ಮಡಿಕೇರಿ: ಜಿಲ್ಲಾಧಿಕಾರಿ ಕಚೇರಿಯ ತಡೆಗೋಡೆ ದುರಸ್ತಿ ಕಾರ್ಯ ಆರಂಭ
ಮಡಿಕೇರಿ ನ.18 : ಭಾರೀ ಮಳೆಯ ಸಂದರ್ಭ ಕುಸಿಯುವ ಹಂತಕ್ಕೆ ತಲುಪಿದ್ದ ನಗರದ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ತಡೆಗೋಡೆಯನ್ನು ದುರಸ್ತಿಪಡಿಸುವ ಕಾರ್ಯ ಭರದಿಂದ ಸಾಗಿದೆ. ಕಾಂಕ್ರೀಟ್ ಸ್ಲ್ಯಾಬ್ಗಳಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಹಾನಿಗೊಳಗಾದ ಎಲ್ಲಾ ಸ್ಲ್ಯಾಬ್ಗಳನ್ನು ಬದಲಿಸಲು ಕ್ರಮ ಕೈಗೊಳ್ಳಲಾಗಿದೆ.
ಈ ತಡೆಗೋಡೆಯನ್ನು 7 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದ್ದು, ಕಾಮಗಾರಿಯ ಪ್ರಾರಂಭದಲ್ಲೇ ತಡೆಗೋಡೆಯ ಭದ್ರತೆಯ ಬಗ್ಗೆ ಸಾರ್ವಜನಿಕ ವಲಯದಲ್ಲಿ ಅನುಮಾನಗಳು ವ್ಯಕ್ತವಾಗಿತ್ತು. ಇಂತಹ ತಂತ್ರಜ್ಞಾನ ಕೊಡಗಿನಂತಹ ಗುಡ್ಡಗಾಡು ಪ್ರದೇಶಕ್ಕೆ ಸೂಕ್ತವಲ್ಲ ಎಂಬ ಮಾತುಗಳು ಕೇಳಿ ಬಂದಿತ್ತಾದರೂ, ಜಪಾನ್ ತಂತ್ರಜ್ಞಾನ ಎಂದು ಸಬೂಬು ನೀಡಲಾಗಿತ್ತು.
ಈ ಕಾಂಕ್ರೀಟ್ ಸ್ಲ್ಯಾಬ್ಗಳನ್ನು ಅಳವಡಿಸುವ ಸಂದರ್ಭ ಬರೆಗೆ ಹೊಂದಿಕೊಂಡಂತಹ ಖಾಲಿ ಪ್ರದೇಶಕ್ಕೆ ಸಾವಿರಾರು ಲೋಡ್ಗಳಷ್ಟು ಮಣ್ಣು ಸುರಿಯಲಾಗಿದ್ದು, ಸಂಪೂರ್ಣ ಮಣ್ಣನ್ನು ತೆರವುಗೊಳಿಸಲುವ ಕಾರ್ಯ ಇದೀಗ ನಡೆಯುತ್ತಿದೆ. ಸ್ಥಳದಲ್ಲಿ ಹಿಟಾಚಿ ಯಂತ್ರ ಮತ್ತು ಟಿಪ್ಪರ್ ಲಾರಿಗಳನ್ನು ಬಳಸಿಕೊಂಡು ಮಣ್ಣು ತೆರವು ಕಾರ್ಯ ನಡೆಸಲಾಗುತ್ತಿದೆ. ತೆರವು ಮಾಡುವ ಮಣ್ಣು ಶೇಖರಣೆಗಾಗಿ ಖಾಸಗಿ ಜಾಗವನ್ನು ಬಳಸಿಕೊಳ್ಳಲಾಗುತ್ತಿದೆ.
ಈ ಕಾಮಗಾರಿಯನ್ನು ನಡೆಸಿದ್ದ ಗುತ್ತಿಗೆದಾರನಿಂದಲೇ ಇದೀಗ ದುರಸ್ತಿ ಕಾರ್ಯ ನಡೆಸಲಾಗುತ್ತಿದ್ದು, ಅದಕ್ಕೆ ತಗಲುವ ವೆಚ್ಚವನ್ನು ಗುತ್ತಿಗೆದಾರನೇ ಭರಿಸಬೇಕಿದೆ ಎಂದು ಲೋಕೋಪಯೋಗಿ ಇಲಾಖೆ ಮೂಲಗಳು ಮಾಹಿತಿ ನೀಡಿವೆ. ಕಾಂಕ್ರೀಟ್ ಸ್ಲ್ಯಾಬ್ಗಳನ್ನು ಬದಲಿಸುವ ಸಂದರ್ಭ ಬೆಂಗಳೂರಿನಿಂದ ತಾಂತ್ರಿಕ ತಜ್ಞರು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು, ಲೋಕೋಪಯೋಗಿ ಇಲಾಖೆ ಮತ್ತು ಗುತ್ತಿಗೆದಾರ ಸಂಸ್ಥೆಯ ಇಂಜಿನಿಯರ್ಗಳು ಆಗಮಿಸಲಿದ್ದಾರೆ. ಕಾಂಕ್ರೀಟ್ ಸ್ಲ್ಯಾಬ್ಗಳು ಬಿರುಕು ಬಿಡಲು ಕಾರಣ, ಮಣ್ಣು ಹಾಗೂ ಅಂತರ್ಜಲ ಒತ್ತಡ ಮತ್ತಿತ್ತರ ವಿಚಾರಗಳ ಕುರಿತು ಪರಿಶೀಲನೆ ನಡೆಸಲಿದ್ದಾರೆ. ತಡೆಗೋಡೆ ಕಾಮಗಾರಿ ಕುಸಿಯುವ ಹಂತಕ್ಕೆ ತಲುಪಿದ ಸಂದರ್ಭ ಸ್ಥಳ ಪರಿಶೀಲನೆ ನಡೆಸಿದ್ದ ಮಡಿಕೇರಿ ಕ್ಷೇತ್ರ ಶಾಸಕ ಅಪ್ಪಚ್ಚು ರಂಜನ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು.
ಕಾಮಗಾರಿ ಕಳಪೆಯಾಗಿದ್ದು, ಸೂಕ್ತ ತನಿಖೆ ನಡೆಸಿ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮಡಿಕೇರಿ ಆಗ್ರಹಿಸಿದ್ದರು. ಮಾತ್ರವಲ್ಲದೇ ಈ ಕುರಿತು ಲೋಕೋಪಯೋಗಿ ಇಲಾಖೆಯ ಸರಕಾರದ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದರು. ಕೊಡಗು ಜಿಲ್ಲೆಗೆ ಈ ಕಾಮಗಾರಿ ಹೊಂದಿಕೊಳ್ಳುವುದಿಲ್ಲ. ಹೀಗಾಗಿ ತಡೆಗೋಡೆಯ ತಳಭಾಗದಲ್ಲಿ ದೊಡ್ಡ ಪ್ರಮಾಣದಲ್ಲಿ ಅಡಿಪಾಯ ನಿರ್ಮಿಸಿ ಮೇಲ್ಭಾಗದವರೆಗೆ ಕಾಂಕ್ರೀಟ್ ಗೋಡೆ ನಿರ್ಮಿಸುವಂತೆ ಸಲಹೆ ನೀಡಿದ್ದೆ. ಆ ಸಂದರ್ಭ ಸದ್ರಿ ಕಾಮಗಾರಿಯನ್ನು ದೆಹಲಿಯಿಂದ ಬಂದ ಇಂಜಿನಿಯರ್ ಅವರ ನಿರ್ದೇಶನದಂತೆ ತಡೆಗೋಡೆ ನಿರ್ಮಿಸುತ್ತಿರುವುದಾಗಿ ಇಲ್ಲಿನ ಇಂಜಿನಿಯರ್ ಮತ್ತು ಗುತ್ತಿಗೆದಾರರು ತಿಳಿಸಿದ್ದಲ್ಲದೇ ತಮ್ಮ ಸಲಹೆಯನ್ನು ಪರಿಗಣಿಸಿಲ್ಲ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದರು. ಕಾಮಗಾರಿಯನ್ನು ಕೈಗೊಂಡ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಬೇಕು. ಅಲ್ಲದೇ, ಸಂಬಂಧಿಸಿದ ಇಂಜಿನಿಯರ್ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಲೋಕೋಪಯೋಗಿ ಇಲಾಖೆಯ ಸರಕಾರದ ಕಾರ್ಯದರ್ಶಿಗಳಿಗೆ ಅಪ್ಪಚ್ಚು ರಂಜನ್ ಪತ್ರದ ಮೂಲಕ ಆಗ್ರಹಿಸಿದ್ದರು.
► 7 ಕೋಟಿಯ ತಡೆಗೋಡೆ
ನಗರದ ಜನರಲ್ ತಿಮ್ಮಯ್ಯ ವೃತ್ತದ ಬಳಿಯಲ್ಲಿ, ಮಂಗಳೂರು ರಸ್ತೆಯ ಬಲ ಪಾಶ್ರ್ವದ ಬೆಟ್ಟ ಪ್ರದೇಶದಲ್ಲಿ ಜಿಲ್ಲಾಡಳಿತ ಭವನವಿದೆ. ಎರಡು ವರ್ಷಗಳ ಹಿಂದೆ ಭವನದ ಮುಂಭಾಗದ ಬರೆ ಕುಸಿತ ಉಂಟಾಗಿತ್ತು. ಭವಿಷ್ಯದ ದಿನಗಳಲ್ಲಿ ಬರೆ ಕುಸಿತ ಜಿಲ್ಲಾಡಳಿತ ಭವನಕ್ಕೆ ಸಂಕಷ್ಟ ತಂದೊಡ್ಡುವ ಸಾಧ್ಯತೆಗಳನ್ನರಿತು 7 ಕೋಟಿ ರೂ.ಗಳನ್ನು ವ್ಯಯಿಸಿ, ಹೈದರಾಬಾದ್ ಮೂಲದ ಗುತ್ತಿಗೆದಾರರಿಂದ ಜಪಾನ್ ತಂತ್ರಜ್ಞಾನದಂತೆ ನೂರಾರು ಕಾಂಕ್ರೀಟ್ ಸ್ಲ್ಯಾಬ್ಗಳನ್ನು ಜೋಡಿಸಿ ತಡೆಗೋಡೆಯನ್ನು ನಿರ್ಮಿಸಲಾಗಿದೆ. 60ಕ್ಕೂ ಹೆಚ್ಚು ಅಡಿ ಎತ್ತರದ ಬರೆಗೆ ಅಡ್ಡಲಾಗಿ ಅಂದಾಜು 100 ಮೀಟರ್ಗಳವರೆಗೆ ಕಾಂಕ್ರೀಟ್ ಸ್ಲ್ಯಾಬ್ಗಳನ್ನು ಅಳವಡಿಸಿ, ನಡುವಿನ ಖಾಲಿ ಜಾಗಕ್ಕೆ ಸಾವಿರಾರು ಲೋಡ್ ಮಣ್ಣು ತುಂಬಿಸಲಾಗಿದೆ.