ದ.ಕ. ಜಿಲ್ಲೆಯಲ್ಲಿ ಸರಕಾರಿ ಶಾಲೆ ಮುಚ್ಚಿಸಲು ಯತ್ನ: ಕನ್ನಡ ಸೇನೆ ಆರೋಪ
ಇಲಾಖೆ ಅಧಿಕಾರಿಗಳ ವಿರುದ್ಧ ತನಿಖೆಗೆ ಆಗ್ರಹ

ಮಂಗಳೂರು, ನ.18: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 24 ಸರಕಾರಿ ಕನ್ನಡ ಮಾಧ್ಯಮ ಶಾಲೆಗಳನ್ನು ಮುಚ್ಚುವ ಹುನ್ನಾರ ನಡೆಯುತ್ತಿದೆ. ಸರಕಾರಿ ಶಾಲೆಯನ್ನು ಮುಚ್ಚಲು ಯತ್ನಿಸುವ ಶಿಕ್ಷಣ ಇಲಾಖೆ ಹಾಗೂ ಸಂಬಂಧಿಸಿದ ಇತರ ಇಲಾಖೆ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಬೇಕು ಹಾಗೂ ಕನ್ನಡ ಮಾಧ್ಯಮ ಸರಕಾರಿ ಶಾಲೆಗಳನ್ನು ಮುಚ್ಚದಂತೆ ಕ್ರಮ ಕೈಗೊಳ್ಳಬೇಕು ಎಂದು ಕನ್ನಡ ಸೇನೆ ಕರ್ನಾಟಕ ದಕ್ಷಿಣ ಕನ್ನಡ ಜಿಲ್ಲಾ ಘಟಕ ಆಗ್ರಹಿಸಿದೆ.
ಮಂಗಳೂರಿನ ದೇರೆಬೈಲ್ ಚರ್ಚ್ ಬಳಿಯ ‘ಹೋಲಿ ಫ್ಯಾಮಿಲಿ’ ಹಿರಿಯ ಪ್ರಾಥಮಿಕ ಶಾಲೆಯನ್ನು 2022ನೇ ಸಾಲಿನಲ್ಲಿ ಮುಚ್ಚಲಾಗಿದೆ. ಜಿಲ್ಲೆಯ 24 ಸರಕಾರಿ ಅನುದಾನಿತ ಕನ್ನಡ ಶಾಲೆಗಳಲ್ಲಿ ಮಕ್ಕಳಿದ್ದರೂ, ಸರಕಾರಿ ಶಿಕ್ಷಕರ ಸಂಖ್ಯೆ ಶೂನ್ಯವಾಗಿದೆ. ಈ ಪೈಕಿ ಅನೇಕ ಶಾಲೆಗಳಲ್ಲಿ 100ಕ್ಕೂ ಅಧಿಕ ವಿದ್ಯಾರ್ಥಿಗಳಿದ್ದಾರೆ. ಶಿಕ್ಷಣ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಸರಕಾರಿ ಕನ್ನಡ ಮಾಧ್ಯಮ ಶಾಲೆಗಳನ್ನು ಮುಚ್ಚುವ ಪ್ರಯತ್ನ ನಡೆಯುತ್ತಿದೆ. ಈ ಸಂಚಿನ ಭಾಗವಾಗಿ ಕಳೆದ ಕೆಲ ವರ್ಷಗಳಿಂದ ಉದ್ದೇಶಪೂರ್ವಕವಾಗಿ ಸರಕಾರಿ ಕನ್ನಡ ಮಾಧ್ಯಮ ಶಾಲೆಗಳಿಗೆ ಅಗತ್ಯವಿರುವಷ್ಟು ಶಿಕ್ಷಕರನ್ನು ನೇಮಕ ಮಾಡದೇ ಸರಕಾರ ಹಾಗೂ ಶಿಕ್ಷಣ ಇಲಾಖೆ ದ.ಕ. ಜಿಲ್ಲೆಯ ಜನತೆಗೆ, ವಿದ್ಯಾರ್ಥಿಗಳಿಗೆ ಅಪಚಾರ ಎಸಗುತ್ತಿದೆ ಎಂದು ಕನ್ನಡ ಸೇನೆ ಕರ್ನಾಟಕ ದ.ಕ. ಜಿಲ್ಲಾ ಕಾರ್ಯಾಧ್ಯಕ್ಷ ಗುರುಚಂದ್ರ ಹೆಗ್ಡೆ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದ್ದಾರೆ.
ಮಂಗಳೂರು ಉತ್ತರ ವಲಯದಲ್ಲಿ 6, ಮಂಗಳೂರು ದಕ್ಷಿಣದಲ್ಲಿ 3, ಮೂಡುಬಿದಿರೆ-5, ಬೆಳ್ತಂಗಡಿ-3, ಪುತ್ತೂರು-1, ಬಂಟ್ವಾಳ-4, ಸುಳ್ಯದ 1 ಶಾಲೆಯಲ್ಲಿ ಸರಕಾರಿ ಶಿಕ್ಷಕರೇ ಇಲ್ಲಘ. ದೇರೆಬೈಲ್ ‘ಹೋಲಿ ಫ್ಯಾಮಿಲಿ’ ಶಾಲೆ ಈಗಾಗಲೇ ಮುಚ್ಚಿದೆ ಎಂದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕನ್ನಡ ಶಾಲೆಗಳನ್ನು ಮುಚ್ಚುವ ಷಡ್ಯಂತ್ರದಲ್ಲಿ ಶಿಕ್ಷಣ ಇಲಾಖೆ ಅಧಿಕಾರಿಗಳು ಹಾಗೂ ಉನ್ನತ ಅಧಿಕಾರಿಗಳು ನೇರ ಶಾಮೀಲಾಗಿದ್ದಾರೆ. ಈ ಬಗ್ಗೆ ತಕ್ಷಣ ತನಿಖೆ ನಡೆಸಬೇಕು, ರಾಜ್ಯದಲ್ಲಿ ಯಾವುದೇ ಕನ್ನಡ ಶಾಲೆಗಳನ್ನು ಮುಚ್ಚಬಾರದು ಎಂದು ಆಗ್ರಹಿಸಿದರು.
ಕನ್ನಡ ಶಾಲೆಗಳಿಗೆ ಶಿಕ್ಷಕರ ನೇಮಕಾತಿ ಮಾಡದಿರುವುದು ಹಾಗೂ ಶಾಲೆಗಳನ್ನು ಮುಚ್ಚುತ್ತಿರುವ ಬಗ್ಗೆ ನ.19ರಂದು ಮಂಗಳೂರಿಗೆ ಭೇಟಿ ನೀಡಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಕನ್ನಡ ಸೇನೆ ಜಿಲ್ಲಾ ಕಾರ್ಯದರ್ಶಿ ಪ್ರವೀಣ್ ಶೆಟ್ಟಿ, ಉಪಾಧ್ಯಕ್ಷ ಗಂಗಾಧರ ಆಳ್ವ ಉಪಸ್ಥಿತರಿದ್ದರು.