ಭಾರತಕ್ಕೆ ಭದ್ರತಾ ಮಂಡಳಿಯಲ್ಲಿ ಖಾಯಂ ಸ್ಥಾನ ನೀಡಲು ಫ್ರಾನ್ಸ್ ಬೆಂಬಲ

ವಿಶ್ವಸಂಸ್ಥೆ,ನ. 19: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತ, ಜರ್ಮನಿ, ಬ್ರೆಝಿಲ್ ಹಾಗೂ ಜಪಾನ್ ದೇಶಗಳನ್ನು ಖಾಯಂ ಸದಸ್ಯ ರಾಷ್ಟ್ರಗಳಾಗಿ ಸೇರ್ಪಡೆಗೊಳಿಸುವುದಕ್ಕೆ ಫ್ರಾನ್ಸ್ ಶುಕ್ರವಾರ ತನ್ನ ಬೆಂಬಲವನ್ನು ವ್ಯಕ್ತಪಡಿಸಿದೆ.
ಜಾಗತಿಕರಂಗದಲ್ಲಿ ಮೂಡಿಬರುತ್ತಿರುವ ಹೊಸ ಶಕ್ತಿಗಳು ಅತ್ಯಂತ ಪ್ರಭಾವಶಾಲಿಯಾದ ಭದ್ರತಾ ಮಂಡಳಿಯಲ್ಲಿ ಹೊಣೆಗಾರಿಕೆಯನ್ನು ವಹಿಸಲು ಇಚ್ಛಿಸುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು ಈ ಕ್ರಮವನ್ನು ಕೈಗೊಳ್ಳಬೇಕೆಂದು ಅದು ಆಗ್ರಹಿಸಿದೆ.
‘‘ಭದ್ರತಾ ಮಂಡಳಿ ವಿಸ್ತರಣೆಯ ಬಗ್ಗೆ ಫ್ರಾನ್ಸ್ನ ನಿಲುವು ಸ್ಥಿರ ಹಾಗೂ ಸುಪರಿಚಿತವಾದುದಾಗಿದೆ. ಇಂದಿನ ಜಗತ್ತಿನಲ್ಲಿ ಭದ್ರತಾ ಮಂಡಳಿಯು ಹೆಚ್ಚು ಪ್ರಾತಿನಿಧಿಕವಾಗಿರಬೇಕೆಂದು ನಾವು ಬಯಸುತ್ತಿದ್ದೇವೆ. ಅದು ತನ್ನ ಅಧಿಕಾರವನ್ನು ಇನ್ನಷ್ಟು ಬಲಪಡಿಸಬೇಕಾಗಿದೆ ಹಾಗೂ ಪರಿಣಾಮಕಾರಿಯಾಗಬೇಕಾಗಿದೆ’’ ಎಂದು ವಿಶ್ವಸಂಸ್ಥೆಯಲ್ಲಿ ಫ್ರಾನ್ಸ್ನ ಉಪ ಖಾಯಂ ಪ್ರತಿನಿಧಿಯಾದ ನತಾಲಿ ಬ್ರಾಡ್ಹರ್ಸ್ಟ್ ತಿಳಿಸಿದ್ದಾರೆ.
ಭದ್ರತಾ ಮಂಡಳಿಯಲ್ಲಿ ಫ್ರಾನ್ಸ್ ಖಾಯಂ ಸದಸ್ಯ ರಾಷ್ಟ್ರವಾಗಿದೆ. ಭದ್ರತಾ ಮಂಡಳಿಯ ಕಾರ್ಯಕಾರಿ ಹಾಗೂ ನಿರ್ವಹಣಾ ಸ್ವರೂಪವನ್ನು ಕಾಪಾಡಬೇಕಾದರೆ, ವಿಸ್ತೃತ ಮಂಡಳಿಯಲ್ಲಿ 25 ಸದಸ್ಯರಿರಬೇಕೆಂದು ಫ್ರಾನ್ಸ್ ಬಯಸುತ್ತದೆ ಎಂದು ನತಾಲಿ ಹೇಳಿದ್ದಾರೆ.
ಭದ್ರತಾ ಮಂಡಳಿಯ ಖಾಯಂ ಸದಸ್ಯ ಬಳಗದಲ್ಲಿ ಆಫ್ರಿಕನ್ ರಾಷ್ಟ್ರಗಳ ಬಲವಾದ ಉಪಸ್ಥಿತಿಯನ್ನು ಕೂಡಾ ಕಾಣಲು ಫ್ರಾನ್ಸ್ ಬಯಸಿದೆಯೆಂದು ನತಾಲಿ ಹೇಳಿದ್ದಾರೆ.





