ಕೊರೋನ ಉಲ್ಬಣ: ಬೀಜಿಂಗ್ ನಲ್ಲಿ ಸೆಮಿ ಲಾಕ್ಡೌನ್

ಬೀಜಿಂಗ್,ನ.19: ಚೀನಾದಲ್ಲಿ ಕೊರೋನಾ ಸಾಂಕ್ರಾಮಿಕದ ಹಾವಳಿ ಮತ್ತೆ ಉಲ್ಬಣಿಸತೊಡಗಿದ್ದು, ಶುಕ್ರವಾರ 25 ಸಾವಿರಕ್ಕೂ ಅಧಿಕ ಸೋಂಕಿನ ಪ್ರಕರಣಗಳು ವರದಿಯಾಗಿವೆ. ರಾಜಧಾನಿ ಬೀಜಿಂಗ್ನಲ್ಲಿ 500ಕ್ಕೂ ಅಧಿಕ ಸೋಂಕಿನ ಪ್ರಕರಣಗಳು ವರದಿಯಾಗಿವೆ. ಈ ಮಧ್ಯೆ ಕೊರೋನ ವೈರಸ್ನ ಹರಡುವಿಕೆಯನ್ನು ತಡೆಯಲು ಬೀಜಿಂಗ್ ನಲ್ಲಿ ಸೆಮಿ ಲಾಕ್ಡೌನ್ ಘೋಷಿಸಲಾಗಿದ್ದು, ಈ ವಾರಾಂತ್ಯದಲ್ಲಿ ಮನೆಯೊಳಗೆ ಉಳಿದುಕೊಳ್ಳುವಂತೆ ಹಾಗೂ ಸೋಂಕು ಪರೀಕ್ಷೆಗೆ ಒಳಗಾಗುವಂತೆ ನಗರಾಡಳಿತದ ಅಧಿಕಾರಿಗಳು ನಿವಾಸಿಗಳಿಗೆ ಸೂಚನೆ ನೀಡಿದ್ದಾರೆ.
ಬೀಜಿಂಗ್ನ ಬಹುತೇಕ ನಿವಾಸಿಗಳು ಮನೆಯಲ್ಲಿಯೇ ಉಳಿದುಕೊಂಡಿದ್ದರಿಂದ ಶನಿವಾರ ರಾಜಧಾನಿ ಬೀಜಿಂಗ್ನ ಪ್ರಮುಖ ರಸ್ತೆಗಳು ಜನಸಂಚಾರವಿಲ್ಲದೆ ಬಿಕೋ ಎನ್ನುತ್ತಿದ್ದವು. ವಾರಾಂತ್ಯದಲ್ಲಿ ಅನಗತ್ಯ ಪ್ರಯಾಣಗಳನ್ನು ಮಾಡದಂತೆ ನಗರಾಡಳಿತವು ಜನರಿಗೆ ಸಲಹೆ ನೀಡಿದೆ.
ಬೀಜಿಂಗ್ನ ಅತ್ಯಧಿಕ ಜನಸಂಖ್ಯೆಯ ಪ್ರದೇಶವಾದ ಚಾವೊಯಾಂಗ್ ಅತ್ಯಂತ ತೀವ್ರವಾಗಿ ಕೋವಿಡ್ ಸೋಂಕಿನಿಂದ ಬಾಧಿತವಾಗಿದ್ದು, ವಾರಾಂತ್ಯದಲ್ಲಿ ಮನೆಯಿಂದ ಹೊರಬಾರದಂತೆ ಅಧಿಕಾರಿಗಳು ತಾಕೀತು ಮಾಡಿದ್ದಾರೆ.
ಬೀಜಿಂಗ್ನಲ್ಲಿ ಶುಕ್ರವಾರ 515 ಹಾಗೂ ದೇಶಾದ್ಯಂತ 25 ಸಾವಿರ ಕೋವಿಡ್ ಸೋಂಕಿನ ಪ್ರಕರಣಗಳು ದಾಖಲಾಗಿವೆ.





