ನ.20ರಂದು ದಾರಿಮೀಸ್ ವಾರ್ಷಿಕೋತ್ಸವ, ಶಂಸುಲ್ ಉಲಮಾ ಆಂಡ್ ನೇರ್ಚೆ

ಬಂಟ್ವಾಳ, ನ.18: ದೇಶದ ಪ್ರಖ್ಯಾತ ಧಾರ್ಮಿಕ ಶಿಕ್ಷಣ ಸಂಸ್ಥೆ ನಂದಿ ದಾರುಸ್ಸಲಾಂ ವಿಶ್ವವಿದ್ಯಾಲಯದ ಪೂರ್ವ ವಿದ್ಯಾರ್ಥಿ ಸಂಘಟನೆಯಾದ ದಾರಿಮೀಸ್ ಅಸೋಸಿಯೇಷನ್ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ 20ನೇ ವಾರ್ಷಿಕೋತ್ಸವದ ಪ್ರಯುಕ್ತ ಶೈಖುನಾ ಶಂಸುಲ್ ಉಲಮಾರ ಆಂಡ್ ನೇರ್ಚೆ ಕಾರ್ಯಕ್ರಮವು ವಿಟ್ಲ ಸಮೀಪದ ಕೆಲಿಂಜ ಜುಮಾ ಮಸೀದಿಯ ವಠಾರದಲ್ಲಿ ನ. 20ರಂದು ಬೆಳಗ್ಗೆ ಗಂಟೆ 8ರಿಂದ ಸಂಜೆ 6ರ ತನಕ ನಡೆಯಲಿದೆ ಎಂದು ಕಾರ್ಯಕ್ರಮದ ಸ್ವಾಗತ ಸಮಿತಿಯ ಉಪಾಧ್ಯಕ್ಷ ಕೆ.ಐ.ಅಬ್ದುಲ್ ಖಾದಿರ್ ದಾರಿಮಿ ಕುಕ್ಕಿಲ ಹೇಳಿದರು.
ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಶುಕ್ರವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮದಲ್ಲಿ ಸತತ 30 ವರ್ಷಗಳ ಕಾಲ ಮುದರ್ರಿಸರಾಗಿ ಸೇವೆ ಸಲ್ಲಿಸುತ್ತಿರುವ ಖ್ಯಾತ ವಿದ್ವಾಂಸ ಕೆ.ಎಸ್.ಹೈದರ್ ದಾರಿಮಿ ಕರಾಯ ಅವರಿಗೆ ಶಂಸುಲ್ ಉಲಮಾ ಅವಾರ್ಡ್ ನೀಡಿ ಗೌರವಿಸಲಾಗುವದು. ಅಲ್ಲದೆ ಜಿಲ್ಲೆಯ ವಿವಿಧ ದರ್ಸ್ ಹಾಗೂ ಅರಬಿಕ್ ಕಾಲೇಜುಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳ ಮುತಅಲ್ಲಿಂ ಫೆಸ್ಟ್ ಕಾರ್ಯಕ್ರಮ ನಡೆಯಲಿದೆ ಎಂದರು.
ಬೆಳಗ್ಗೆ 8 ಗಂಟೆಗೆ ಕೆಲಿಂಜ ಜುಮಾ ಮಸೀದಿಯ ಅಧ್ಯಕ್ಷ ಅಬ್ದುಲ್ ಕರೀಂ ಕಂಪದಬೈಲು ಅವರು ಧ್ವಜಾರೋಹಣ ಮಾಡಲಿದ್ದು, 8:30ಕ್ಕೆ ದಾರಿಮೀಸ್ ಜಿಲ್ಲಾಧ್ಯಕ್ಷ ಕೆ.ಬಿ.ಅಬ್ದುಲ್ ಖಾದರ್ ದಾರಿಮಿ ಕೊಡುಂಗಾಯಿ ಅವರ ಅಧ್ಯಕ್ಷತೆಯಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದೆ ಎಂದು ತಿಳಿಸಿದರು.
ಲುಹರ್ ನಮಾಜಿನ ಬಳಿಕ ಸಮಸ್ತ ಕರ್ನಾಟಕ ಮುಶಾವರದ ಕೋಶಾಧಿಕಾರಿ ಸಯ್ಯಿದ್ ಝೈನುಲ್ ಆಬೀದೀನ್ ಜಿಫ್ರೀ ತಂಙಳ್ ಬೆಳ್ತಂಗಡಿ ಅವರ ನೇತೃತ್ವದಲ್ಲಿ ಶಂಸುಲ್ ಉಲಮಾ ಮೌಲಿದ್ ನಡೆಯಲಿದ್ದು ಸಂಜೆ 4 ಗಂಟೆಗೆ ಕಾರ್ಯಕ್ರಮದ ಸ್ವಾಗತ ಸಮಿತಿಯ ಅಧ್ಯಕ್ಷ ಒಮಾನ್ ಅಬೂಬಕರ್ ಸಿದ್ದೀಕ್ ದಾರಿಮಿ ಮೂಡಬಿದ್ರೆ ಅವರ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ ಎಂದು ಹೇಳಿದರು.
ದಾರಿಮಿ ಉಲಮಾ ಒಕ್ಕೂಟದ ರಾಜ್ಯಾಧ್ಯಕ್ಷ ಯು.ಕೆ.ಅಬ್ದುಲ್ ಅಝೀಝ್ ದಾರಿಮಿ ಚೊಕ್ಕಬೆಟ್ಟು ಅವರು ಮುಖ್ಯ ಪ್ರಭಾಷಣ ಮಾಡಲಿದ್ದು, ಸಮಸ್ತ ಕೇಂದ್ರ ಮುಶಾವರದ ಸದಸ್ಯರಾಗಿ ಆಯ್ಕೆಗೊಂಡ ಕೆ.ಎಂ.ಉಸ್ಮಾನುಲ್ ಫೈಝಿ ತೋಡಾರು ಹಾಗೂ ಜಂಇಯ್ಯತುಲ್ ಖುತಬಾದ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದ ಅಬ್ಬಾಸ್ ದಾರಿಮಿ ಕೆಲಿಂಜರವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಗುವುದು ಎಂದು ಮಾಹಿತಿ ನೀಡಿದರು.
ಸಯ್ಯಿದ್ ಅಮೀರ್ ತಂಙಳ್ ಕಿನ್ಯ, ಎಸ್.ಬಿ.ಮುಹಮ್ಮದ್ ದಾರಿಮಿ, ಕೆ.ಆರ್.ಹುಸೈನ್ ದಾರಿಮಿ ರೆಂಜಲಾಡಿ, ಕೆ.ಎಲ್.ಉಮರ್ ದಾರಿಮಿ ಪಟ್ಟೋರಿ, ಖಾಸಿಂ ದಾರಿಮಿ ಸವಣೂರು, ತಬೂಕು ಅಬ್ದುರ್ರಹ್ಮಾನ್ ದಾರಿಮಿ, ಮುಹಮ್ಮದ್ ಹನೀಫ್ ದಾರಿಮಿ ಸವಣೂರು, ರಫೀಕ್ ಹುದವಿ ಕೋಲಾರ, ಅನೀಸ್ ಕೌಸರಿ ಮುಂತಾದವರು ಭಾಷಣ ಮಾಡಲಿದ್ದಾರೆ. ಹಾಗೂ ಜಿಲ್ಲೆಯ ಪ್ರಮುಖ ಉಲಮಾ ಉಮರಾಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.
ಸ್ವಾಗತ ಸಮಿತಿಯ ಪ್ರಮುಖರಾದ ಅಬ್ದುಲ್ ಮಜೀದ್ ದಾರಿಮಿ, ಅಬ್ದುಲ್ ಕರೀಂ ದಾರಿಮಿ ಕುಂಬ್ರ, ಖಾಸಿಂ ದಾರಿಮಿ ಕಿನ್ಯ, ಅಬ್ದುಲ್ ಅಝೀಝ್ ದಾರಿಮಿ ಕೊಡಾಜೆಯವರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.