ಮಂಗಳೂರು: ಕರಡು ಮತದಾರರ ಪಟ್ಟಿ ಪರಿಶೀಲನೆ, ನೋಂದಣಿ ಅಭಿಯಾನಕ್ಕೆ ಅಧಿಕಾರಿ-ಸಿಬ್ಬಂದಿ ವರ್ಗದ ನಿರ್ಲಕ್ಷ್ಯ; ಆರೋಪ

ಮಂಗಳೂರು, ನ.20: ರಾಜ್ಯ ವಿಧಾನಸಭೆಯ ಚುನಾವಣೆಯ ಹಿನ್ನೆಲೆಯಲ್ಲಿ ಮತದಾರರ ಪಟ್ಟಿ ಪರಿಶೀಲನೆ ಮತ್ತು ನೋಂದಣಿ ಅಭಿಯಾನಕ್ಕೆ ಅಧಿಕಾರಿ ಮತ್ತು ಸಿಬ್ಬಂದಿ ವರ್ಗವು ತೀರಾ ನಿರ್ಲಕ್ಷ್ಯ ತಾಳಿದೆ ಎಂಬ ಆರೋಪ ವ್ಯಕ್ತವಾಗಿದೆ.
ನ.11ರಂದು ಸುದ್ದಿಗೋಷ್ಠಿ ನಡೆಸಿದ್ದ ದ.ಕ. ಜಿಲ್ಲಾಧಿಕಾರಿ ರವಿ ಕುಮಾರ್ ಮತದಾರರ ಪಟ್ಟಿ ಪರಿಷ್ಕರಣೆಗೆ ಸಂಬಂಧಿಸಿದಂತೆ ಡಿಸೆಂಬರ್ 8ರವರೆಗೆ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸ್ವೀಕರಿಸಲಾಗುವುದು. ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಯ ಹಿನ್ನೆಲೆಯಲ್ಲಿ ವಿಶೇಷ ನೋಂದಣಿ ಅಭಿಯಾನವು ನ.12, ನ.20, ಡಿ.3 ಮತ್ತು 4ರಂದು ನಡೆಯಲಿದೆ. 2023ರ ಜನವರಿ 3ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು ತಿಳಿಸಿದ್ದರು.
ಅದರಂತೆ ಮತದಾರರು ಪಟ್ಟಿ ಪರಿಶೀನೆ ಮತ್ತು ನೋಂದಣಿಗೆ ಉತ್ಸುಕರಾದರೂ ಕೂಡ ಅಧಿಕಾರಿ, ಸಿಬ್ಬಂದಿ ವರ್ಗವು ಈ ಬಗ್ಗೆ ತೀರಾ ನಿರ್ಲಕ್ಷ್ಯ ತಾಳಿದೆ ಎಂಬ ದೂರು ಕೇಳಿ ಬಂದಿದೆ.
ಜೆಡಿಎಸ್ ಮುಖಂಡ ನಝೀರ್ ಉಳ್ಳಾಲ್ ಪ್ರತಿಕ್ರಿಯಿಸಿ ಉಳ್ಳಾಲ ತಾಲೂಕಿಗೆ ಸಂಬಂಧಿಸಿದಂತೆ ರವಿವಾರ (ನ.20) ಮುನ್ನೂರು ಗ್ರಾಮ ಹೊರತುಪಡಿಸಿ ಮಿಕ್ಕುಳಿದ ಬಹುತೇಕ ಕಡೆಗಳಲ್ಲಿ ಮತದಾರರ ಪಟ್ಟಿ ಪರಿಶೀಲನೆ, ಹೆಸರು ನೋಂದಣಿಗೆ ವ್ಯವಸ್ಥೆಯನ್ನೇ ಕಲ್ಪಿಸಿರಲಿಲ್ಲ. ಬೆಳಗ್ಗೆ 10:30 ಗಂಟೆಯಾದರೂ ಬಿಎಲ್‌ಒಗಳ ಹಾಜರಾತಿ ಇರಲಿಲ್ಲ. ತಹಶೀಲ್ದಾರ್, ಸಹಾಯಕ ಆಯುಕ್ತರಿಗೆ ಪೋನ್ ಕರೆ ಮಾಡಿದರೂ ಸ್ಪಂದಿಸಲಿಲ್ಲ. ಜಿಲ್ಲಾಧಿಕಾರಿಯ ಕಂಟ್ರೋಲ್ ರೂಂಗೆ ದೂರು ನೀಡಿದ ಬಳಿಕ ಕೆಲವು ಮತಗಟ್ಟೆ ಗಳಲ್ಲಿ ಬಿಎಲ್‌ಒಗಳು ಹಾಜರಾಗಿದ್ದಾರೆ ಎಂದು ತಿಳಿಸಿದ್ದಾರೆ.
ಮಂಗಳೂರು (ಉಳ್ಳಾಲ) ಕ್ಷೇತ್ರದಲ್ಲಿ 15 ಸಾವಿರಕ್ಕೂ ಅಧಿಕ ಮತದಾರರ ಹೆಸರನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಮತದಾರರು ಈ ನಿಟ್ಟಿನಲ್ಲಿ ಪರಿಶೀಲನೆಗೆ ಆಸಕ್ತಿ ವಹಿಸಿದ್ದರೂ ಕೂಡ ಬಿಎಲ್‌ಒಗಳು ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿದ್ದಾರೆ. ಮತದಾರರ ಪಟ್ಟಿ ತಯಾರಿಗೆ ಜಿಲ್ಲಾಡಳಿತ ಸಜ್ಜಾಗಿದ್ದರೂ ಸಿಬ್ಬಂದಿ ವರ್ಗದ ನಿರ್ಲಕ್ಷ್ಯ ಅಚ್ಚರಿ ಮೂಡಿಸಿದೆ. ಹಾಗಾಗಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರಗಿಸಬೇಕು ಎಂದು ನಝೀರ್ ಉಳ್ಳಾಲ್ ಒತ್ತಾಯಿಸಿದ್ದಾರೆ.