ಇರಾನ್ ಗಲಭೆ: ಭದ್ರತಾ ಪಡೆಗಳಿಂದ ಮೂವರು ಪ್ರತಿಭಟನಕಾರರ ಹತ್ಯೆ

ಟೆಹರಾನ್,ನ.19: ಇರಾನ್ ನ ಭದ್ರತಾಪಡೆಗಳು ಪಶ್ಚಿಮ ಖುರ್ದಿಸ್ತಾನ ಪ್ರಾಂತದಲ್ಲಿ ಶನಿವಾರ ಮೂವರು ಸರಕಾರಿ ವಿರೋಧಿ ಪ್ರತಿಭಟನಕಾರರನ್ನು ಗುಂಡಿಕ್ಕಿ ಹತ್ಯೆಗೈದಿರುವುದಾಗಿ ಮಾನವಹಕ್ಕುಗಳ ಸಂಘಟನೆಯೊಂದು ತಿಳಿಸಿದೆ. ಸೆಪ್ಟೆಂಬರ್ 16ರಂದು, 22 ವರ್ಷದ ಯುವತಿ ಮಹ್ಸಾ ಅಮಿನಿ ಅರು ಪೊಲೀಸ್ ಕಸ್ಟಡಿಯಲ್ಲಿ ಸಾವನ್ನಪ್ಪಿದ ಘಟನೆಯ ಬಳಿಕ ಇರಾನ್ನಾದ್ಯಂತ ಸರಕಾರಿ ವಿರೋಧಿ ಪ್ರತಿಭಟನೆಗಳು ಭುಗಿಲೆದ್ದಿವೆ.ಖುರ್ದಿಸ್ತಾನವು ಅಮಿನಿ ಅವರ ತವರು ಪ್ರಾಂತವಾಗಿದೆ.
ಆಡಳಿತ ವಿರೋಧಿ ಪ್ರತಿಭಟನಕಾರರನ್ನು ಸರಕಾರಿ ಪಡೆಗಳು ನಿರ್ದಯವಾಗಿ ದಮನಿಸುತ್ತಿವೆಯೆಂದು ನಾರ್ವೆಯಿಂದ ಕಾರ್ಯಾಚರಿಸುತ್ತಿರುವ ಇರಾನ್ ಮಾನವ ಹಕ್ಕುಗಳ ಸಂಘಟನೆ ಆರೋಪಿಸಿದೆ. ಈ ವರೆಗೆ 342 ಪ್ರತಿಭಟನಕಾರರ ಹತ್ಯೆಯಾಗಿದ್ದು, ಸುಮಾರು ಆರು ಮಂದಿಗೆ ಗಲ್ಲು ಶಿಕ್ಷೆ ವಿಧಿಸಲಾಗಿದೆ ಹಾಗೂ 15 ಸಾವಿರಕ್ಕೂ ಅಧಿಕ ಮಂದಿಯನ್ನು ಬಂಧಿಸಲಾಗಿದೆಯೆಂದು ಅದು ಆರೋಪಿಸಿದೆ.
ಹತ್ಯೆಯಾದ ಪ್ರತಿಭಟನಕಾರರ ಮೃತದೇಹಗಳ ಅಂತಿಮಯಾತ್ರೆಯ ಸಂದರ್ಭ ಹಿಂಸಾಚಾರ ಭುಗಿಲೇಳುವುದನ್ನು ತಪ್ಪಿಸಲು ಇರಾನ್ನ ಭದ್ರತಾ ಪಡೆಗಳು ಅವುಗಳನ್ನು ರಹಸ್ಯವಾಗಿ ದಫನ ಮಾಡುತ್ತವೆ ಎಂದು ಮಾನವಹಕ್ಕು ಸಂಸ್ಥೆಗಳು ಆರೋಪಿಸಿವೆ.