ಚಿಲುಮೆ ಸಂಸ್ಥೆ ಮತದಾರರ ಮಾಹಿತಿ ಕಳವು ಪ್ರಕರಣದಲ್ಲಿ ಮುಖ್ಯಮಂತ್ರಿಯೇ ಕಿಂಗ್‍ಪಿನ್: ಸಿದ್ದರಾಮಯ್ಯ
ಬೆಂಗಳೂರು: ಚಿಲುಮೆ (Chilume) ಸಂಸ್ಥೆ ಮತದಾರರ ಮಾಹಿತಿ ಕಳವು ಮಾಡಿರುವ ಆರೋಪ ಪ್ರಕರಣದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರೇ ಕಿಂಗ್‍ಪಿನ್ ಆಗಿದ್ದು, ಈ ಕೂಡಲೇ ಅವರು ರಾಜೀನಾಮೆ ನೀಡಲಿ ಎಂದು ವಿಧಾನಸಭೆಯ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಆಗ್ರಹಿಸಿದ್ದಾರೆ.
ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರು ಉಸ್ತುವಾರಿ ಸಚಿವರಾಗಿದ್ದುಕೊಂಡು ಇಂಥದ್ದೊಂದು ಅಕ್ರಮಕ್ಕೆ ಕಾರಣವಾಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ತಮ್ಮ ಹುದ್ದೆಯಲ್ಲಿ ಮುಂದುವರೆಯುವ ನೈತಿಕತೆ ಇಲ್ಲ. ಅಲ್ಲದೆ, ಹಗರಣದಲ್ಲಿ ಮುಖ್ಯಮಂತ್ರಿಯೇ ಕಿಂಗ್‍ಪಿನ್ ಎಂದು ಟೀಕಿಸಿದರು.
ಚುನಾವಣಾ ಆಯೋಗಕ್ಕೆ ದೂರು ನೀಡಿ, ನ್ಯಾಯಾಂಗ ತನಿಖೆಗೆ ನೀವೆ ಒಪ್ಪಿಸಬಹುದು ಎಂದು ಅವರಿಗೆ ಒತ್ತಾಯ ಮಾಡಿದ್ದೇವೆ. ಅದಕ್ಕವರು ನಾನು ಕೇಂದ್ರ ಚುನಾವಣಾ ಆಯೋಗದವರ ಜೊತೆ ಮಾತನಾಡಿ ಮತ್ತೆ ನಿಮ್ಮನ್ನು ಸಂಪರ್ಕ ಮಾಡುತ್ತೇನೆ ಎಂದಿದ್ದಾರೆ. ರಾಜ್ಯ ಚುನಾವಣಾ ಆಯೋಗ ನಮ್ಮ ಮನವಿಗೆ ಸೂಕ್ತ ಸ್ಪಂದನೆ ನೀಡದಿದ್ದರೆ ಮುಂದೆ ಕೇಂದ್ರ ಚುನಾವಣಾ ಆಯೋಗದ ಬಳಿ ಹೋಗುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದರು.
ಅಮೆರಿಕಾದಲ್ಲಿ ವಾಟರ್ ಗೇಟ್ ಪ್ರಕರಣ ಎಂದು ಕರೆಯುತ್ತಿದ್ದೆವು, ಅದೇ ರೀತಿ ಇದು ವೋಟರ್ ಗೇಟ್ ಪ್ರಕರಣ. ಜಗತ್ತಿನಲ್ಲಿ ಇಂತಹ ಪ್ರಕರಣಗಳು ನಡೆಯುವುದು ಬಹಳ ಅಪರೂಪ, ನಮ್ಮ ರಾಜ್ಯದಲ್ಲಿ ನಡೆದಿದೆ. ಈ ಹಗರಣದಲ್ಲಿ ನೇರವಾಗಿ ಮುಖ್ಯಮಂತ್ರಿಗಳು ಶಾಮೀಲಾಗಿದ್ದಾರೆ. ಅವರೇ ಪ್ರಮುಖ ಅಪರಾಧಿ ಎಂದು ಅವರು ಆರೋಪಿಸಿದರು.
ಜನರ ಮತದಾನದ ಹಕ್ಕನ್ನು ಸರಕಾರ ದುರುಪಯೋಗ ಮಾಡಿಕೊಂಡಿರುವುದು ಒಂದು ಗಂಭೀರ ಅಪರಾಧ. ಚುನಾವಣಾ ಆಯೋಗ ಒಂದು ಸಂವಿಧಾನಬದ್ಧವಾದ ಸಂಸ್ಥೆ, ಇದು ನ್ಯಾಯಯುತವಾಗಿ ಮತ್ತು ನಿಷ್ಪಕ್ಷಪಾತವಾಗಿ ಚುನಾವಣೆಯನ್ನು ನಡೆಸಬೇಕು. ಚುನಾವಣೆಯಲ್ಲಿ ಅವ್ಯವಹಾರಗಳು ನಡೆದರೆ ಅದು ಪ್ರಜಾ ಪ್ರತಿನಿಧಿಕ ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆ ಪ್ರಕಾರ ಶಿಕ್ಷಾರ್ಹ ಅಪರಾಧ ಎಂದು ಅವರು ಹೇಳಿದರು.