ವಿದ್ಯಾಪೋಷಕ್‌ನ 2 ವಿದ್ಯಾರ್ಥಿಗಳಿಗೆ ನಿರ್ಮಿಸಿದ ಮನೆಗಳ ಉದ್ಘಾಟನೆ

ಉಡುಪಿ: ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಸೊಸೈಟಿಯ ಎಚ್.ಎಸ್. ಶೆಟ್ಟಿ ಬೆಂಗಳೂರು ಇವರ ಪ್ರಾಯೋಜಕತ್ವದಲ್ಲಿ ಯಕ್ಷಗಾನ ಕಲಾರಂಗದ ವಿದ್ಯಾಪೋಷಕ್‌ನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯರಾದ ಬೊಮ್ಮರಬೆಟ್ಟುನ ಮಂಜುಶ್ರೀ ಹಾಗೂ ಅಲ್ತಾರಿನ ಪೂರ್ಣಿಮಾ ಇವರಿಗೆ ನಿರ್ಮಿಸಲಾದ ನೂತನ ಮನೆ ‘ರಾಜೀವ ಸದನ’ ಬುಧವಾರ ಉದ್ಘಾಟನೆ ಗೊಂಡು ಸಂಬಂಧಿತರಿಗೆ ಹಸ್ತಾಂತರಗೊಂಡಿತು.
ಎರಡೂ ಮನೆಗಳನ್ನು ಉದ್ಘಾಟಿಸಿ ಮಾತನಾಡಿದ ಎಚ್.ಎಸ್ ಶೆಟ್ಟಿ, ಕಲಾರಂಗದ ಸಮಾಜಮುಖಿ ಕಾರ್ಯ ಹಾಗೂ ಪಾರದರ್ಶಕ ವ್ಯವಹಾರದಿಂದ ನಾನು ಆಕರ್ಷಿತನಾಗಿದ್ದೇನೆ. ನಿಮ್ಮ ಕಾರ್ಯಕ್ರಮಗಳಿಗೆ ಸೊಸೈಟಿ ಮುಂದೆಯೂ ನೆರವು ನೀಡುತ್ತದೆ ಎಂದು ಭರವಸೆ ನೀಡಿದರು.
ಸೊಸೈಟಿಯ ಉಪಾಧ್ಯಕ್ಷ ಎಚ್.ನಾಗರಾಜ ಶೆಟ್ಟಿ, ಯು. ವಿಶ್ವನಾಥ ಶೆಣೈ, ರಾಜಗೋಪಾಲ ಆಚಾರ್ಯ, ಬಿ.ಸೀತಾರಾಮ ಶೆಟ್ಟಿ, ಎಚ್.ರಾಜೀವ ಶೆಟ್ಟಿ, ಕೂಡ್ಲಿ ಗಣಪತಿ ಉಡುಪ, ಬಿ.ಟಿ. ನಾಯ್ಕ್, ಸಂಸ್ಥೆಯ ಉಪಾಧ್ಯಕ್ಷರಾದ ಪಿ. ಕಿಶನ್ ಹೆಗ್ಡೆ ಹಾಗೂ ವಿ.ಜಿ. ಶೆಟ್ಟಿ, ಸದಸ್ಯರಾದ ಕೆ.ಸದಾಶಿವ ರಾವ್, ಅನಂತರಾಜ ಉಪಾಧ್ಯ, ಸಂತೋಷ್ ಕುಮಾರ್ ಶೆಟ್ಟಿ, ಹೆಚ್.ಎನ್. ಶೃಂಗೇಶ್ವರ, ವಿದ್ಯಾಪ್ರಸಾದ್, ನಟರಾಜ ಉಪಾಧ್ಯ, ಕೆ.ಅಜಿತ್‌ಕುಮಾರ್, ಗಣೇಶ್ ಬ್ರಹ್ಮಾವರ, ರಾಜೇಶ್ ನಾವಡ, ಕಿಶೋರ್ ಸಿ.ಉದ್ಯಾವರ, ಕಿಶನ್‌ರಾವ್ ಮತ್ತು ಸುಮನ ಎಸ್. ಶೆಟ್ಟಿ ಉಪಸ್ಥಿತರಿದ್ದರು.
ಸಂಸ್ಥೆಯ ಅಧ್ಯಕ್ಷ ಎಂ.ಗಂಗಾಧರರಾವ್ ಸ್ವಾಗತಿಸಿದರು. ನಾರಾಯಣ ಎಂ. ಹೆಗಡೆ ವಂದಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಸ್ತಾವನೆಯ ಮಾತುಗಳೊಂದಿಗೆ ಕಾರ್ಯಕ್ರಮ ನಿರೂಪಿಸಿದರು. ಈ ಎರಡೂ ಮನೆಗಳು ಸೇರಿ ಸಂಸ್ಥೆ ಈವರೆಗೆ ೩೬ ಮನೆಗಳನ್ನು ವಿದ್ಯಾಪೋಷಕ್‌ನ ಬಡ ವಿದ್ಯಾರ್ಥಿಗಳಿಗೆ ನಿರ್ಮಿಸಿಕೊಟ್ಟಿದೆ.
