿಕರ ಕೋಪದ ಕಟ್ಟೆ ಒಡೆದು ಮತ್ತೆ ಇನ್ನಷ್ಟು ಸಮಸ್ಯೆಗೆ ದಾರಿ ಮಾಡುವ ಸಾಧ್ಯತೆ ಇದೆ ಎಂದರು.
ಜಿಲ್ಲಾಧಿಕಾರಿಯವರು ನೋಟಿಫಿಕೇಶನ್ ಕೊಡಬೇಕೆಂದು ಹೇಳಲಾಗುತ್ತಿದೆ. ಹೆದ್ದಾರಿ ಪ್ರಧಿಕಾರಕ್ಕೂ ಜಿಲ್ಲಾಧಿಕಾರಿಗೂ ಯಾವುದೇ ಸಂಬಂಧ ಇಲ್ಲ. ಕೇಂದ್ರ ಸರಕಾರ ಮಾಡಿರುವ ಗಜೆಟ್‌ನೋಟಿಫಿಕೇಶನ್ ನ್ನು ಜಿಲ್ಲಾಧಿಕಾರಿ ಜಾರಿಗೊಳಸಬೇಕಷ್ಟೇ. ಕೇಂದ್ರದ ಹೆದ್ದಾರಿ ಪ್ರಧಿಕಾರದ ನೋಟಿಫಿಕೇಶನ್ ಇದೆ. ರಾಜ್ಯ ಸರಕಾರ ಅದನ್ನು ಅನುಮೋದಿಸಿದೆ. ಹೀಗಿರುವಾಗಲೂ ಟೋಲ್ ಸಂಗ್ರಹ ನಡೆಸುತ್ತಿರುವು ಏಕೆ? ಯಾವಾಗ ಸಂಗ್ರಹ ನಿಲ್ಲಸಲಾಗುವುದು ಎಂದು ಮುನೀರ್ ಪ್ರಶ್ನಿಸಿದರು.
ಈ ಮೊದಲು ನಳಿನ್ ಕುಮಾರ್ ಕಟೀಲ್ ಅವರೇ ಹೇಳಿದ್ದರು. ಸುರತ್ಕಲ್ ಟೋಲ್‌ಗೇಟನ್ನು ಹೆಜಮಾಡಿಗೆ ವಿಲೀನ ಮಾಡಿದರೆ, ಸುಂಕ ಹೆಚ್ಚುವರಿ ನೀಡಬೇಕಾಗುತ್ತದೆ. ಹಾಗಾಗಿ ಟೋಲ್ ಮುಕ್ತ ರಸ್ತೆ ಮಾಡುವುದಾಗಿ ಹೇಳಿದ್ದರು ಅದರಂತೆ ನಡೆದುಕೊಳ್ಳಿ ಎಂದು ಮುನೀರ್ ಒತ್ತಾಯಿಸಿದರು.
ಮೊದಲು ಅನದೀಕೃತ ಸುರತ್ಕಲ್ ಟೋಲ್‌ಗೇಟ್ ಸುಂಕ ವಸೂಲಿ ನಿಲ್ಲಿಸಿ. ಬಳಿಕ ಇದನ್ನು ಹೆಜಮಾಡಿ ಟೋಲ್‌ಗೇಟ್ ಜೊತೆ ವಿಲೀನವಾದರೂ ಮಾಡಿ ಏನಾದರೂ ಮಾಡಿ, ಹೆಚ್ಚುವರಿ ಸುಂಕ ವಸೂಲಿಗೆ ನಮ್ಮ ತೀವ್ರ ವಿರೋಧವಿದೆ. ಸುರತ್ಕಲ್ ನಲ್ಲಿ ನಡೆಯುತ್ತಿರುವ ಹೋರಟಕ್ಕೆ ಭಯಬಿದ್ದು ಹೆಜಮಾಡಿಯಲ್ಲಿ ಮುಂದುವರಿಸಲು ಹೊರಟರೆ, ಅದು ಈ ಹೋರಾಟಕ್ಕಿಂತಲೂ ಹತ್ತು ಪಟ್ಟು ಹೆಚ್ಚಿನ ಹೋರಾಟ ನಡೆಯಲು ಕಾರಣವಾಗಲಿದೆ ಎಂದು ಎಚ್ಚರಿಕೆ ನೀಡಿದರು.
ಸಂಸದರು ಟೋಲ್ ಗೇಟ್ ತರೆವಾಗಿದೆ ಪ್ರಧಾನಿಗೆ ಅಭಿನಂದನೆ ಎಂದು ಹೇಳಿದ್ದಾರೆ. ಆದರೆ ಸುರತ್ಕಲ್ ಟೋಲ್‌ಗೇಟ್‌ನಲ್ಲಿ ನೋಟಿಫಿಕೇಶನ್ ಆಗಿ 48 ಗಂಟೆಗಳು ಕಳೆದರೂ ಸುಲಿಗೆ ನಡೆಯುತ್ತಲೇ ಇದೆ ಎಂದು ಮಾಜೀ ಸಚಿವ ಅಭಯಚಂದ್ರ ಜೈನ್ ದೂರಿದರು.
ಯಾವುದೇ ಕಾರಣಕ್ಕೂ ಸುರತ್ಕಲ್ ಟೋಲ್ ಗೇಟನ್ನು ಹೆಜಮಾಡಿ ಜೊತೆ ವಿಲೀನ ಮಡುವುದಕ್ಕೆ ನಮ್ಮ ವಿರೋಧವಿದೆ. ವಿಲೀನ ಮಾಡಿ ಅಲ್ಲಿ ಸುಂಕವನ್ನು ಹೆಚ್ಚಿಸಿ ಇಲ್ಲಿನಂತೆಯೇ ಅಲ್ಲಿಯೂ ಜನರ ಜೇಬಿಗೆ ಕನ್ನಹಾಕಲು ಬಿಡುವುದಿಲ್ಲ. ಹಾಗೇನಾದರೂ ಇಲ್ಲಿನ ಟೋಲ್ ಗೇಟ್ ಬಂದ್ ಮಾಡಿ ಹೆಜಮಾಡಿಯಲ್ಲಿ ಹೆಚ್ಚುವರಿ ಸುಂಕ ವಸೂಲಿಗೆ ಮುಂದಾದರೆ ಇಲ್ಲಿರುವ ಧರಣಿ ಹೋರಾಟದ ಮಂಟಪ ಹೆಜಮಾಡಿ ಟೀಲ್‌ಗೇಟ್‌ಗೆ ಸ್ಥಳಾಂತರಿಸಿ ನಮ್ಮ ಹೋರಾಟವನ್ನು ಮುಂದುವರಿಸಲಾಗುದು ಎಂದು ಮಾಜಿ ಸಚಿವ ಅಭಯಚಂದ್ರ ಜೈನ್ ಹೇಳಿದರು.
