ಗೇ ಎಂಬ ಕಾರಣಕ್ಕೆ ನ್ಯಾಯಾಧೀಶನಾಗಿ ನೇಮಕಾತಿಗೆ ಕೇಂದ್ರದ ವಿಳಂಬ: ಹಿರಿಯ ನ್ಯಾ. ಸೌರಭ್ ಕೃಪಾಲ್ ಖೇದ

ಹೊಸದಿಲ್ಲಿ,ನ.17: ತಾನು ಗೇ ಎಂಬ ಕಾರಣಕ್ಕಾಗಿ ಹೈಕೋರ್ಟ್ ನ್ಯಾಯಾಧೀಶ ಹುದ್ದೆಗೆ ತನ್ನ ನೇಮಕವನ್ನು ತಡೆ ಹಿಡಿಯಲಾಗಿದೆಯೆಂದು ಹಿರಿಯ ನ್ಯಾಯವಾದಿ ಸೌರಭ್ ಕೃಪಾಲ್ ಬೇಸರ ವ್ಯಕ್ತಪಡಿಸಿದ್ದಾರೆ.
ಹೈಕೋರ್ಟ್ ನ್ಯಾಯಮೂರ್ತಿಯಾಗಿ ಸೌರಬ್ ಕೃಪಾಲ್ರ ನೇಮಕವನ್ನ 2017ರಿಂದೀಚೆಗೆ ತಡೆಹಿಡಿಯಲಾಗಿದೆ.
ಈ ಬಗ್ಗೆ ಗುರುವಾರ ಸುದ್ದಿಸಂಸ್ಥೆಯೊಂದರ ಜೊತೆ ಮಾತನಾಡಿದ ಅವರು, ‘‘ ನನ್ನ ಲೈಂಗಿಕತೆಯೇ ನನಗೆ ನ್ಯಾಯಾಧೀಶನಾಗಿ ನೇಮಕಾತಿ ದೊರೆಯದೇ ಇರಲು ಕಾರಣವಾಗಿದೆ. ತಾನೋರ್ವ ಸಲಿಂಗಿಯೆಂದು ಬಹಿರಂಗವಾಗಿ ಹೇಳಿಕೊಂಡ ವ್ಯಕ್ತಿಯನ್ನು ನ್ಯಾಯಪೀಠಕ್ಕೆ ನೇಮಕಗೊಳಿಸಲು ಸರಕಾರವು ಬಯಸುತ್ತದೆಯೆಂದು ನಾನು ಭಾವಿಸಲಾರೆ’’ ಎಂದು ಹೇಳಿದ್ದಾರೆ.
ಹೈಕೋರ್ಟ್ ನ್ಯಾಯಮೂರ್ತಿಯಾಗಿ ಕೃಪಾಲ್ ಅವರ ನೇಮಕಕ್ಕೆ ದಿಲ್ಲಿ ಹೈಕೋರ್ಟ್ ಶಿಫಾರಸು ಮಾಡಿತ್ತು. ನಿಯಮಗಳ ಪ್ರಕಾರ ಅವರ ಪೂರ್ವಾಪರಗಳ ತಪಾಸಣೆಯ ಹೊಣೆಯನ್ನು ಗುಪ್ತಚರ ಇಲಾಖೆಗೆ ವಹಿಸಲಾಗಿತ್ತು. ಕೃಪಾಲ್ ಅವರ ಸಲಿಂಗಿ ಸಂಗಾತಿ ಯುರೋಪ್ ರಾಷ್ಟ್ರೀಯನಾಗಿದ್ದು, ಭದ್ರತೆಗೆ ಅಪಾಯವಾಗುವ ಸಾಧ್ಯತೆಯಿದೆಯೆಂದು ಗುಪ್ತಚರ ದಳ ವರದಿ ಮಾಡಿತ್ತು ಈ ವರದಿಯನ್ನು ಆಧರಿಸಿ 2019 ಹಾಗೂ 2020ರ ನಡುವೆ ಮೂರು ಬಾರಿ ಹೈಕೋರ್ಟ್ ನ್ಯಾಯಮೂರ್ತಿಯಾಗಿ ಕೃಪಾಲ್ ಅವರ ನೇಮಕದ ಕುರಿತ ಶಿಫಾರಸನ್ನು ಸುಪ್ರೀಂಕೋರ್ಟ್ ಕೊಲಿಜಿಯಂ ಮೂರು ಬಾರಿ ತಡೆಹಿಡಿದಿತ್ತು.
ಆದಾಗ್ಯೂ, ಅಂತಿಮವಾಗಿ 2021ರಲ್ಲಿ ಕೇಂದ್ರ ಸರಕಾರದ ಆಕ್ಷೇಪಗಳ ತಳ್ಳಿಹಾಕಿದ ಆಗಿನ ಸಿಜೆಐ ಎನ್.ವಿ. ರಮಣ ಅವರು ಕೃಪಾಲ್ರ ನೇಮಕಕ್ಕೆ ಅನುಮೋದನೆ ನೀಡಿದ್ದರು.ಆದಾಗ್ಯೂ ಈವರೆಗೆ ಕೇಂದ್ರ ಸರಕಾರ ಕೃಪಾಲ್ರ ನೇಮಕಾತಿಯನ್ನು ಪ್ರಕಟಿಸಿಲ್ಲವೆಂದು ತಿಳಿದುಬಂದಿದೆ.







