ಮಂಡ್ಯ | ಕಬ್ಬು ದರ ನಿಗದಿಗೆ ನಿರ್ಲಕ್ಷ್ಯ: ಡಿಸಿ ಕಚೇರಿಗೆ ಮುತ್ತಿಗೆ ಹಾಕಿದ ರೈತರು
ಹೋರಾಟ ತೀವ್ರಗೊಳಿಸಿದ ರೈತಸಂಘ
ಮಂಡ್ಯ, ನ.16: ಕಬ್ಬಿಗೆ 4,500 ರೂ, ಹಾಲಿಗೆ 40 ರೂ. ಹಾಗೂ ಕಬ್ಬು, ರಾಗಿ, ಇತರೆ ಕೃಷಿ ಉತ್ಪನ್ನಗಳಿಗೆ ವೆಜ್ಞಾನಿಕ ದರ ನಿಗದಿಗೆ ಆಗ್ರಹಿಸಿ ಹತ್ತು ದಿನದಿಂದ ಅಹೋರಾತ್ರಿ ಧರಣಿ ನಡೆಸುತ್ತಿರುವ ರೈತರು, ಬುಧವಾರ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕುವ ಮೂಲಕ ಹೋರಾಟವನ್ನು ತೀವ್ರಗೊಳಿಸಿದ್ದಾರೆ.
ರೈತಸಂಘದ ನೇತೃತ್ವದಲ್ಲಿ ವಿಶ್ವೇಶ್ವರಯ್ಯ ಪ್ರತಿಮೆ ಎದುರು ಧರಣಿ ನಡೆಸುತ್ತಿರುವ ರೈತರು, ಸರಕಾರ ಸ್ಪಂಂದಿಸದೆ ಇರುವುದರಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಟ್ರ್ಯಾಕ್ಟರ್, ಎತ್ತಿನಗಾಡಿಗಳಲ್ಲಿ ಕಬ್ಬು ಮತ್ತು ಇತರೆ ಬೆಳೆಗಳನ್ನು ತುಂಬಿಕೊಂಡು ಮತ್ತು ಸಿಎಂ ಅಣಕು ಶವಯಾತ್ರೆ ನಡೆಸಿ ಮುತ್ತಿಗೆ ಮುತ್ತಿಗೆ ಹಾಕಲು ಯತ್ನಿಸಿದರು.
ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸರು ಜಿಲ್ಲಾಧಿಕಾರಿ ಕಚೇರಿ ಮಾರ್ಗದಲ್ಲಿ ಬ್ಯಾರಿಕೇಡ್ ನಿರ್ಮಿಸಿ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದರು. ಈ ಸಂದರ್ಭ ಪೊಲೀಸರಿಗೂ ಮತ್ತು ಪ್ರತಿಭಟನಾಕಾರರಿಗೂ ಮಾತಿನ ಚಕಮಕಿ ನಡೆಯಿತು. ಬ್ಯಾರಿಕೇಡ್ ಸರಿಸಿ ಮುನ್ನುಗ್ಗಿದ ರೈತರು, ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿ ಸರಕಾರ ಮತ್ತು ಜಿಲ್ಲಾಡಳಿತದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲೆಯ ಪಾಂಡವಪುರ, ಮದ್ದೂರು ಸೇರಿದಂತೆ ನಾನಾ ಕಡೆಯಿಂದ ನೂರಾರು ರೈತರು ಪ್ರತಿಭಟನೆಗೆ ಭಾಗವಹಿಸಿ ಮೆರವಣಿಗೆ ನಡೆಸಿದ್ದರಿಂದ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಕೆಲ ತಾಸು ವಾಹನ ಸಂಚಾರಕ್ಕೆ ತೊಂದರೆಯಾಗಿ ಪ್ರಯಾಣಿಕರು ಪರದಾಡುವಂತಾಯಿತು.
ಮುಖ್ಯಮಂತ್ರಿಗಳು ಕೊಟ್ಟ ಭರವಸೆಯಂತೆ ಕಬ್ಬು ದರ ನಿಗದಿಪಡಿಸದೆ ರೈತರನ್ನು ವಂಚಿಸುತ್ತಿದ್ದಾರೆ. ರೈತರ ಸಮಸ್ಯೆಗಳನ್ನು ಆಲಿಸುತ್ತಿಲ್ಲ. ರಾಸಾಯನಿಕ ಗೊಬ್ಬರ ದರ, ಪಶು ಆಹಾರ ದರ ಮಿತಿಮೀರಿ ಹೆಚ್ಚಳವಾಗಿದೆ. ಆದರೆ, ಅದಕ್ಕೆ ತಕ್ಕಂತೆ ಕಬ್ಬು, ಹಾಲು, ಇತರೆ ಕೃಷಿ ಉತ್ಪನ್ನಗಳ ದರ ಏರಿಕೆ ಮಾಡಿಲ್ಲ ಎಂದು ರೈತರು ಸರಕಾರದ ವಿರುದ್ಧ ಕಿಡಿಕಾರಿದರು.
ಸರಕಾರ ತಮ್ಮ ಬೇಡಿಕೆಗಳಿಗೆ ಸ್ಪಂದಿಸುವವರೆಗೆ ಯಾವುದೇ ಕಾರಣಕ್ಕೂ ಹಮ್ಮಿಕೊಂಡಿರುವ ಅನಿರ್ಧಿಷ್ಟಾವಧಿ ಧರಣಿ ನಿಲ್ಲುವುದಿಲ್ಲ. ಸರಕಾರ ಕೂಡಲೇ ರೈತರ ಮನವಿಗೆ ಸ್ಪಂದಿಸಿ ನ್ಯಾಯ ಒದಗಿಸಬೇಕು. ಇಲ್ಲದಿದ್ದರೆ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.
ರೈತಸಂಘ ವರಿಷ್ಠೆ ಸುನೀತಾ ಪುಟ್ಟಣ್ಣಯ್ಯ, ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ, ನಂದಿನಿ ಜಯರಾಂ, ಲಿಂಗಪ್ಪಾಜಿ, ಎಸ್.ಡಿ.ಮಧುಚಂದನ್, ಪ್ರಸನ್ನ ಎನ್ ಗೌಡ, ಬಾಲಚಂದ್ರ, ಕೆ.ಟಿ.ಗೋವಿಂದೇಗೌಡ, ಹರವು ಪ್ರಕಾಶ್, ಕೆನ್ನಾಳು ನಾಗರಾಜು, ರಾಮದಾಸ್, ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.