ಭೂಹಕ್ಕು ನೀಡಿಕೆಯಲ್ಲಿ ಅಸ್ಸಾಂ ಮುಖ್ಯಮಂತ್ರಿಯಿಂದ ಕೋಮುವಾದ: ಎಐಯುಡಿಎಫ್

ಗುವಾಹಟಿ,ನ.17: ರಾಜ್ಯದ ನಿವಾಸಿಗಳಿಗೆ ಭೂಹಕ್ಕುಗಳನ್ನು ನೀಡುವ ಯೋಜನೆಯನ್ನು ಅಸ್ಸಾಂ ಮುಖ್ಯಮಂತ್ರಿ ಹೇಮಂತ ಬಿಸ್ವಾ ಶರ್ಮಾ ಅವರು ಕೋಮುವಾದೀಕರಿಸುತ್ತಿದ್ದಾರೆಂದು ಅಖಿಲ ಭಾರತ ಯುನೈಟೆಡ್ ಡೆಮಾಕ್ರಾಟಿಕ್ ಫ್ರಂಟ್(ಎಐಯುಡಿಎಫ್) ಬುಧವಾರ ಆಪಾದಿಸಿದೆ.
ಮೂಲನಿವಾಸಿಗಳಿಗೆ ಭೂಮಿಯ ಹಕ್ಕುಗಳನ್ನು ನೀಡುವ ಯೋಜನೆಯನ್ನು ‘ಬಸುಂಧರಾ 2.0’ ಹೇಮಂತ್ ಬಿಸ್ವ ಶರ್ಮಾ ಅವರು ನವೆಂಬರ್ 14ರಂದು ಆರಂಭಿಸಿದ್ದರು. ನದಿ ಕವಲುಗಳ ಸಮೀಪ ಮರಳು ಸಂಗ್ರಹವಾಗುವ ಪ್ರದೇಶಗಳಲ್ಲಿ ವಾಸಿಸುವವರು ಈ ಯೋಜನೆಗೆ ಅರ್ಹರಲ್ಲವೆಂದು ಅವರು ತಿಳಿಸಿದ್ದರು.ಅಸ್ಸಾಂನ ಮರಳು ಜೌಗು ಪ್ರದೇಶಗಳಲ್ಲಿ ವಾಸವಾಗಿರುವ ಬಹುತೇಕ ಮಂದಿ ಬಂಗಾಳಿ ಭಾಷಿಕ ಮುಸ್ಲಿಮರಾಗಿದ್ದಾರೆ.
ಈ ಬಗ್ಗೆ ಎಐಯುಡಿಎಫ್ನ ಜಂಟಿ ಕಾರ್ಯದರ್ಶಿ ಅಮಿನುಲ್ ಇಸ್ಲಾಂ ಅವರು ಆಂಗ್ಲ ದಿನಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಪ್ರತಿಕ್ರಿಯಿಸಿದ್ದು, ‘‘ಬಿಜೆಪಿಗೆ ಯಾರು ಮತ ಚಲಾಯಿಸುತ್ತಾರೋ ಅವರನ್ನು ಮಾತ್ರ ಮೂಲನಿವಾಸಿಗಳೆಂದು ಅಸ್ಸಾಂ ಸರಕಾರ ಪರಿಗಣಿಸಿದೆಯೇ’’ ಎಂದು ಪ್ರಶ್ನಿಸಿದ್ದಾರೆ.
ಯಾರು ಮೂಲನಿವಾಸಿಗಳು ಹಾಗೂ ಯಾರು ಮೂಲನಿವಾಸಿಗಳಲ್ಲ ಎಂಬುನ್ನು ತಾನಾಗಿಯೇ ನಿರ್ಧರಿಸುವ ಮೂಲಕ ಮುಖ್ಯಮಂತ್ರಿ ಶರ್ಮಾಅವರು ಈ ಯೋಜನೆಗೆ ಕೋಮುಬಣ್ಣ ಬಳಿಯುತ್ತಿದ್ದಾರೆಂದು ಅಮೀನುಲ್ ಇಸ್ಲಾಂ ಆಪಾದಿಸಿದರು. ನಾಗಪುರ (ಆರೆಸ್ಸೆಸ್ನ ಪ್ರಧಾನ ಕಾರ್ಯಾಲಯ) ಹಾಗೂ ಮುಸ್ಲಿಂ ವಿರೋಧಿ ಶಕ್ತಿಗಳನ್ನು ಸಂತುಷ್ಟಗೊಳಿಸಲು ಅವರು ಅಲ್ಪಸಂಖ್ಯಾತ ಸಮುದಾಯದ ಮೇಲೆ ಗುರಿಯಿರಿಸಿದ್ದಾರೆಂದು ಹೇಳಿದರು..







