ಕೊರಿಯದ ಜೊತೆಗಿನ ಸೇನಾ ಕವಾಯತಿನಲ್ಲಿ ಅಮೆರಿಕದ ಬಿ-18 ಬಾಂಬರ್ ವಿಮಾನ ಹಾರಾಟ
ಉತ್ತರಕೊರಿಯದ ಖಂಡಾಂತರ ಕ್ಷಿಪಣಿ ಪರೀಕ್ಷೆಗೆ ಪ್ರತಿಕ್ರಿಯೆ

ಸೋಲ್,ನ.19: ಉತ್ತರ ಕೊರಿಯ ಶುಕ್ರವಾರ ಖಂಡಾಂತರ ಕ್ಷಿಪಣಿಯ ಪ್ರಾಯೋಗಿಕ ಪರೀಕ್ಷೆಯನ್ನು ನಡೆಸಿದ ಮರುದಿನವೇ ಅಮೆರಿಕವು ತನ್ನ ಶಕ್ತಿಶಾಲಿ ‘ ಬಿ-18 ಬಾಂಬರ್ ’ ಯುದ್ಧವಿಮಾನವನ್ನು ಕೊರಿಯ ಪರ್ಯಾಯದ್ವೀಪದಲ್ಲಿ ಮರು ನಿಯೋಜಿಸಿದೆ.
‘‘ಕೊರಿಯ ಪರ್ಯಾಯದ್ವೀಪದಲ್ಲಿ ಅಮೆರಿಕ ವಾಯುಪಡೆಯ ಬಿ-1ಬಿ ವ್ಯೆಹಾತ್ಮಕ ಬಾಂಬರ್ನ ಮರುನಿಯೋಜನೆಯೊಂದಿಗೆ ದಕ್ಷಿಣಕೊರಿಯ ಹಾಗೂ ಅಮೆರಿಕವು ಶನಿವಾರ ಜಂಟಿಯಾಗಿ ವಾಯುಸೇನಾ ಕವಾಯತನ್ನು ನಡೆಸಿವೆ’’ ಎಂದು ದಕ್ಷಿಣ ಕೊರಿಯದ ಸೇನಾಪಡೆಗಳ ಜಂಟಿ ವರಿಷ್ಠ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.
ಎಫ್-35 ಸ್ಟೀಲ್ತ್ ಫೈಟರ್ ವಿಮಾನ ಸೇರಿದಂತೆ ಅಮೆರಿಕ ಹಾಗೂ ದಕ್ಷಿಣ ಕೊರಿಯದ ವಾಯುಪಡೆಗಳ ಅತ್ಯಾಧುನಿಕ ಜೆಟ್ವಿಮಾನಗಳು ಕೂಡಾ ಕವಾಯತಿಲ್ಲಿ ಪಾಲ್ಗೊಂಡಿವೆ ಎಂದು ಅದು ಹೇಳಿಕೆಯೊಂದರಲ್ಲಿ ತಿಳಿಸಿದೆ.
ಅಮೆರಿಕ ಹಾಗೂ ಉತ್ತರ ಕೊರಿಯದ ಜಂಟಿ ವಾಯುಪಡೆ ಕವಾಯುತಿನ ಬಗ್ಗೆ ಉತ್ತರ ಕೊರಿಯವು ತೀವ್ರ ವಿರೋಧವನ್ನು ವ್ಯಕ್ತಪಡಿಸುತ್ತಲೇ ಬಂದಿದೆ. ಉತ್ತರ ಕೊರಿಯವು ವಾಯುಪಡೆಯು ಅತ್ಯಾಧುನಿಕ ತಂತ್ರಜ್ಞಾನದ ಜೆಟ್ಗಳು ಹಾಗೂ ಸಮರ್ಪಕವಾಗಿ ತರಬೇತಿ ಪಡೆದ ಪೈಲಟ್ಗಳ ಕೊರತೆಯನ್ನು ಹೊಂದಿದ್ದು, ಅತ್ಯಂತ ದುರ್ಬಲವಾಗಿರುವುದೇ ಅದರ ಆತಂಕಕ್ಕೆ ಕಾರಣವೆಂದು ತಜ್ಞರ ಅಭಿಪ್ರಾಯವಾಗಿದೆ.
ಅಮೆರಿಕದ ಬಿ-1ಬಿ ಬಾಂಬರ್ ಯುದ್ಧವಿಮಾನವು ಅಣ್ವಸ್ತ್ರ ವಾಹಕವಲ್ಲದಿದ್ದರೂ,ಅದು ಅಮೆರಿಕದ ದೀರ್ಘವ್ಯಾಪ್ತಿಯ ಬಾಂಬರ್ ವಿಮಾನ ಪಡೆಯ ಬೆನ್ನೆಲುಬಾಗಿದೆ’ . ಜಗತ್ತಿನ ಯಾವ ಮೂಲೆಯ ಮೇಲೂ ದಾಳಿ ನಡೆಸಬಲ್ಲ ಸಾಮರ್ಥ್ಯವನ್ನು ಅದು ಹೊಂದಿದೆ ಎನ್ನಲಾಗಿದೆ.
ಉತ್ತರ ಕೊರಿಯವು ಹಿಂದೆ ಸರಿಯದಂತಹ ಅಣ್ವಸ್ತ್ರ ಶಕ್ತ ರಾಷ್ಟ್ರವಾಗಿದೆ ಎಂದು ಉ.ಕೊರಿಯದ ಸರ್ವೋನ್ನತ ನಾಯಕ ಕಿಮ್ ಜೊಂಗ್ ಉನ್ ಕಳೆದ ಸೆಪ್ಟೆಂಬರ್ನಲ್ಲಿ ಘೋಷಿಸಿದ್ದರು. ಉತ್ತರ ಕೊರಿಯದ ದಾಳಿ ಬೆದರಿಕೆಯನ್ನು ಎದುರಿಸುತ್ತಿರುವ ದಕ್ಷಿಣ ಕೊರಿಯದ ಜೊತೆ ಅಮೆರಿಕವು ಪ್ರಾದೇಶಿಕ ಭದ್ರತಾ ಸಹಕಾರವನ್ನು ಚುರುಕುಗೊಳಿಸಿದೆ. ಈ ತಿಂಗಳು ದಕ್ಷಿಣಕೊರಿಯ ಜೊತೆ ‘ವಿಜಿಲೆಂಟ್ ಸ್ಟಾರ್ಮ್’ ಎಂಬ ಬೃಹತ್ ಜಂಟಿ ವಾಯುಪಡೆ ಕವಾಯತನ್ನು ಅಮೆರಿಕ ಆಯೋಜಿಸಿದೆ.