ಅಮೆರಿಕದ ಬೆದರಿಕೆ ಎದುರಿಸಲು ಅಣ್ವಸ್ತ್ರ ಬಳಕೆಗೂ ಸಿದ್ಧ: ಕಿಮ್ ಜೊಂಗ್

ವೊಂಗ್ಯಾಂಗ್,ನ.19: ಉತ್ತರ ಕೊರಿಯವು ಖಂಡಾಂತರ ಕ್ಷಿಪಣಿಯ ಪರೀಕ್ಷಾ ಉಡಾವಣೆಯ ಬಳಿಕ ಅಮೆರಿಕ ಒಡ್ಡಿರುವ ಬೆದರಿಕೆಯನ್ನು ಎದುರಿಸಲು ಅಣ್ವಸ್ತ್ರವನ್ನು ಪ್ರಯೋಗಕ್ಕೂ ಹಿಂಜರಿಯುವುದಿಲ್ಲವೆಂದು ಉತ್ತರ ಕೊರಿಯ ನಾಯಕ ಕಿಮ್ ಜೊಂಗ್ ಉನ್ ಶನಿವಾರ ಎಚ್ಚರಿಕೆ ನೀಡಿದ್ದಾರೆ. ‘‘ ಒಂದು ವೇಳೆ ಶತ್ರುಗಳು ಬೆದರಿಕೆ ಒಡ್ಡುವುದನ್ನು ಮುಂದುವರಿಸಿದಲ್ಲಿ ನಮ್ಮ ಪಕ್ಷ ಹಾಗೂ ಸರಕಾರವು ಕಠಿಣವಾಗಿ ಅಣ್ವಸ್ತ್ರಗಳೊಂದಿಗೆ ಸಂಪೂರ್ಣ ಸಂಘರ್ಷದೊಂದಿಗೆ ದೃಢವಾಗಿ ಪ್ರತಿಕ್ರಿಯಿಸಲಿದೆ’’ ಎಂದು ಕಿಮ್ ಜೊಂಗ್ ಉನ್ ಘೋಷಿಸಿದ್ದಾರೆಂಂದು ವ್ಯೊಂಗ್ಯಾಂಗ್ನ ಅಧಿಕೃತ ಸುದ್ದಿಸಂಸ್ಥೆ ಕೆಸಿಎನ್ಎ ವರದಿ ಮಾಡಿದೆ.
ಈ ಮಧ್ಯೆ ಉತ್ತರ ಕೊರಿಯದ ಖಂಡಾಂತರ ಕ್ಷಿಪಣಿ (ಐಸಿಬಿಎಂ)ಯ ಪ್ರಾಯೋಗಿಕ ಪರೀಕ್ಷೆಯನ್ನು ನಡೆಸಿರುವ ಹಿನ್ನೆಲೆಯಲ್ಲಿ ಪ್ರದೇಶದಲ್ಲಿ ಉದ್ವಿಗ್ನ ಸ್ಥಿತಿಯುಂಟಾಗಿರುವ ಬಗ್ಗೆ ಚರ್ಚಿಸಲು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ತುರ್ತು ಸಭೆಗೆ ಸಿದ್ಧತೆ ನಡೆಸಿದೆ.
ಕೊರಿಯದ ನೂತನ ಕ್ಷಿಪಣಿ ಉಡಾವಣೆಯ ಬಗ್ಗೆ ಚರ್ಚಿಸಲು ಜಪಾನ್, ದಕ್ಷಿಣ ಕೊರಿಯ ಹಾಗೂ ಅಮೆರಿಕದ ಆಗ್ರಹದ ಮೇರೆಗೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ತುರ್ತುಸಭೆಯನ್ನು ಕರೆದಿದೆ.
ಉತ್ತರ ಕೊರಿಯವು ಶುಕ್ರವಾರ 15 ಸಾವಿರ ಕಿ.ಮೀ.ವರೆಗೆ ಪ್ರಯಾಣಿಸುವ ಸಾಮರ್ಥ್ಯ ಹೊಂದಿರುವಸ ಹ್ವಾಸೊಂಗ್-17 ಖಂಡಾಂತರ ಕ್ಷಿಪಣಿಯ ಪ್ರಾಯೋಗಿಕ ಪರೀಕ್ಷೆ ನಡೆಸಿತ್ತು. ಉತ್ತರ ಕೊರಿಯದ ಈ ನಡೆಗೆ ಭೀಕರವಾದ ಮಿಲಿಟರಿ ‘ಪ್ರತಿಕ್ರಿಯೆ’ ನೀಡಲಾಗುವುದೆಂದು ಅಮೆರಿಕ ಎಚ್ಚರಿಕೆ ನೀಡಿತ್ತು.