2047ರ ಹೊತ್ತಿಗೆ ಭಾರತ 30 ಟ್ರಿಲಿಯನ್ ಡಾಲರ್ ಆರ್ಥಿಕತೆ: ಪಿಯೂಷ್ ಗೋಯಲ್
ಬೆಂಗಳೂರು, ನ.18: ದೇಶದ ತಂತ್ರಜ್ಞಾನದ ರಾಜಧಾನಿಯಾಗಿರುವ ಬೆಂಗಳೂರು ಸಹಭಾಗಿತ್ವ, ಸಹಕಾರ ಮತ್ತು ಸ್ಪರ್ಧೆಗಳಿಂದ ಜಾಗತಿಕ ಮಟ್ಟದಲ್ಲಿ ವಿರಾಜಮಾನವಾಗಿದೆ. ಭಾರತವು ಮುಂದಿನ 25 ವರ್ಷಗಳಲ್ಲಿ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲಿದ್ದು, 30 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಿ ಹೊರಹೊಮ್ಮಲಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಹೇಳಿದ್ದಾರೆ.
ಶುಕ್ರವಾರ ಬೆಂಗಳೂರು ತಂತ್ರಜ್ಞಾನ ಸಮಾವೇಶ ಸಮಾರೋಪದಲ್ಲಿ ಮಾತನಾಡಿದ ಅವರು, ಕೇಂದ್ರ ಸರಕಾರವು ಸಣ್ಣಪುಟ್ಟ ವ್ಯಾಪಾರಿಗಳಿಗೂ ಸಮಾನ ಅವಕಾಶ ಕಲ್ಪಿಸುವ ಉದ್ದೇಶದಿಂದ ಓಪನ್ ಡೇಟಾ ಇ-ಕಾಮರ್ಸ್ ವ್ಯವಸ್ಥೆಗೆ ಚಾಲನೆ ನೀಡಿದ್ದು, ಇದೂ ಸಹ ಬೆಂಗಳೂರಿನಿಂದಲೇ ಆರಂಭವಾಗಬೇಕು ಎಂದು ಆಶಿಸಿದರು.
ಬೆಂಗಳೂರಿನಲ್ಲಿ ವಾರದ ಹಿಂದಷ್ಟೇ ನಾಡಪ್ರಭು ಕೆಂಪೇಗೌಡರ 'ಪ್ರಗತಿಯ ಪ್ರತಿಮೆ' ಲೋಕಾರ್ಪಣೆಗೊಂಡಿದೆ. ಇದಕ್ಕೆ ತಕ್ಕಂತೆ ಬೆಂಗಳೂರು ನಾಗಾಲೋಟದಿಂದ ಮುನ್ನಡೆಯುತ್ತಿದೆ ಎಂದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, "ಬೆಂಗಳೂರು ನಗರವು ಇನ್ನು 5-10 ವರ್ಷಗಳಲ್ಲಿ ದೇಶದ ಆರ್ಥಿಕ ರಾಜಧಾನಿಯಾಗಿ ಹೊರಹೊಮ್ಮಲಿದೆ. ಇಲ್ಲಿ ಪರಿಕಲ್ಪನೆ ಮತ್ತು ಅದರ ಸಾಕಾರಗಳ ನಡುವೆ ಯಾವುದೇ ಅಡೆತಡೆಗಳಿಲ್ಲ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಐಟಿ-ಬಿಟಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇ.ವಿ.ರಮಣ ರೆಡ್ಡಿ, ನಿರ್ದೆಶಕಿ ಮೀನಾ ನಾಗರಾಜ್, ಸ್ಟಾರ್ಟಪ್ ವಿಷನ್ ಗ್ರೂಪ್ ಅಧ್ಯಕ್ಷ ಪ್ರಶಾಂತ್ ಪ್ರಕಾಶ್ ಉಪಸ್ಥಿತರಿದ್ದರು.
12 ಒಡಂಬಡಿಕೆಗಳಿಗೆ ಅಂಕಿತ, 32 ದೇಶಗಳು ಭಾಗಿ: ಡಾ.ಅಶ್ವಥ್ ನಾರಾಯಣ್
ಮೂರು ದಿನಗಳ ಟೆಕ್ ಸಮ್ಮಿಟ್‍ನಲ್ಲಿ ಒಟ್ಟು 32 ದೇಶಗಳು ಪಾಲ್ಗೊಂಡಿದ್ದ ಸಮಾವೇಶದಲ್ಲಿ 4.52 ಲಕ್ಷ ಜನ ಸಕ್ರಿಯವಾಗಿ ಪಾಲ್ಗೊಂಡಿದ್ದು, ವಿವಿಧ ಸಾಮಾಜಿಕ ಮಾಧ್ಯಮಗಳ ಮೂಲಕ 4.99 ಕೋಟಿ ಜನರನ್ನು ತಲುಪಿದೆ. ಪ್ರದರ್ಶನ ಮಳಿಗೆಗಳಿಗೆ 50 ಸಾವಿರ ಜನರು ಭೇಟಿ ನೀಡಿದ್ದು, 26 ಸಾವಿರ ನೋಂದಾಯಿತ ಪ್ರತಿನಿಧಿಗಳು ಪಾಲ್ಗೊಂಡಿದ್ದರು. ಜತೆಗೆ ವಿವಿಧ ನವೋದ್ಯಮಗಳ 28 ನೂತನ ಉತ್ಪನ್ನಗಳನ್ನು ಬಿಡುಗಡೆ ಮಾಡಲಾಗಿದೆ. ಮೂರು ದೇಶಗಳ ಉನ್ನತ ಮಟ್ಟದ ಸಚಿವರ ನಿಯೋಗಗಳು ಮತ್ತು ಒಂಬತ್ತು ರಾಷ್ಟ್ರಗಳ ಉನ್ನತ ನಿಯೋಗಗಳು ಸಮಾವೇಶದಲ್ಲಿ ರಾಜ್ಯ ಸರಕಾರದೊಂದಿಗೆ ಮಾತುಕತೆ ನಡೆಸಿದ್ದು, ಹೂಡಿಕೆಗೆ ಆಸಕ್ತಿ ವ್ಯಕ್ತಪಡಿಸಿವೆ. ಇದಲ್ಲದೆ, ಒಟ್ಟು 12 ಒಡಂಬಡಿಕೆಗಳಿಗೆ ಸಮಾವೇಶದಲ್ಲಿ ಅಂಕಿತ ಹಾಕಲಾಗಿದೆ ಎಂದು ಐಟಿ-ಬಿಟಿ ಸಚಿವ ಡಾ.ಅಶ್ವಥ್ ನಾರಾಯಣ್ ಹೇಳಿದ್ದಾರೆ.







