ದೇಶದಲ್ಲಿ ಖಾಸಗಿ ಕಂಪೆನಿ ನಿರ್ಮಿಸಿದ ಮೊಟ್ಟಮೊದಲ ರಾಕೆಟ್ ಉಡಾವಣೆಗೆ ISRO ಸಜ್ಜು

ಶ್ರೀಹರಿಕೋಟಾ: ದೇಶದಲ್ಲಿ ಖಾಸಗಿ ಕಂಪೆನಿ ನಿರ್ಮಿಸಿದ ಮೊಟ್ಟಮೊದಲ ರಾಕೆಟ್ ಉಡಾವಣೆಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (The Indian Space Research Organisation-ISRO) ಸಜ್ಜಾಗಿದೆ ಎಂದು hindustantimes.com ವರದಿ ಮಾಡಿದೆ.
ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಶುಕ್ರವಾರ ಬೆಳಗ್ಗೆ 11.30ಕ್ಕೆ ಮೊಟ್ಟಮೊದಲ ಖಾಸಗಿ ನಿರ್ಮಿತ ವಿಕ್ರಮ್-ಸಬೋರ್ಬಿಟಲ್ (Vikram-suborbital -VKS) ರಾಕೆಟ್ ಉಡಾಯಿಸಲಾಗುವುದು ಎಂದು ಕೇಂದ್ರದ ವಿಜ್ಞಾನ ಮತ್ತು ತಂತ್ರಜ್ಞಾನ, ಅಣುವಿದ್ಯುತ್ ಮತ್ತು ಬಾಹ್ಯಾಕಾಶ ಖಾತೆ ರಾಜ್ಯ ಸಚಿವ ಡಾ.ಜಿತೇಂದ್ರ ಸಿಂಗ್ (Union minister of state (independent charge), science and technology, atomic energy and space Dr Jitendra Singh) ಹೇಳಿದ್ದಾರೆ.
"ಮೊಟ್ಟಮೊದಲ ಖಾಸಗಿ ರಾಕೆಟ್ ಉಡಾವಣೆ ಮೂಲಕ ಇಸ್ರೊ ಶುಕ್ರವಾರ ಇತಿಹಾಸ ನಿರ್ಮಿಸಲು ಸಜ್ಜಾಗಿದೆ. ಇದು ಸ್ವತಂತ್ರ ಭಾರತದ 75 ವರ್ಷಗಳ ಪಯಣದಲ್ಲಿ ಹೊಸ ಮೈಲುಗಲ್ಲು. ಇದು ದೇಶದ ಬಾಹ್ಯಾಕಾಶ ವಲಯದಲ್ಲಿ ಖಾಸಗಿ ಕಂಪೆನಿಗಳ ಅಸ್ತಿತ್ವವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ" ಎಂದು ಅವರು ಬಣ್ಣಿಸಿದ್ದಾರೆ. ಸಿಂಗ್ ಕೂಡಾ ವಿಕೆಎಸ್ ಉಡಾವಣೆಯಲ್ಲಿ ಪಾಲ್ಗೊಳ್ಳುವರು.
ಹೈದರಾಬಾದ್ ಮೂಲದ ಸ್ಕೈರೂಟ್ ಏರೊಸ್ಪೇಸ್ ಪ್ರೈವೇಟ್ ಲಿಮಿಟೆಡ್ (Skyroot Aerospace Pvt Ltd -SAPL) ಎಂಬ ಸ್ಟಾರ್ಟಪ್ ಕಂಪೆನಿ ವಿಕೆಎಸ್ ರಾಕೆಟ್ ಅಭಿವೃದ್ಧಿಪಡಿಸಿದ್ದು, ಇದು ಸಿಂಗಲ್-ಸ್ಟೇಜ್ ಸ್ಪಿನ್ ಸ್ಟೆಬಿಲೈಸ್ಡ್ ಸಾಲಿಡ್ ಪ್ರೊಪಲೆಂಟ್ ರಾಕೆಟ್ (single-stage spin-stabilised solid propellant rocket) ಆಗಿರುತ್ತದೆ. ಇದರ ತೂಕ ಸುಮಾರು 545 ಕೆ.ಜಿ. ಈ ರಾಕೆಟ್ ಗರಿಷ್ಠ 101 ಕಿಲೋಮೀಟರ್ ಎತ್ತರಕ್ಕೆ ಏರಲಿದ್ದು, ಸಮುದ್ರಕ್ಕೆ ಸಿಡಿಯಲಿದೆ. ಈ ಉಡಾವಣೆಯ ಒಟ್ಟಾರೆ ಅವಧಿ 300 ಸೆಕೆಂಡುಗಳಾಗಿರುತ್ತವೆ.
"ತನ್ನ ರಾಕೆಟ್ ಉಡಾವಣೆಗಾಗಿ ಇಸ್ರೋ ಜತೆ ಒಪ್ಪಂದ ಮಾಡಿಕೊಂಡ ಮೊದಲ ಸ್ಟಾರ್ಟಪ್ ಕಂಪನಿ ಸ್ಕೈರೂಟ್. ಇದು ದೇಶದ ಮೊದಲ ಖಾಸಗಿ ಉಡಾವಣೆಯಾಗಿರುವುದು ಮಾತ್ರವಲ್ಲದೇ, ಇದು ಸ್ಕೈರೂಟ್ ಏರೋಸ್ಪೇಸ್ನ ಮೊದಲ ಮಿಷನ್ ಆಗಿದೆ. ಇದಕ್ಕೆ ಪ್ರಾರಂಭ್ ಎಂದು ಹೆಸರಿಸಲಾಗಿದೆ. ಇದು ಒಂದು ವಿದೇಶಿ ಗ್ರಾಹಕರ ಪೇಲೋಡ್ ಸೇರಿದಂತೆ ಮೂರು ಪೇಲೋಡ್ಗಳನ್ನು ಒಯ್ಯಲಿದೆ" ಎಂದು ಡಾ.ಜಿತೇಂದ್ರ ಸಿಂಗ್ ವಿವರಿಸಿದ್ದಾರೆ ಎಂದು hindustantimes.com ವರದಿ ಮಾಡಿದೆ.







