17 ವರ್ಷದ ಬಾಲಕಿ ಮೇಲೆ ತಂದೆ, ಚಿಕ್ಕಪ್ಪ ಅಜ್ಜನಿಂದ ಲೈಂಗಿಕ ದೌರ್ಜನ್ಯ: ಆರೋಪ

ಪುಣೆ: ಉತ್ತರ ಪ್ರದೇಶ ಮೂಲದ 17 ವರ್ಷದ ಬಾಲಕಿಯೊಬ್ಬಳು ತನ್ನ ತಂದೆ, ಚಿಕ್ಕಪ್ಪ ಮತ್ತು ಅಜ್ಜನಿಂದ ಹಲವಾರು ಬಾರಿ ಅತ್ಯಾಚಾರಕ್ಕೊಳಗಾಗಿರುವುದಾಗಿ ಪುಣೆ ಪೊಲೀಸರಿಗೆ ತಿಳಿಸಿದ್ದಾಳೆ ಎಂದು ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ.
ಬಾಲಕಿ ಪ್ರಸ್ತುತ ಓದುತ್ತಿರುವ ಪುಣೆಯ ಕಾಲೇಜಿನಲ್ಲಿ ಲೈಂಗಿಕ ಕಿರುಕುಳದ ಕುರಿತು ವಿಶಾಖಾ ಸಮಿತಿಯ ಸದಸ್ಯರ ಮುಂದೆ ಬಾಲಕಿ ಇತ್ತೀಚೆಗೆ ತನ್ನ ಮೇಲಾದ ಸರಣಿ ಅತ್ಯಾಚಾರವನ್ನು ವಿವರಿಸಿದ ನಂತರ ಘಟನೆ ಬೆಳಕಿಗೆ ಬಂದಿದೆ, ಸಂತ್ರಸ್ತೆಯ ತಂದೆಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿ ಹೇಳಿದ್ದಾರೆ.
ಈ ಸಂಬಂಧ ಬುಧವಾರ ಪುಣೆ ನಗರದ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆ ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ (ಪೋಕ್ಸೊ ಕಾಯ್ದೆ) ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ದೂರು ದಾಖಲಾಗಿದೆ.
ಸಂತ್ರಸ್ತೆ ತನ್ನ ದೂರಿನಲ್ಲಿ 2016 ಮತ್ತು 2018 ರ ನಡುವೆ ಉತ್ತರ ಪ್ರದೇಶದ ತನ್ನ ತವರು ಮನೆಯಲ್ಲಿದ್ದಾಗ ತನ್ನ ಚಿಕ್ಕಪ್ಪನಿಂದ ಅನೇಕ ಬಾರಿ ಅತ್ಯಾಚಾರಕ್ಕೊಳಗಾಗಿರುವುದಾಗಿ ಮತ್ತು ಅಜ್ಜನಿಂದ ಕಿರುಕುಳಕ್ಕೆ ಒಳಗಾಗಿರುವುದಾಗಿ ಆರೋಪಿಸಿದ್ದಾರೆ.
"2018 ರಲ್ಲಿ ಪುಣೆಗೆ ಬಂದ ನಂತರ, ಬಾಲಕಿ ತನ್ನ ತಂದೆಗೆ ಲೈಂಗಿಕ ದೌರ್ಜನ್ಯದ ಬಗ್ಗೆ ಚೀಟಿಯಲ್ಲಿ ಬರೆದು ತಿಳಿಸಿದ್ದಳು. ಆದರೆ, ಅತ್ಯಾಚಾರಿಗಳ ವಿರುದ್ಧ ಕ್ರಮ ಕೈಗೊಳ್ಳುವ ಬದಲು, ತಂದೆಯೇ ತಾಯಿ ಮನೆಯಲ್ಲಿ ಇಲ್ಲದಿದ್ದಾಗ ಹಲವಾರು ಬಾರಿ ಅತ್ಯಾಚಾರವೆಸಗಿದ್ದಾರೆ" ಎಂದು ಆಕೆ ತಿಳಿಸಿರುವುದಾಗಿ ಪೊಲೀಸ್ ಅಧಿಕಾರಿ ಹೇಳಿದ್ದಾರೆ.
ಇದನ್ನೂ ಓದಿ... ದೂರು ವಾಪಸ್‌ಗೆ ಮುರುಘಾ ಶರಣರಿಂದ ಹಣದ ಆಮಿಷ ಆರೋಪ: ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ಒಡನಾಡಿ ಸಂಸ್ಥೆಯಿಂದ ದೂರು







