ಫುಟ್ಬಾಲ್ ಹಬ್ಬವೂ... ಝಣಝಣ ಕಾಂಚಾಣವೂ....

ಕ್ರಿಕೆಟ್ ಜನಕರು ಕಾಂಗರೂ ನಾಡಿನಲ್ಲಿ ಚುಟುಕು ವಿಶ್ವಕಪ್ ಗೆದ್ದರು. ಒಂದೊಮ್ಮೆ ವಿಶ್ವಕಪ್ ಗೆಲ್ಲದ ರಾಷ್ಟ್ರವಾಗಿ ಅಪವಾದ ಹೊಂದಿದ್ದ ಇಂಗ್ಲೆಂಡ್ 2019ರಲ್ಲಿ 50 ಓವರ್‌ಗಳ ವಿಶ್ವಕಪ್ ಜಯಿಸಿತ್ತು. ಇದೀಗ ಟ್ವೆಂಟಿ-20 ವಿಶ್ವಕಪ್‌ನ್ನು ಗೆಲ್ಲುವ ಮೂಲಕ ಎರಡೂ ಮಾದರಿಯ ಕ್ರಿಕೆಟ್‌ನಲ್ಲೂ ಚಾಂಪಿಯನ್ ಎನಿಸಿಕೊಂಡ ಮೊದಲ ತಂಡವಾಗಿದೆ.
ಈ ಟ್ವೆಂಟಿ-20ವಿಶ್ವಕಪ್‌ನಲ್ಲಿ ಭಾಗವಹಿಸಿದ ತಂಡಗಳು ಪಡೆದ ಬಹುಮಾನಗಳ ಮೊತ್ತದ ಬಗ್ಗೆ ಹೇಳುವುದಾದರೆ.....
ವಿಶ್ವಕಪ್‌ನ ಒಟ್ಟು ಮೊತ್ತ 56 ಲಕ್ಷ ಯುಎಸ್‌ಡಿ (45.4 ಕೋಟಿ ರೂ.)ಇದರಲ್ಲಿ ಚಾಂಪಿಯನ್ ಇಂಗ್ಲೆಂಡ್ ತಂಡಕ್ಕೆ ಸಿಕ್ಕಿದ್ದು 16 ಲಕ್ಷ ಯುಎಸ್‌ಡಿ(13 ಕೋಟಿ ರೂ.) ಫೈನಲ್‌ನಲ್ಲಿ ಸೋಲು ಅನುಭವಿಸಿದ ಪಾಕಿಸ್ತಾನ ಅರ್ಧದಷ್ಟು ಅಂದರೆ 8 ಲಕ್ಷ ಯುಎಸ್‌ಡಿ (6.5 ಕೋಟಿ ರೂ.) ಪಡೆಯಿತು. ಸೆಮಿಫೈನಲ್‌ನಲ್ಲಿ ಸೋಲು ಅನುಭವಿಸಿದ ಭಾರತ ಮತ್ತು ನ್ಯೂಝಿಲ್ಯಾಂಡ್ ತಂಡಗಳು ತಲಾ 4 ಲಕ್ಷ ಯುಎಸ್‌ಡಿ (3.25 ಕೋಟಿ ರೂ.) ಹಂಚಿಕೊಂಡವು, ಸೂಪರ್ 12 ಹಂತದಲ್ಲಿ ನಿರ್ಗಮಿಸಿದ ಎಂಟು ತಂಡಗಳು (ಆಸ್ಟ್ರೇಲಿಯ, ಶ್ರೀಲಂಕಾ, ಐರ್‌ಲ್ಯಾಂಡ್, ಅಫ್ಘಾನಿಸ್ತಾನ, ದಕ್ಷಿಣ ಆಫ್ರಿಕಾ, ಝಿಂಬಾಬ್ವೆ, ನೆದರ್‌ಲ್ಯಾಂಡ್ಸ್ಸ್, ಬಾಂಗ್ಲಾದೇಶ ತಲಾ 70,000 ಯುಎಸ್‌ಡಿ(56.8 ಲಕ್ಷ ರೂ.) ಪಡೆದು ಕೊಂಡವು. ಸೂಪರ್ 12ರ ಪ್ರತಿ ಗೆಲುವಿಗೆ ಹೆಚ್ಚುವರಿ 40,000 ಯುಎಸ್‌ಡಿ(ಅಂದಾಜು ರೂ. 32.5 ಲಕ್ಷ) ಮೊದಲ ಸುತ್ತಿನಲ್ಲಿ ನಿರ್ಗಮಿಸಿದ ನಾಲ್ಕು ತಂಡಗಳು (ವೆಸ್ಟ್ ಇಂಡೀಸ್, ನಮೀಬಿಯಾ, ಸ್ಕಾಟ್ಲೆಂಡ್, ಯುಎಇ) ತಲಾ 40,000 ಯುಎಸ್‌ಡಿ(32 ಲಕ್ಷ ರೂ.) ಹಂಚಿಕೊಂಡವು ಮತ್ತು ಪ್ರಥಮ ಸುತ್ತಿನ ಪ್ರತಿಯೊಂದು ಗೆಲುವಿಗೆ 40,000 ಯುಎಸ್‌ಡಿ (32.5 ಲಕ್ಷ ರೂ.) ಪಡೆದಿವೆ.
ಸಾಕರ್ ಹಬ್ಬಕ್ಕೆ ಸಿದ್ಧವಾದ ಖತರ್:
ಚುಟುಕು ಕ್ರಿಕೆಟ್ ವಿಶ್ವಕಪ್ ಮುಗಿಯಿತು. ಇನ್ನ್ನು ಅರಬರ ನಾಡಿಗೆ ಫುಟ್ಬಾಲ್ ಹಬ್ಬಕ್ಕೆ ಪಯಣ. ನವೆಂಬರ್ 20ರಿಂದ ಡಿ.18ರ ತನಕ ಖತರ್‌ನಲ್ಲಿ 22ನೇ ಆವೃತ್ತಿಯ ಫಿಫಾ ವಿಶ್ವಕಪ್ ನಡೆಯಲಿದೆ. ಸಾಕರ್ ಜಗತ್ತಿನ ಈ ದೊಡ್ಡ ಹಬ್ಬದಲ್ಲಿ 32 ತಂಡಗಳು ಪಾಲ್ಗೊಳ್ಳಲಿವೆ. ವಿಶ್ವಕಪ್ ಕೂಟದ ಆರಂಭಕ್ಕೂ ಮುನ್ನ ಬ್ರೆಝಿಲ್, ಅರ್ಜೆಂಟೀನ, ಫ್ರಾನ್ಸ್, ಸ್ಪೇನ್, ಇಂಗ್ಲೆಂಡ್, ಜರ್ಮನಿ ಬಲಿಷ್ಠ ತಂಡಗಳಾಗಿ ಕಾಣಿಸಿಕೊಂಡಿವೆ. ಈ 6ರಲ್ಲಿ ಯಾವುದೇ ತಂಡ ಪ್ರಶಸ್ತಿ ಗೆಲ್ಲುವ ಸಾಧ್ಯತೆ ಇದೆ.
ಫಿಫಾ ವಿಶ್ವಕಪ್ ಆರಂಭಗೊಂಡು 92 ವರ್ಷ ಸಂದಿವೆ.ಉರುಗ್ವೆಯಲ್ಲಿ 1930ರಲ್ಲಿ ಮೊದಲ ವಿಶ್ವಕಪ್ ನಡೆದಿತ್ತು. ಬ್ರೆಝಿಲ್ ಯಶಸ್ವಿ ತಂಡ ಈ ವರೆಗೆ ಐದು ಬಾರಿ ಪ್ರಶಸ್ತಿ ಜಯಿಸಿದೆ. ಜರ್ಮನಿ ಮತ್ತು ಇಟಲಿ ತಲಾ 4 ಬಾರಿ, ಅರ್ಜೆಂಟೀನ, ಫ್ರಾನ್ಸ್ ಮತ್ತು ಉರುಗ್ವೆ ತಲಾ 2 ಬಾರಿ, ಇಂಗ್ಲೆಂಡ್ ಮತ್ತು ಸ್ಪೇನ್ 1 ಬಾರಿ ವಿಶ್ವ ಚಾಂಪಿಯನ್ ಪಟ್ಟವನ್ನಲಂಕರಿಸಿವೆ.
2018ರಲ್ಲಿ ರಶ್ಯದಲ್ಲಿ ನಡೆದ ಕೊನೆಯ ವಿಶ್ವಕಪ್‌ನ ಫೈನಲ್‌ನಲ್ಲಿ ಕ್ರೊಯೇಶಿಯಾ ತಂಡವನ್ನು 4-2 ಅಂತರದಲ್ಲಿ ಮಣಿಸಿದ ಫ್ರಾನ್ಸ್ 2ನೇ ಬಾರಿ ಚಾಂಪಿಯನ್ ಆಗಿತ್ತು. ಇದಕ್ಕೂ ಮೊದಲು 1998ರಲ್ಲಿ ಫ್ರಾನ್ಸ್ ಮೊದಲ ಬಾರಿ ಪ್ರಶಸ್ತಿ ಎತ್ತಿಕೊಂಡಿತ್ತು.
ಈ ಬಾರಿ ಖತರ್‌ನಲ್ಲಿ ನಡೆಯುವ ವಿಶ್ವಕಪ್ ನಾನಾ ಕಾರಣಗಳಿಂದಾಗಿ ಗಮನ ಸೆಳೆದಿವೆ. ಪ್ರಶಸ್ತಿ ಮೊತ್ತದಲ್ಲೂ ಭಾರೀ ಏರಿಕೆಯಾಗಿವೆ.
ಈ ಬಾರಿಯ ಚಾಂಪಿಯನ್ ತಂಡ 4.2 ಕೋಟಿ ಯುಎಸ್ ಡಾಲರ್(344 ಕೋಟಿ ರೂ.), ರನ್ನರ್-ಅಪ್ 3.0 ಕೋಟಿ ಯುಎಸ್ ಡಾಲರ್ (245 ಕೋಟಿ ರೂ.), 3ನೇ ಸ್ಥಾನ 2.7 ಕೋಟಿ ಯುಎಸ್‌ಡಿ (220 ಕೋಟಿ ರೂ.), 4ನೇ ಸ್ಥಾನ 2.5 ಕೋಟಿ ಯುಎಸ್‌ಡಿ(204 ಕೋಟಿ ರೂ.), 5ರಿಂದ 8ನೇ ಸ್ಥಾನ 1.7 ಕೋಟಿ ಯುಎಸ್‌ಡಿ (138 ಕೋಟಿ ರೂ.), 9ರಿಂದ 16ನೇ ಸ್ಥಾನ 1.3 ಕೋಟಿ ಯುಎಸ್‌ಡಿ(106 ಕೋಟಿ ರೂ.), 17ರಿಂದ 32ನೇ ಸ್ಥಾನ ಪಡೆಯುವ ತಂಡಗಳು 90 ಲಕ್ಷ ಯುಎಸ್‌ಡಿ (74 ಕೋಟಿ ರೂ.) ಹಂಚಿಕೊಳ್ಳಲಿವೆ.
2018 ವಿಶ್ವಕಪ್ ಚಾಂಪಿಯನ್ ಫ್ರಾನ್ಸ್ 3.8 ಕೋಟಿ ಯುಎಸ್ ಡಾಲರ್(260 ಕೋಟಿ ರೂ.) ಪಡೆದಿದ್ದರೆ, ರನ್ನರ್-ಅಪ್, ಕ್ರೊಯೇಷಿಯಾ 2.8 ಕೋಟಿ ಯುಎಸ್‌ಡಿ (192 ಕೋಟಿ ರೂ.), ಮೂರನೇ ಸ್ಥಾನ ಪಡೆದ ಬೆಲ್ಜಿಯಂ 2.4 ಕೋಟಿ ಯುಎಸ್‌ಡಿ(164 ಕೋಟಿ ರೂ.) ಬಾಚಿಕೊಂಡಿತ್ತು.
ಫುಟ್ಬಾಲ್ ಅಭಿಮಾನಿಗಳು ಈಗಾಗಲೇ ಖತರ್‌ನತ್ತ ಪಯಣ ಆರಂಭಿಸಿದ್ದಾರೆ. ತಂಡಗಳು ತಯಾರಿಯಲ್ಲಿ ತೊಡಗಿವೆ ಡಿ.18ರಂದು ನಡೆಯಲಿರುವ ಫೈನಲ್ ಹಣಾಹಣಿಯಲ್ಲಿ ವಿಶ್ವ ವಿಜೇತ ತಂಡದ ನಿರ್ಣಯವಾಗಲಿದೆ.







