ಕಾಪು: ಜಮೀಯ್ಯತುಲ್ ಫಲಾಹ್ ವತಿಯಿಂದ ವಿದ್ಯಾರ್ಥಿ ವೇತನ ವಿತರಣೆ

ಕಾಪು: ಉನ್ನತ ವಿದ್ಯಾಭ್ಯಾಸ ಗಳಿಸಲು ಆರ್ಥಿಕವಾಗಿ ಆಶಕ್ತರಾಗಿದ್ದವರು ಜಮೀಯ್ಯತುಲ್ ಫಲಾಹ್ ಸಂಸ್ಥೆಯಿಂದ ವಿದ್ಯಾರ್ಥಿ ವೇತನ ಪಡೆದು ವಿದ್ಯಾಭ್ಯಾಸ ಮುಂದುವರಿಸಿದ ಕಾರಣ ಹಲವಾರು ಮಂದಿ ಇಂದು ಸಮಾಜದಲ್ಲಿ ಉನ್ನತ ಸ್ಥಾನಮಾನದಲ್ಲಿದ್ದಾರೆ ಎಂದು ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಅಧ್ಯಕ್ಷ ಶಭೀ ಅಹಮದ್ ಕಾಝಿ ಹೇಳಿದ್ದಾರೆ.
ಅವರು ಶನಿವಾರ ಕಾಪು ಸಿಟಿ ಸೆಂಟರ್‌ನಲ್ಲಿರುವ ಜಮೀಯ್ಯತುಲ್ ಫಲಾಹ್ ಕಚೇರಿಯಲ್ಲಿ ನಡೆದ ವಿದ್ಯಾರ್ಥಿ ವೇತನ ವಿತರಿಸುವ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅದೇ ರೀತಿ ಪ್ರತಿಯೊಬ್ಬರೂ ಉತ್ತಮ ವಿದ್ಯಾಭ್ಯಾಸ ಪಡೆದು ತಮ್ಮದೇ ಆದ ಕೊಡುಗೆಯನ್ನು ಸಮಾಜಕ್ಕೆ ನೀಡಬೇಕು ಎಂದರು.
ಮುಖ್ಯ ಅತಿಥಿಯಾಗಿ ಅಶ್ಫಾಕ್ ಅಹಮದ್ ಮೊಹ್ಸಿನ್ ಮುಜಾವರ್ ಮಾತನಾಡಿ, ಇಂದು ವಿದ್ಯಾಭ್ಯಾಸದ ತುಂಬಾ ಅಗತ್ಯವಿದೆ. ತಾವುಗಳು ಉನ್ನತ ವಿದ್ಯಾಭ್ಯಾಸ ಪಡೆದು ಸಮಾಜದಲ್ಲಿ ಗೌರವಾನ್ವಿತ ಹುದ್ದೆಗಳನ್ನು ಪಡೆಯಬೇಕು. ನಿಮ್ಮ ಭವಿಷ್ಯ ಉತ್ತಮವಾಗಲಿ ಎಂದು ಹಾರೈಸಿದರು.
ಈ ವರ್ಷ 1.15 ಲಕ್ಷ ರೂ. ವಿದ್ಯಾರ್ಥಿ ವೇತನಕ್ಕೆ ಮತ್ತು 45 ಸಾವಿರ ರೂ. ಔಷದೋಪಚಾರಕ್ಕೆ ನೀಡಲಾಗುತ್ತದೆ ಎಂದು ಕಾರ್ಯದರ್ಶಿ ಸಾಬೀರ್ ಅಲಿ ಎರ್ಮಾಲ್ ತಿಳಿಸಿದರು.
ಇದೇ ಸಂದರ್ಭದಲ್ಲಿ ಜಮೀಯ್ಯತುಲ್ ಫಲಾಹ್ ಸಂಸ್ಥೆಗೆ ಅಜೀವ ಸದಸ್ಯರಾಗಿ ತಮ್ಮ ಹೆಸರನ್ನು ನೋಂದಾಯಿಸಲಾಯಿತು. ಅನ್ವರ್ ಅಲಿ ಕುರ್ ಆನ್ ಪಠಿಸಿದರು. ಶಬೀ ಅಹಮದ್ ಕಾಝಿ ಸ್ವಾಗತಿಸಿದರು. ಬಷೀರ್ ಅಹಮದ್ ವಂದಿಸಿದರು. ಅನ್ವರ್ ಅಲಿ ಕಾಪು ಕಾರ್ಯಕ್ರಮ ನಿರೂಪಿಸಿದರು.







