ಬೆಂಗಳೂರು: ಬಾಲಕನಿಗೆ ಲೈಂಗಿಕ ಕಿರುಕುಳ ನೀಡಿ ಕೊಲೆಗೈದ ಆರೋಪಿಗೆ ಮರಣದಂಡನೆ ವಿಧಿಸಿದ ಕೋರ್ಟ್

ಬೆಂಗಳೂರು, ನ.18: ಅಪ್ರಾಪ್ತ ಬಾಲಕನೊಬ್ಬನ ಮೇಲೆ ಅಸ್ವಾಭಾವಿಕ ಲೈಂಗಿಕ ಕ್ರಿಯೆ ನಡೆಸಿ ಹತ್ಯೆ ಮಾಡಿದ್ದ ಆರೋಪಿಗೆ ನಗರದ 1ನೆ ತ್ವರಿತಗತಿಯ ಕೋರ್ಟ್, ಮರಣದಂಡನೆ ಶಿಕ್ಷೆ ವಿಧಿಸಿ ಮಹತ್ವದ ಆದೇಶ ನೀಡಿದೆ.
ಯಶವಂತಪುರದ ತ್ರಿವೇಣಿ ರಸ್ತೆಯಲ್ಲಿರುವ ಕರೀಮಣಿ ಕೊಳಚೆ ಪ್ರದೇಶದ ನಿವಾಸಿ ಮೂರ್ತಿ ಶಿಕ್ಷೆಗೆ ಗುರಿಯಾದ ವ್ಯಕ್ತಿ. ಐಪಿಸಿ 302(ಕೊಲೆ)ಅಡಿ ಅಪರಾಧಕ್ಕೆ ಮರಣ ದಂಡನೆ, 377(ಅನೈಸರ್ಗಿಕ ಲೈಂಗಿಕ ಕ್ರಿಯೆ)ಗೆ ಜೀವಾವಧಿ ಶಿಕ್ಷೆ ಮತ್ತು 50 ಸಾವಿರ ರೂ. ದಂಡ ವಿಧಿಸಿ ನ್ಯಾಯಪೀಠವು ಆದೇಶ ನೀಡಿದೆ. ಜತೆಗೆ, ಘಟನೆಯಲ್ಲಿ ಸಾವನ್ನಪ್ಪಿದ ಬಾಲಕನ ನೊಂದ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ನೀಡುವಂತೆ ಬೆಂಗಳೂರು ನಗರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಸೂಚಿಸಿದೆ.
ಅಪ್ರಾಪ್ತ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಗಳ ತಡೆ ಕಾಯಿದೆ ಜಾರಿಗೆ ಬಂದು 10 ವರ್ಷ ಕಳೆಯುತ್ತಿದೆ. ಆದರೂ ಈ ಕೃತ್ಯಗಳು ಕಡಿಮೆಯಾಗಿಲ್ಲ. ದಿನ ಕಳೆದಂತೆ ಹೆಚ್ಚಾಗುತ್ತಿವೆ. ದೇಶದ ಭವಿಷ್ಯವಾಗಿರುವ ಮಕ್ಕಳ ಮೇಲೆ ಕ್ರೂರತನ ತೋರುವ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸದಿದ್ದಲ್ಲಿ ಸಮಾಜಕ್ಕೆ ಕೆಟ್ಟ ಸಂದೇಶ ರವಾನೆಯಾಗಲಿದೆ ಎಂದು ನ್ಯಾಯಪೀಠವು ತನ್ನ ಆದೇಶದಲ್ಲಿ ಉಲ್ಲೇಖಿಸಿದೆ.
ಪ್ರಕರಣವೇನು?: ಪ್ರಕರಣದಲ್ಲಿ ಆರೋಪಿ ಮೂರ್ತಿ ಮತ್ತು ಮೃತ ಬಾಲಕನ ತಂದೆ ಪರಿಚಿತರಾಗಿದ್ದರು. 2015ರ ಸೆ.12ರ ತುರ್ತು ಕೆಲಸದ ಹಿನ್ನೆಲೆಯಲ್ಲಿ ಮಧ್ಯಾಹ್ನ ಬಾಲಕನನ್ನು ಸ್ವಲ್ಪ ನೋಡಿಕೊಳ್ಳುವಂತೆ ತಿಳಿಸಿದ್ದರು. ಇದೇ ಸಮಯವನ್ನು ದುರ್ಬಳಕೆ ಮಾಡಿಕೊಂಡಿದ್ದ ಆರೋಪಿ ಮಗುವನ್ನು ಯಶವಂತಪುರದ ಬಳಿಯ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಅಸ್ವಾಭಾವಿಕ ಲೈಂಗಿಕ ಕ್ರಿಯೆ ನಡೆಸಿದ್ದನು.
ಈ ಸಂದರ್ಭದಲ್ಲಿ ಮಗು ಕಿರುಚಿತ್ತು. ಮಗುವಿನ ಕೂಗಾಟದಿಂದ ಜನ ಸೇರುತ್ತಾರೆ ಎಂದು ಬೆದರಿದ ಆತ ಕಲ್ಲಿನಿಂದ ಜಜ್ಜಿ ಬಾಲಕನನ್ನು ನಿರ್ದಯವಾಗಿ ಕೊಲೆ ಮಾಡಿದ್ದ. ಘಟನೆ ಸಂಬಂಧ ರಾಜಗೋಪಾಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಾಸಿಕ್ಯೂಷನ್ ಪರ ವಕೀಲ ಪಿ.ಕೃಷ್ಣವೇಣಿ 8 ಜನ ಸಾಕ್ಷಿಗಳೊಂದಿಗೆ ವಾದ ಮಂಡಿಸಿದ್ದರು. ಈ ವಾದವನ್ನು ಪುರಸ್ಕರಿಸಿದ ನ್ಯಾಯಪೀಠವು ಆರೋಪಿಗೆ ಮರಣದಂಡಣೆ ಶಿಕ್ಷೆ ವಿಧಿಸಿದೆ.







