ನ್ಯಾಯಾಂಗ ನೇಮಕಾತಿಗೆ ಕೊಲೀಜಿಯಂ ವ್ಯವಸ್ಥೆ ಪ್ರಶ್ನಿಸಿ ಅರ್ಜಿ ವಿಚಾರಣೆಗೆ ಪಟ್ಟಿ ಮಾಡಿದ ಸುಪ್ರೀಂ ಕೋರ್ಟ್

ಹೊಸದಿಲ್ಲಿ, ನ. 17: ನ್ಯಾಯಾಂಗ ನೇಮಕಾತಿಗೆ ಕೊಲೀಜಿಯಂ ವ್ಯವಸ್ಥೆಯನ್ನು ಪ್ರಶ್ನಿಸಿದ ಅರ್ಜಿಯನ್ನು ಪಟ್ಟಿ ಮಾಡಲು ಸುಪ್ರೀಂ ಕೋರ್ಟ್ ಗುರುವಾರ ಒಪ್ಪಿಕೊಂಡಿದೆ.
ಕೊಲೀಜಿಯಂ ವ್ಯವಸ್ಥೆ ಮುಖ್ಯ ನ್ಯಾಯಮೂರ್ತಿ ಸೇರಿದಂತೆ ಸುಪ್ರೀಂ ಕೋರ್ಟ್‌ನ ಐವರು ಹಿರಿಯ ನ್ಯಾಯಮೂರ್ತಿಗಳನ್ನು ಒಳಗೊಂಡಿರುತ್ತದೆ. ಸುಪ್ರೀಂ ಕೋರ್ಟ್ ಹಾಗೂ ಉಚ್ಚ ನ್ಯಾಯಾಲಯಕ್ಕೆ ನ್ಯಾಯಾಮೂರ್ತಿಗಳನ್ನು ನೇಮಕ ಹಾಗೂ ವರ್ಗಾವಣೆಯನ್ನು ಈ ಕೊಲೀಜಿಯಂ ನಿರ್ಧರಿಸುತ್ತದೆ.
ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ, ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಹಾಗೂ ಜೆ.ಬಿ. ಪರ್ದಿಪಾಲ ಅವರನ್ನು ಒಳಗೊಂಡ ಪೀಠದ ಮುಂದೆ ಈ ಅರ್ಜಿ ಸಲ್ಲಿಸಲಾಗಿತ್ತು.
ನ್ಯಾಯಮೂರ್ತಿಗಳ ನೇಮಕಾತಿಗೆ ಇರುವ ಕೊಲೀಜಿಯಂ ವ್ಯವಸ್ಥೆ ಸ್ವಜನ ಪಕ್ಷಪಾತಕ್ಕೆ ಸಮಾನ ಎಂದು ಘೋಷಿಸಬೇಕು. ಯಾಕೆಂದರೆ ಇದು ನ್ಯಾಯಾಧೀಶರ ಆಯ್ಕೆ ಹಾಗೂ ನೇಮಕಾತಿಯಲ್ಲಿ ಪಾರದರ್ಶಕ ಅವಕಾಶವನ್ನು ನಿರಾಕರಿಸುತ್ತದೆ ಎಂದು ದೂರುದಾರರ ಪರವಾಗಿ ಹಾಜರಾಗಿದ್ದ ನ್ಯಾಯವಾದಿ ಮ್ಯಾಥ್ಯೂ ಜೆ. ನೆಡುಂಪಾರ ಮನವಿ ಮಾಡಿದರು.
ನ್ಯಾಯಾಂಗ ಸ್ವಾತಂತ್ರ್ಯ ಹಾಗೂ ಕಾನೂನಿನ ನಿಯಮಕ್ಕೆ ನ್ಯಾಯಾಂಗ ನೇಮಕಾತಿಯ ಕೊಲೀಜಿಯಂ ವ್ಯವಸ್ಥೆ ಅಗತ್ಯ ಎಂದು ಮಾಜಿ ಮುಖ್ಯ ನ್ಯಾಯಮೂರ್ತಿ ಯು.ಯು. ಲಲಿತ್ ಹೇಳಿಕೆ ನೀಡಿದ ಕೆಲವು ದಿನಗಳ ಬಳಿಕ ಈ ಬೆಳವಣಿಗೆ ನಡೆದಿದೆ.







