ಮುಡಿಪು: 132 ಕೆಜಿ ಗಾಂಜಾ ಸಹಿತ ಇಬ್ಬರು ಆರೋಪಿಗಳ ಬಂಧನ
► ಒಟ್ಟು 39.15 ಲಕ್ಷ ರೂ. ಮೌಲ್ಯದ ಸೊತ್ತು ವಶ ►ಮಂಗಳೂರು ಸಿಸಿಬಿ ಪೊಲೀಸರ ಕಾರ್ಯಾಚರಣೆ

ಮಂಗಳೂರು, ನ.18: ಮುಡಿಪು ಸಮೀಪ ಗಾಂಜಾ(Ganja) ಸಾಗಾಟ ಪ್ರಕರಣವೊಂದನ್ನು ಪತ್ತೆಹಚ್ಚಿರುವ ಮಂಗಳೂರು ಸಿಸಿಬಿ ಪೊಲೀಸರು 132 ಕೆಜಿ ಸಂಸ್ಕರಿತ ಗಾಂಜಾ ವಶಪಡಿಸಿಕೊಂಡಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಈ ಬಗ್ಗೆ ಮಾಹಿತಿ ನೀಡಿದ ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್, ಬಂಟ್ವಾಳ ನರಿಂಗನಾ ನಿವಾಸಿ ರಮೀಝ್ ರಾಝ್ (30) ಹಾಗೂ ಕೇರಳ ಕಾಸರಗೋಡು ನಿವಾಸಿ ಅಬ್ದುಲ್ ಖಾದರ್ ಹಾರಿಸ್ (31) ಬಂಧಿತ ಆರೋಪಿಗಳು. ಇವರನ್ನು ಮುಡಿಪು ಕುರ್ನಾಡು ಗ್ರಾಮದ ಕಾಯರ್‌ಗೋಳಿ ಎಂಬಲ್ಲಿ ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.
ಆರೋಪಿಗಳಿಂದ ಆಂಧ್ರ ಪ್ರದೇಶದ ವಿಶಾಖಪಟ್ಟಣದಿಂದ ಮಂಗಳೂರು, ಬೆಂಗಳೂರು ಹಾಗೂ ಕೇರಳ ರಾಜ್ಯಕ್ಕೆ ಪೂರೈಕೆ ಮಾಡಲು ಉದ್ದೇಶಿಸಿದ್ದ 132 ಕೆಜಿ ಸಂಸ್ಕರಿತ ಗಾಂಜಾ ಸೇರಿದಂತೆ ಸಾಗಾಟಕ್ಕೆ ಬಳಕೆ ಮಾಡಲಾದ ಕಾರು, ನಗದು, 2 ಮೊಬೈಲ್ ಫೋನ್ ಸೇರಿದಂತೆ ಒಟ್ಟು ಸುಮಾರು 39,15,000 ಲಕ್ಷ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಜತೆಗೆ 3 ತಲವಾರುಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ ಎಂದರು.
ಆರೋಪಿಗಳು ತಲಾ 2 ಕೆಜಿ ಪ್ಯಾಕೇಟ್‌ಗಳನ್ನಾಗಿ ಗಾಂಜಾವನ್ನು ವಾಹನದಲ್ಲಿ ಸಾಗಿಸುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿಯನ್ನು ಅನುಸರಿಸಿ ಮಂಗಳೂರು ಸಿಸಿಬಿ ಇನ್ ಸ್ಪೆಕ್ಟರ್ ಮಹೇಶ್ ಪ್ರಸಾದ್, ಪಿಎಸ್ಸೈ ರಾಜೇಂದ್ರ ಬಿ. ನೇತೃತ್ವದ ಸಿಸಿಬಿ ತಂಡ ಗುರುವಾರ ಕಾರ್ಯಾಚರಣೆ ನಡೆಸಿ ಈ ಪ್ರಕರಣವನ್ನು ಬೇಧಿಸಿದೆ ಎಂದು ಪೊಲೀಸ್ ಆಯುಕ್ತರು ಹೇಳಿದರು.
ಆರೋಪಿಗಳ ಪೈಕಿ ರಮೀಝ್ ರಾಝ್ ನ ವಿರುದ್ಧ ಈ ಹಿಂದೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಮಾದಕ ದ್ರವ್ಯ ಸೇವೆ, ಮಾರಾಟ, ಹಲ್ಲೆ ಸೇರಿದಂತೆ ಮೂರು ಪ್ರಕರಣಗಳು ದಾಖಲಾಗಿವೆ. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಗಾಂಜಾ ಮಾರಾಟ, ಕೊಲೆ ಯತ್ನ ಪ್ರಕರಣ ಹಾಗೂ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಗಾಂಜಾ ಪ್ರಕರಣ ಸೇರಿ ಒಟ್ಟು 6 ಪ್ರಕರಣಗಳು ದಾಖಲಾಗಿವೆ. ಇನ್ನೋರ್ವ ಆರೋಪಿ ಅಬ್ದುಲ್ ಖಾದರ್ ಹಾರಿಸ್ ವಿರುದ್ಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಎಡು ಕೊಲೆ ಯತ್ನ ಪ್ರಕರಣ ಹಾಗೂ ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ 2 ಹಲ್ಲೆ ಪ್ರಕರಣಗಳು ದಾಖಲಾಗಿವೆ ಎಂದು ಕಮಿಶನರ್ ಮಾಹಿತಿ ನೀಡಿದರು.
ಆರೋಪಿಗಳು ಗಾಂಜಾ ಸಾಗಾಟದ ಸಮಯದಲ್ಲಿ ಪೊಲೀಸರು ಅಥವಾ ಸಾರ್ವಜನಿಕರು ನಿಲ್ಲಿಸಿದಲ್ಲಿ ಅವರಿಗೆ ಹಲ್ಲೆ ನಡೆಸುವ ಉದ್ದೇಶದಿಂದ ತಲವಾರುಗಳನ್ನು ಕಾರಿನಲ್ಲಿ ಇರಿಸಿಕೊಂಡಿದ್ದರು. ವಿಶಾಖಪಟ್ಟಣದಿಂದ ಬೆಂಗಳೂರು ಮೂಲಕ ಗಾಂಜಾವನ್ನು ಕಾರಿನಲ್ಲಿ ಹಾಕಿಕೊಂಡು ಮಂಗಳೂರು ನಗರ ಸೇರಿ ದ.ಕ. ಜಿಲ್ಲೆ, ಉಡುಪಿ, ಮಣಿಪಾಲ, ಕಾಸರಗೋಡು ಹಾಗೂ ಉತ್ತರ ಕನ್ನಡದ ಕೆಲವು ಭಾಗಗಳಿಗೆ ಪೂರೈಕೆ ಮಾಡಲು ಆರೋಪಿಗಳು ಯತ್ನಿಸಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಆಂಧ್ರ ಪ್ರದೇಶ, ಛತ್ತೀಸ್‌ಗಢ, ಒಡಿಶಾ ಮೊದಲಾದ ರಾಜ್ಯಗಳ ಕಾಡು ಪ್ರದೇಶಗಳಲ್ಲಿ ಗಾಂಜಾ ಬೆಳೆಯುವ ಬಗ್ಗೆ ಮಾಹಿತಿ ಇದ್ದು, ಅಲ್ಲಿಂದ ಆರೋಪಿಗಳು ಬೃಹತ್ ಪ್ರಮಾಣದಲ್ಲಿ ಸಂಸ್ಕರಿತ ಗಾಂಜಾ ಖರೀದಿಸಿ ಕರ್ನಾಟಕ, ಕೇರಳದ ವಿವಿಧ ಕಡೆಗಳಿಗೆ ಪೂರೈಕೆ ಮಾಡುವ ಜಾಲ ಸಕ್ರಿಯವಾಗಿರುವುದು ಈ ಹಿಂದಿನ ಪ್ರಕರಣಗಳಲ್ಲಿಯೂ ಕಂಡು ಬಂದಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಿ, ಜಾಲದ ಹಿಂದಿರುವ ಇತರನ್ನೂ ಪತ್ತೆ ಹಚ್ಚಲಾಗುವುದು ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದರು.
ಸುದ್ದಿ ಗೋಷ್ಠಿಯಲ್ಲಿ ಡಿಸಿಪಿಗಳಾದ ಅಂಶು ಕುಮಾರ್, ದಿನೇಶ್ ಕುಮಾರ್, ಸಿಸಿಬಿ ಇನ್ ಸ್ಪೆಕ್ಟರ್ ಮಹೇಶ್ ಪ್ರಸಾದ್ ಉಪಸ್ಥಿತರಿದ್ದರು.