ಎನ್‌ಜಿಓದಿಂದ ಮತದಾರರ ಮಾಹಿತಿ ಕಳವು: ಹೈಕೋರ್ಟ್ ಸಿಜೆ ನೇತೃತ್ವದ ತನಿಖೆಗೆ ಸಿದ್ದರಾಯ್ಯ ಒತ್ತಾಯ
''ಬೊಮ್ಮಾಯಿ ಸೇರಿದಂತೆ ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲರನ್ನೂ ಬಂಧಿಸಬೇಕು''

ಬೆಂಗಳೂರು: 'ಖಾಸಗಿ ಎನ್‌ಜಿಓ ಸಂಸ್ಥೆಯೊಂದು, ಸರಕಾರಿ ಅಧಿಕಾರಿಗಳ ಸೋಗಿನಲ್ಲಿ ತನ್ನ ಏಜೆಂಟರ ಮೂಲಕ ಸಾವಿರಾರು ಮತದಾರರ ವೈಯಕ್ತಿಕ ಮಾಹಿತಿಗಳನ್ನು ಸಂಗ್ರಹಿಸಿರುವುದು ಮತದಾರರ ಪಟ್ಟಿ ನವೀಕರಣಕ್ಕೆ ನೀಡಿದ್ದ ಅನುಮತಿ ದುರ್ಬಳಕೆಯಾಗಿದೆ. ಈ ಪ್ರಕರಣದಲ್ಲಿ ಬಸವರಾಜ ಬೊಮ್ಮಾಯಿ ಸೇರಿದಂತೆ ಅವರ ಜೊತೆ ಭಾಗಿಯಾಗಿರುವವರನ್ನು ಬಂಧಿಸಬೇಕು ಹಾಗೂ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಉಸ್ತುವಾರಿಯಲ್ಲಿ ಪ್ರಕರಣದ ತನಿಖೆಯಾಗಬೇಕು' ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.
ನಗರದ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ''ಬಿಬಿಎಂಪಿ, ಚುನಾವಣಾ ಆಯೋಗ, ಜಿಲ್ಲಾ ಚುನಾವಣಾಧಿಕಾರಿ ಹಾಗೂ ಬಹಳ ಮುಖ್ಯವಾಗಿ ಬೆಂಗಳೂರು ಉಸ್ತುವಾರಿ ಸಚಿವರು ಆಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಎಲ್ಲರೂ ಸೇರಿ ಒಂದು ಎನ್‌ಜಿಒ ಗೆ ಮತದಾರರನ್ನು ಜಾಗೃತಗೊಳಿಸಲು, ಮತದಾರರ ಪಟ್ಟಿ ಪರಿಷ್ಕರಣೆ ಮಾಡಲು ಆದೇಶ ನೀಡಿದ್ದಾರೆ, ಈ ಸಂಸ್ಥೆಯ ಹೆಸರು “ಚಿಲುಮೆ ಶೈಕ್ಷಣಿಕ, ಸಾಂಸ್ಕೃತಿಕ ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆ”, ಇದರ ಮಾಲಕರು ಕೃಷ್ಣಪ್ಪ ರವಿಕುಮಾರ್. ಇವರು ಬಿಬಿಎಂಪಿ ಗೆ ಒಂದು ಅರ್ಜಿ ನೀಡಿ ತಾವು ಮತದಾರರನ್ನು ಜಾಗೃತಗೊಳಿಸುವ ಮತ್ತು ಮತದಾರರ ಪಟ್ಟಿಯನ್ನು ಪರಿಷ್ಕರಿಸುವ ಕಾರ್ಯವನ್ನು ಉಚಿತವಾಗಿ ಮಾಡುವುದಾಗಿ ತಿಳಿಸಿದ್ದರು, 20 ಆಗಸ್ಟ್ 2022ರಂದು ಬಿಬಿಎಂಪಿ ಆಯುಕ್ತರು ಜಾಹಿರಾತು ನೀಡದೆ ಒಂದು ಖಾಸಗಿ ಕಂಪನಿಗೆ ಈ ಕಾರ್ಯವನ್ನು ವಹಿಸಿಕೊಡುವ ಆದೇಶ ನೀಡಿದ್ದರು. ಈ ಕಂಪನಿಯವರು ಜಾಹಿರಾತಿನ ಮೂಲಕ ಅನನುಭವಿಗಳನ್ನು ಕೆಲಸಕ್ಕೆ ತೆಗೆದುಕೊಂಡು, ಅವರಿಗೆ ಬೂತ್ ಲೆವೆಲ್ ಆಫಿಸರ್ ಎಂಬ ಗುರುತಿನ ಚೀಟಿ ನೀಡಿದ್ದಾರೆ. ಕಾನೂನಿನ ಪ್ರಕಾರ ಸರ್ಕಾರಿ ನೌಕರರಲ್ಲದವರು ಬೂತ್ ಲೆವೆಲ್ ಆಫೀಸರ್ ಆಗಲು ಅವಕಾಶ ಇಲ್ಲ. ಆದರೂ ಈ ಕೆಲಸಗಾರರಿಗೆ ಬೂತ್ ಮಟ್ಟದ ಅಧಿಕಾರಿ ಎಂಬ ಗುರುತಿನ ಚೀಟಿ ನೀಡಿದ್ದಾರೆ. ಇದು ಭಾರತೀಯ ದಂಡಸಂಹಿತೆ ಪ್ರಕಾರ ಶಿಕ್ಷಾರ್ಹ ಅಪರಾಧ'' ಎಂದು ತಿಳಿಸಿದರು.
''ಖಾಸಗಿ ವ್ಯಕ್ತಿಗಳಿಗೆ ಬೂತ್ ಮಟ್ಟದ ಅಧಿಕಾರಿ ಎಂಬ ಗುರುತಿನ ಚೀಟಿ ನೀಡಿದರೆ ಇದರಿಂದ ರಾಜ್ಯದ ಜನರಿಗೆ ಹೋಗುವ ಸಂದೇಶ ಏನು? ಇವರ ಉದ್ದೇಶ ಏನು? ಮೋಸ ಮಾವುದಲ್ಲವೇ?'' ಎಂದು ಪ್ರಶ್ನೆ ಮಾಡಿದರು.
''16-11-2022ರಂದು ಆದೇಶ ರದ್ದು ಮಾಡಿದ್ದಾರೆಯೇ ಹೊರತು ಅದಕ್ಕೆ ಸೂಕ್ತ ಕಾರಣ ನೀಡಿಲ್ಲ. ನಿಬಂಧನೆಗಳನ್ನು ಉಲ್ಲಂಘಿಸಿರುವುದಕ್ಕಾಗಿ ನಿಮಗೆ ನೀಡಿರುವ ಗುತ್ತಿಗೆ ಆದೇಶವನ್ನು ರದ್ದು ಮಾಡುತ್ತಿದ್ದೇವೆ ಎಂಬ ಕಾರಣ ನೀಡಿದರೂ ಸ್ಪಷ್ಟವಾಗಿ ಏನೆಲ್ಲಾ ಆಗಿದೆ ಎಂಬ ಮಾಹಿತಿ ನೀಡಿಲ್ಲ. ಚುನಾವಣಾ ವ್ಯವಸ್ಥೆಯನ್ನು ಹಾಳು ಮಾಡಿರುವ ಈ ಕಾರ್ಯಕ್ಕೆ ಬಸವರಾಜ ಬೊಮ್ಮಾಯಿ ಅವರೇ ನೇರ ಹೊಣೆ. ಭ್ರಷ್ಟಾಚಾರ ಎಂಬುದು ಗುತ್ತಿಗೆ ಕಾಮಗಾರಿಗೆ ಮಾತ್ರ ಸೀಮಿತವಾಗಿ ಎಲ್ಲ ಕಡೆ ವ್ಯಾಪಕವಾಗಿ ಹರಡಿದೆ. ಈಗ ಬೆಂಗಳೂರು ನಗರದ ಚುನಾವಣೆಯನ್ನು ವಾಮ ಮಾರ್ಗದಿಂದ ಗೆಲ್ಲಲು ಸಂಚು ರೂಪಿಸಿದ್ದಾರೆ. ನಂತರ ಈ ತಂತ್ರವನ್ನು ಇಡೀ ರಾಜ್ಯಕ್ಕೆ ವಿಸ್ತರಿಸುವ ದುರುದ್ದೇಶ ಇಟ್ಟುಕೊಂಡಿದ್ದಾರೆ. ಚುನಾವಣಾ ಗುರುತಿನ ಚೀಟಿಯನ್ನು ದುರ್ಬಳಕೆ ಮಾಡಿಕೊಂಡಿರುವುದು ಅಕ್ಷಮ್ಯ ಅಪರಾಧ. ಇಂಥಾ ದೊಡ್ಡ ಮಟ್ಟದ ಅಪರಾಧ ಕೃತ್ಯದಲ್ಲಿ ಪಾಲುದಾರರಾಗಿರುವ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ಹುದ್ದೆಯಲ್ಲಿ ಮುಂದುವರೆಯಲು ಯೋಗ್ಯರೇ? ಈ ಕೂಡಲೆ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು'' ಎಂದು ಒತ್ತಾಯಿಸಿದರು.
ಮುಖ್ಯ ನ್ಯಾಯಮೂರ್ತಿಗಳ ಉಸ್ತುವಾರಿಯಲ್ಲಿ ತನಿಖೆಯಾಗಬೇಕು: ''ಬಸವರಾಜ ಬೊಮ್ಮಾಯಿ, ಬಿಬಿಎಂಪಿ ಆಯುಕ್ತರು ಹಾಗೂ ಇತರರ ವಿರುದ್ಧ ಇಂದೇ ದೂರು ದಾಖಲಿಸುತ್ತೇವೆ. ಬಸವರಾಜ ಬೊಮ್ಮಾಯಿ ಅವರನ್ನು ಬಂಧಿಸಬೇಕು. ಒಂದು ವೇಳೆ ಅವರ ವಿರುದ್ಧ ಎಫ್,ಐ ಆರ್ ದಾಖಲಿಸದಿದ್ದರೆ ಮುಂದಿನ ಕ್ರಮವನ್ನು ನಾವು ಕೈಗೊಳ್ಳುತ್ತೇವೆ. ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ಹುದ್ದೆಯಲ್ಲಿ ಮುಂದುವರೆಯುವ ನೈತಿಕತೆಯನ್ನು ಕಳೆದುಕೊಂಡಿರುವುದರಿಂದ ಆ ಸ್ಥಾನಕ್ಕೆ ರಾಜೀನಾಮೆ ನೀಡಬೇಕು, ಈ ಪ್ರಕರಣದಲ್ಲಿ ಬಸವರಾಜ ಬೊಮ್ಮಾಯಿ ಅವರ ಜೊತೆ ಭಾಗಿಯಾಗಿರುವವರ ಬಂಧನವೂ ಆಗಬೇಕು ಮತ್ತು ಈ ಇಡೀ ಪ್ರಕರಣವನ್ನು ರಾಜ್ಯ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿಗಳ ಉಸ್ತುವಾರಿಯಲ್ಲಿ ತನಿಖೆಯಾಗಬೇಕು ಎಂದು ಒತ್ತಾಯ ಮಾಡುತ್ತೇನೆ. ಇಂಥಾ ಪ್ರಕರಣ ರಾಜ್ಯದಲ್ಲಿ ಎಂದೂ ನಡೆದಿರಲಿಲ್ಲ. ಮುಖ್ಯಮಂತ್ರಿಗಳೇ ಇಂಥಾ ಕೃತ್ಯದಲ್ಲಿ ಯಾವತ್ತೂ ಭಾಗಿಯಾಗಿರಲಿಲ್ಲ'' ಎಂದು ಕಿಡಿಕಾರಿದರು.
''ಎನ್,ಜಿ,ಒ ಸಂಸ್ಥೆಯವರು ಮತದಾರರ ಎಲ್ಲಾ ಮಾಹಿತಿಯನ್ನು ಸಂಗ್ರಹ ಮಾಡಿಕೊಂಡಿದ್ದಾರೆ, ಅವರೊಂದಿಗೆ ಒಪ್ಪಂದವನ್ನು ರದ್ದುಮಾಡಿಕೊಂಡಿರುವ ಸಂದರ್ಭದಲ್ಲಿ ಕಾರಣವನ್ನು ನೀಡಿಲ್ಲ ಜೊತೆಗೆ ಈ ವರೆಗೆ ಸಂಗ್ರಹಿಸಿರುವ ಮಾಹಿತಿಯನ್ನು ಖಾಸಗಿ ಸಂಸ್ಥೆಯವರಿಂದ ಪಡೆದುಕೊಂಡಿಲ್ಲ. ಹಾಗಾದರೆ ಇದರ ಹಿಂದಿನ ಉದ್ದೇಶ ಏನು?'' ಎಂದು ಸಿದ್ದರಾಮಯ್ಯ ಪ್ರಶ್ನೆ ಮಾಡಿದರು.







