ಗೃಹಬಂಧನಕ್ಕೆ ಅನುಮತಿ ಕೋರಿ ನವ್ಲಾಕ ಸಲ್ಲಿಸಿದ ಅರ್ಜಿಯ ವಿಚಾರಣೆಗೆ ಸುಪ್ರೀಂ ಸಮ್ಮತಿ

ಹೊಸದಿಲ್ಲಿ,ನ.17: ಜೈಲಿನಿಂದ ವರ್ಗಾಯಿಸಿ ತನ್ನನ್ನು ಗೃಹಬಂಧನರಿಸಲು ಸುಪ್ರೀಂಕೋರ್ಟ್ ನೀಡಿರುವ ಆದೇಶವನ್ನು ಜಾರಿಗೊಳಿಸಲು ವಿಳಂಬಿಸಲಾಗುತ್ತಿದೆಯೆಂದು ಆರೋಪಿಸಿ ಮಾನವಹಕ್ಕುಗಳ ಕಾರ್ಯಕರ್ತ ಗೌತಮ ನವ್ಲಾಕ ಅವರ ಅರ್ಜಿಯನ್ನು ಸುಪ್ರೀಂಕೋರ್ಟ್ ಶುಕ್ರವಾರ ವಿಚಾರಣೆಗೆ ಕೈಗೆತ್ತಿಕೊಳ್ಳಲಿದೆ.
ಭೀಮಾ ಕೋರೆಗಾಂವ್ ಹಿಂಸಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ನವ್ಲಾಕ ಅವರನ್ನು ಗೃಹಬಂಧನಕ್ಕೆ ವರ್ಗಾಯಿಸುವುದನ್ನು ವಿರೋಧಿಸಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಸಲ್ಲಿಸಿರುವ ಅರ್ಜಿಯ ಪ್ರತ್ಯೇಕ ವಿಚಾರಣೆಗೂ ಸರ್ವೋಚ್ಚ ನ್ಯಾಯಾಲಯ ಸಮ್ಮತಿಸಿದೆ.
ಈ ಎರಡೂ ಅರ್ಜಿಗಳ ಅಲಿಕೆಯನ್ನು ಪ್ರತ್ಯೇಕವಾಗಿ ನಡೆಸುವಂತೆ ಭಾರತದ ಮುಖ್ಯ ನ್ಯಾಯಮೂರ್ತಿ ಧನಂಜಯ ವೈ.ಚಂದ್ರಚೂಡ್ ನೇತೃತ್ವದ ನ್ಯಾಯಪೀವು ನ್ಯಾಯಮೂರ್ತಿಗಳಾದ ಕೆ.ಎಂ. ಜೋಸೆಫ್ ಹಾಗೂ ಹೃಷಿಕೇಶ ರಾಯ್ ನೇತೃತ್ವದ ನ್ಯಾಯಪೀಠಕ್ಕೆ ನಿರ್ದೇಶನ ನೀಡಿದೆ. 70 ವರ್ಷ ವಯಸ್ಸಿನ ನವ್ಲಾಕ ಅವರನ್ನು ನವಂಬರ್ 10ರಿಂದ ಗೃಹಬಂಧನದಲ್ಲಿರಿಸುವಂತೆ ಕೆ.ಎಂ. ಜೋಸೆಫ್ ಹಾಗೂ ಹೃಷಿಕೇಶ ರಾಯ್ ಅವರನ್ನೊಳಗೊಂಡ ನ್ಯಾಯಪೀಠ ಆದೇಶ ನೀಡಿತ್ತು.
ಮಂಗಳವಾರ ತನ್ನ ಹಿಂದಿನ ಆದೇಶದಲ್ಲಿ ಬದಲಾವಣೆ ಮಾಡಿದ ನ್ಯಾಯಾಲಯವು ಗೃಹಬಂಧನಕ್ಕೆ ವರ್ಗಾವಣೆಗೊಳ್ಳಲು ನವ್ಲಾಕ ಅವರು ಋಣಪರಿಹಾರ ಸಾಮರ್ಥ್ಯ (ಸಾಲ್ವೆನ್ಸಿ)ದ ಪ್ರಮಾಣಪತ್ರ ಹಾಗೂ ಗುರುತಿನ ಹೆಚ್ಚುವರಿ ಪುರಾವೆಯಾಗಿ ಪಡಿತರ ಕಾರ್ಡ್ ಅನ್ನು ಸಲ್ಲಿಸಬೇಕೆಂಬ ಶರತ್ತನ್ನು ರದ್ದುಪಡಿಸಿದೆ ಹಾಗೂ ನವ್ಲಾಕ ಅವರನ್ನು ಶೀಘ್ರವಾಗಿ ತಲೋಜಾ ಕೇಂದ್ರೀಯ ಕಾರಾಗೃಹದಿಂದ ನವಿಮುಂಬೈಯ ಬೇಲಾಪುರದಲ್ಲಿರುವ ಮನೆಗೆ ಸ್ಥಳಾಂತರಿಸುವುದಕ್ಕೆ ಅವಕಾಶ ನೀಡಿತ್ತು.
ಆದರೆ ನವ್ಲಾಕ ಅವರಿಗೆ ಗೃಹ ಬಂಧನಕ್ಕೆ ಅನುಮತಿ ನೀಡಿರುವುದನ್ನು ಎನ್ಐಎನ ಮುಂಬೈ ಘಟಕವು ವಿರೋಧಿಸಿ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿತ್ತು. ನವ್ಲಾಕ ಅವರನ್ನು ಗೃಹಬಂಧನದಲ್ಲಿರಿಸಲು ಉದ್ದೇಶಿಸಲಾಗಿದ್ದ ಕಟ್ಟಡವು ಭಾರತೀಯ ಕಮ್ಯೂನಿಸ್ಟ್ ಪಕ್ಷದ ಕಾರ್ಯಾಲಯವಾಗಿದೆ.
ಮಹಾರಾಷ್ಟ್ರದ ಅಗ್ರೋಲಿ ಗ್ರಾಮದಲ್ಲಿರುವ ಈ ಕಟ್ಟಡವು ಕಾಮ್ರೇಡ್ ರಾಣಾದಿವೆ ಸ್ಮತಿ ಟ್ರಸ್ಟ್ ಗೆ ಸೇರಿದ್ದಾಗಿದ್ದು, ಅಲ್ಲಿ ನವ್ಲಾಕಾ ಅವರನ್ನು ಒಂದು ತಿಂಗಳವರೆಗೆ ಗೃಹಬಂಧನದಲ್ಲಿರಿಸಲು ಉದ್ದೇಶಿಸಲಾಗಿತ್ತು. ಈ ಕಟ್ಟಡದ ಗ್ರಂಥಾಲಯದ ಮೇಲಿರುವ ಕೊಠಡಿಯಲ್ಲಿ ನವ್ಲಾಕ ಅವರನ್ನು ಇರಿಸಲು ಯೋಚಿಸಲಾಗಿತ್ತು.







